

ಕಾಸರಗೋಡು: ತಮ್ಮ ಜೀವನದ ಆಶಯವಾಗಿದ್ದ ಕಾಸರಗೋಡಿನ ವಿಲೀನ ಸಾಧ್ಯವಾಗದಿದ್ದರೂ, ಗಡಿನಾಡಿನಲ್ಲಿ ಕನ್ನಡ ಗಟ್ಟಿಯಾಗಿ ನೆಲೆಯೂರುವಂತೆ ಮಾಡುವಲ್ಲಿ ಕನ್ನಡದ ಕಟ್ಟಾಳು, ನಾಡೋಜ ಡಾ.ಕಯ್ಯರ ಕಿಞಣ್ಣ ರೈ ಅವರ ಶ್ರಮ ಮಹತ್ತರವಾದುದು ಎಂಬುದಾಗಿ ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ತಿಳಿಸಿದ್ದಾರೆ.
ಪೈವಳಿಕೆ ಪಂಚಾಯಿತಿ ಕಯ್ಯರು ಜೋಡುಕಲ್ಲು ಶ್ರೀ ರಾಮಕೃಷ್ಣ ಎಎಲ್‌ಪಿ ಶಾಲೆಯಲ್ಲಿ ಗಡಿನಾಡ ಸಾಹಿತ್ಯ ಸಾಂಸ್ಕೃತಿಕ ಅಕಾಡಮಿ ಕಾಸರಗೋಡು ಹಾಗೂ ಕಲ್ಕೂರ ಪ್ರತಿಷ್ಠಾನ ಮಂಗಳೂರು ವತಿಯಿಂದ ನಾಡೋಜ, ಡಾ.ಕಯ್ಯರ ಕಿಞಣ್ಣ ರೈ ಜನ್ಮದಿನಾಚರಣೆ ಹಾಗೂ ಡಾ.ಕಯ್ಯರ ಪ್ರಶಸ್ತಿ ಪ್ರದಾನ ಸಮಾರಂಭ ಉದ್ಘಾಟಿಸಿ ಮಾತನಾಡಿದರು.
ಗಡಿನಾಡ ಸಾಹಿತ್ಯ ಸಾಂಸ್ಕೃತಿಕ ಅಕಾಡೆಮಿ ಸಂಸ್ಥಾಪಕ, ಕಲ್ಕೂರ ಪ್ರತಿಷ್ಠಾನದ ಪ್ರದೀಪ್ ಕುಮಾರ್ ಕಲ್ಕೂರ ಅಧ್ಯಕ್ಷತೆ ವಹಿಸಿದ್ದರು. ಸಾಹಿತ್ಯ ಸಂಘಟಕಿ, ಸಮಾಜ ಸೇವಕಿ ಆಯಿಷಾ ಎ.ಎ ಪೆರ್ಲ ಅವರಿಗೆ ಬಸವರಾಜ ಹೊರಟ್ಟಿ ಪ್ರಶಸ್ತಿ ಪ್ರದಾನ ಮಾಡಿದರು. ಪೈವಳಿಕೆ ಗ್ರಾಪಂ ಅಧ್ಯಕ್ಷೆ ಜಯಂತಿ, ಮಂಜೇಶ್ವರ ಬ್ಲಾಕ್ ಪಂಚಾಯಿತಿ ಸದಸ್ಯೆ ಫಾತಿಮತ್ ಜೌರಾ, ಪೈವಳಿಕೆ ಸೇವಾ ಸಹಕಾರಿ ಬ್ಯಾಂಕ್ ಅಧ್ಯಕ್ಷ ಶ್ರೀಧರ ಹೊಳ್ಳ, ಮಂಜೇಶ್ವರ ಉಪಜಿಲ್ಲಾ ಪ್ರಭಾರ ಶಿಕ್ಷಣಾಧಿಕಾರಿ ಜಿತೇಂದ್ರ ಎಸ್.ಎಚ್., ಸಮಾಜ ಸೇವಕರಾದ ಪ್ರಸಾದ್ ರೈ ಕಯ್ಯರು, ಮೋಹನ್ ರೈ ಕಯ್ಯರು, ಗೋಪಾಲ ಶೆಟ್ಟಿ ಅರಿಬೈಲು, ದುಬೈ ಗಡಿನಾಡ ಉತ್ಸವ ಸಮಿತಿ ಕಾರ್ಯದರ್ಶಿ ಅಶ್ರಫ್ ಪಿ.ಪಿ.ಬಾಯಾರು, ರಾಮಕೃಷ್ಣ ಚಾರಿಟೆಬಲ್ ಟ್ರಸ್ಟ್ ಕಾರ್ಯದರ್ಶಿ ವೆಂಕಪ್ಪ ಶೆಟ್ಟಿ ಕಯ್ಯರು, ಮುಖ್ಯಶಿಕ್ಷಕಿ ಪ್ರೇಮಲತಾ, ಪಿಟಿಎ ಅಧ್ಯಕ್ಷ ದೀಪಕ್ ಶರ್ಮ, ಸಾಹಿತಿ ಜನಾರ್ದನ ಹಂದೆ, ವಕೀಲ ಉದಯ ಗಟ್ಟಿ ಕುಂಬಳೆ, ಝೆಡ್.ಎ.ಕಯ್ಯರು ಉಪಸ್ಥಿತರಿದ್ದರು.
ಸಂಧ್ಯಾಗೀತ ಬಾಯಾರು ಡಾ.ಕಯ್ಯರ ಅವರ ಕವಿತೆ ಹಾಡಿದರು. ಗಡಿನಾಡ ಸಾಹಿತ್ಯ ಸಾಂಸ್ಕೃತಿಕ ಅಕಾಡೆಮಿ ಮುಂದಿನ ಚಟುವಟಿಕೆಗಳಿಗಾಗಿ ಬಸವರಾಜ ಹೊರಟ್ಟಿ ಹತ್ತು ಸಾವಿರ ರೂ.ದೇಣಿಗೆ ನೀಡಿದರು. ಭಾರತೀಯ ಸೇನೆಗೆ ಆಯ್ಕೆಯಾದ ಗಿರೀಶ್ ನಾಯ್ಕ ಅವರನ್ನು ಗೌರವಿಸಲಾಯಿತು. ಪ್ಲಸ್‌ಟು ತರಗತಿಯಲ್ಲಿ ಉತ್ತಮ ಅಂಕ ಗಳಿಸಿದ ವಿದ್ಯಾರ್ಥಿಗಳನ್ನು ಅಭಿನಂದಿಸಲಾಯಿತು. ಗಡಿನಾಡ ಸಾಹಿತ್ಯ ಸಾಂಸ್ಕೃತಿಕ ಅಕಾಡಮಿ ಅದ್ಯಕ್ಷ ಚನಿಯಪ್ಪ ನಾಯ್ಕ ಸ್ವಾಗತಿಸಿ, ಪ್ರೊ.ಎ.ಶ್ರೀನಾಥ್ ನಿರೂಪಿಸಿ, ಅಖಿಲೇಶ್ ನಗುಮುಗಂ ವಂದಿಸಿದರು.
ಕರ್ನಾಟಕದಿಂದ ನೀಡಲಾಗುವ ವಿವಿಧ ಪ್ರಶಸ್ತಿ ಹಾಗೂ ಇತರ ನೆರವುಗಳ ಕೊಡುಗೆ ಸಂದರ್ಭ ಗಡಿನಾಡಿಗೂ ಹೆಚ್ಚಿನ ಪ್ರಾಶಸ್ತ್ಯ ಲಭಿಸುವ ಬಗ್ಗೆ ಅಗತ್ಯ ಕ್ರಮ ಕೈಗೊಳ್ಳಲಾಗುವುದು. ಗಡಿನಾಡಿನ ಕನ್ನಡ ಮಾಧ್ಯಮ ಶಾಲೆಗಳಿಗೆ ಪುಸ್ತಕಗಳ ಕೊಡುಗೆ ಜತೆಗೆ ಇತರ ಸವಲತ್ತು ಒದಗಿಸಲಾಗುವುದು. ಕನ್ನಡದ ಕೆಲಸ ನಡೆಸುವ ಸಂಘ ಸಂಸ್ಥೆ ಗುರುತಿಸುವ ಕೆಲಸವೂ ನಡೆದುಬರಬೇಕಾಗಿದೆ. - ಬಸವರಾಜ ಹೊರಟ್ಟಿ, ವಿಧಾನ ಪರಿಷತ್ ಸಭಾಪತಿ