ವಿಜಯವಾಣಿ ಸುದ್ದಿಜಾಲ ಬೆಳ್ತಂಗಡಿ(ದ.ಕ.)
ಗರ್ಡಾಡಿ ಗ್ರಾಮದ ಬೊಳಿಯಾರು ಎಂಬಲ್ಲಿ ಗೋಪಕುಮಾರ್ ಹಾಗೂ ಸಮೋಸ್ ಎಂಬುವರ ತೋಟದ ಮನೆಯ ಗೇಟಿನ ಮುಂದೆ 25 ಆಡಿನ ತಲೆಗಳನ್ನು ಕಡಿದು ಮರದ ಮೂರ್ತಿಗಳಿಗೆ ಫೋಟೋಗಳನ್ನು ಅಂಟಿಸಿ ವಾಮಾಚಾರ ನಡೆಸಿರುವ ಕುರುಹು ಕಂಡು ಬಂದಿದೆ. ಭಾನುವಾರ ರಾತ್ರಿ ಘಟನೆ ನಡೆದಿದೆ ಎನ್ನಲಾಗಿದೆ.
ಗೋಪ ಕುಮಾರ ಹಾಗೂ ಸಮೋಸ್ ಕೇರಳದಲ್ಲಿದ್ದು, ಇಲ್ಲಿನ ಮ್ಯಾನೇಜರ್ ಲಿಬಿನ್ ಸೋಮವಾರ ಬೆಳಗ್ಗೆ ಈ ಘಟನೆ ಕಂಡು ಸ್ಥಳೀಯರಿಗೆ ಮಾಹಿತಿ ನೀಡಿದ್ದರು. ಕೆಲಸಮಯದ ಹಿಂದೆ ಇದೇ ಸ್ಥಳದಲ್ಲಿ ಹಂದಿ ತಲೆ, ಎರಡು ಕೋಳಿ, 25 ಮೊಟ್ಟೆ ಬಳಸಿ ಸ್ಥಳೀಯ ಕೆಲವರ ಫೋಟೋ ಅಂಟಿಸಿ ಪೂಜೆ ನಡೆಸಿದ ಕುರುಹು ಕಂಡುಬಂದಿತ್ತು ಎಂದು ಸ್ಥಳೀಯರು ತಿಳಿಸಿದ್ದಾರೆ.
ದ್ವೇಷ ಸಾಧಿಸಲು ಬಳಕೆ
ಈ ಜಾಗವನ್ನು ಮಂಗಳೂರಿನ ವ್ಯಕ್ತಿಯೊಬ್ಬರು 7.25 ಕೋಟಿ ರೂ.ಗೆ ಖರೀದಿಸಿದ್ದು, ಈ ವ್ಯವಹಾರ ಇನ್ನೂ ಪೂರ್ಣಗೊಂಡಿಲ್ಲ. ಅವರು ಆರು ತಿಂಗಳ ಹಿಂದೆ ತಾನು ಜಾಗ ಖರೀದಿಸಿರುವುದಾಗಿ ತಿಳಿಸಿ ಅಲ್ಲಿಂದ ಅಡಕೆ, ರಬ್ಬರ್ ಕೊಂಡೊಯ್ದಿದ್ದರು. ಆದರೆ ಜಾಗದ ಮಾಲೀಕರಲ್ಲಿ ಈ ವಿಚಾರ ತಿಳಿಸಿದಾಗ ವ್ಯಾಪಾರ ಆಗಿಲ್ಲ ಎಂದಿದ್ದರು. ಗೋಪ ಕುಮಾರ್ ಹಾಗೂ ಸಮೋಸ್ ಅವರಿಗೆ ಸ್ಥಳೀಯರು ಉತ್ತಮ ರೀತಿಯಲ್ಲಿ ಸಹಕಾರ ನೀಡುತ್ತಿದ್ದು, ಅವರೆಲ್ಲರ ಮೇಲೆ ದ್ವೇಷ ಸಾಧಿಸಲು ಈ ರೀತಿ ಮಾಡಲಾಗಿದೆ ಎಂದು ಸ್ಥಳೀಯರಾದ ರಾಜೀವಿ ಹಾಗೂ ಲಿಬಿನ್ ತಿಳಿಸಿದ್ದಾರೆ. ಜಾಗದ ಮಾಲೀಕರು ಕೇರಳದಲ್ಲಿದ್ದು, ಅವರು ಬಂದ ಬಳಿಕವಷ್ಟೇ ಪೂರ್ಣ ಚಿತ್ರಣ ತಿಳಿದು ಬರಬೇಕಿದೆ.