ಹನಿಮೂನ್‌ಗೆ ತೆರಳಿದ್ದ ಮಹಿಳೆ ನಾಪತ್ತೆ; ಪತ್ನಿಗಾಗಿ ರೈಲಿನಲ್ಲಿ ಹುಡುಕಾಡಿದ ಪತಿ

train couple
Published on

ಬಿಹಾರ: ಪತಿಯೊಂದಿಗೆ ಹನಿಮೂನ್‌ಗೆ ತೆರಳಿದ್ದ ಮಹಿಳೆಯೊಬ್ಬರು ರೈಲಿನಿಂದ ನಾಪತ್ತೆಯಾಗಿರುವ ಘಟನೆ ಕುರಿತು ಕಿಶನ್‌ಗಂಜ್ ರೈಲು ನಿಲ್ದಾಣದಲ್ಲಿ ದೂರು ದಾಖಲಾಗಿದೆ.

ಮಹಿಳೆಯ ಮೊಬೈಲ್ ಸ್ವಿಚ್ ಆಫ್ ಆಗಿದೆ. ಪತಿ ಕಿಶನ್‌ಗಂಜ್ ರೈಲ್ವೆ ನಿಲ್ದಾಣದಲ್ಲಿ ಘಟನೆಯ ಬಗ್ಗೆ ದೂರು ದಾಖಲಿಸಿದ್ದಾರೆ. ರೈಲ್ವೆ ಪೊಲೀಸರು, ಮಹಿಳೆಯ ಮೊಬೈಲ್‌ನ ಲೊಕೇಶನ್ ಅನ್ನು ಹೊರತೆಗೆದು  ತನಿಖೆಯಲ್ಲಿ ತೊಡಗಿದ್ದಾರೆ.

ನಡೆದಿದ್ದೇನು?: ಮೂಲಗಳಿಂದ ಸಿಕ್ಕಿರುವ ಮಾಹಿತಿಯ ಪ್ರಕಾರ, ಸಂತ್ರಸ್ತೆಯ ಪತಿ ಪ್ರಿನ್ಸ್ ಕುಮಾರ್, ಕುಧಾನಿ ಮುಜಾಫರ್‌ಪುರ ನಿವಾಸಿ, ಮಿಥನ್‌ಪುರ ವಿದ್ಯುತ್ ಇಲಾಖೆಯಲ್ಲಿ ಜೆಇ ಸಹಾಯಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಫೆಬ್ರವರಿ 22 ರಂದು ಮಧುಬನಿ ರಾಜನಗರದ ನಿವಾಸಿ ಮಹೇಶ್ ಕುಮಾರ್ ಅವರ ಪುತ್ರಿ ಕಾಜಲ್ ಕುಮಾರಿಯೊಂದಿಗೆ ವಿವಾಹವಾಗಿತ್ತು. ಮದುವೆಯ ನಂತರ ಜುಲೈ 27 ರಂದು ಇಬ್ಬರೂ ಹನಿಮೂನ್‌ಗಾಗಿ ಡಾರ್ಜಿಲಿಂಗ್ ಮತ್ತು ಸಿಕ್ಕಿಂಗೆ ಹೋಗುತ್ತಿದ್ದರು.

ದಂಪತಿ ಮುಜಾಫರ್‌ಪುರ ರೈಲು ನಿಲ್ದಾಣದಿಂದ ನವದೆಹಲಿ ಎನ್‌ಜೆಪಿ ಎಕ್ಸ್‌ಪ್ರೆಸ್ ರೈಲಿನ (12524) ಎಸಿ ಕೋಚ್ ಕೋಚ್ ಬಿ-4 ನ ಸೀಟ್ ಸಂಖ್ಯೆ 43 ಮತ್ತು 45 ರಲ್ಲಿ ಪ್ರಯಾಣಿಸುತ್ತಿದ್ದರು. ಆದರೆ ಜುಲೈ 28 ರಂದು ಬೆಳಿಗ್ಗೆ ಕಿಶನ್‌ಗಂಜ್ ರೈಲು ನಿಲ್ದಾಣಕ್ಕೆ ಬಂದಾಗ ಪತಿಗೆ ಪತ್ನಿ ಕಾಜಲ್ ಕುಮಾರಿ ಕಾಣೆಯಾಗಿರುವುದು ಕಂಡು ಬಂದಿದೆ. ಪತ್ನಿಯ ಮೊಬೈಲ್ ಕೂಡ ಸ್ವಿಚ್ ಆಫ್ ಆಗಿತ್ತು. ಘಟನೆಯ ಬಗ್ಗೆ ಪತಿ ಪ್ರಿನ್ಸ್ ಕುಮಾರ್ ಕುಟುಂಬಸ್ಥರಿಗೆ ಮಾಹಿತಿ ನೀಡಿದ್ದಾರೆ.

ರೈಲ್ವೆ ಪೊಲೀಸ್ ಠಾಣೆ ಅಧ್ಯಕ್ಷ ನಿತೇಶ್ ಕುಮಾರ್ ಮಾತನಾಡಿ, ಕಾಜಲ್‌ಗಾಗಿ ಹುಡುಕಾಟ ಆರಂಭಿಸಲಾಗಿದೆ. ಈ ಕುರಿತು ಎಲ್ಲಾ ಆಯಾಮಗಳಲ್ಲಿ ತನಿಖೆ ನಡೆಸಲಾಗುತ್ತಿದೆ. ಮಹಿಳೆಯ ಮೊಬೈಲ್‌ನ ಕೊನೆಯ ಸ್ಥಳ ರೋಸ್ರಾ ಠಾಣೆಯಲ್ಲಿ ಪತ್ತೆಯಾಗಿದೆ. ಪೊಲೀಸರು ಕಿಶನ್‌ಗಂಜ್ ಮತ್ತು ಕತಿಹಾರ್ ಸೇರಿದಂತೆ ಇತರ ಠಾಣೆಗಳ ಸಿಸಿಟಿವಿ ದೃಶ್ಯಾವಳಿಗಳನ್ನು ಸ್ಕ್ಯಾನ್ ಮಾಡುತ್ತಿದ್ದಾರೆಂದು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net