

Supreme Court: ಆಧಾರ್ ಕಾರ್ಡ್ ಭಾರತೀಯ ಪೌರತ್ವದ ಪುರಾವೆಯಾಗಿ ಪರಿಗಣಿಸಲಾಗುವುದಿಲ್ಲ ಎಂಬ ಚುನಾವಣಾ ಆಯೋಗದ ನಿಲುವನ್ನು ಸುಪ್ರೀಂ ಕೋರ್ಟ್ ಎತ್ತಿಹಿಡಿದಿದೆ.
ಬಿಹಾರ ಮತದಾರರ ಪಟ್ಟಿ ಪರಿಷ್ಕರಣೆಯನ್ನು ಪ್ರಶ್ನಿಸುವ ಅರ್ಜಿಗಳ ವಿಚಾರಣೆಯ ಸಂದರ್ಭದಲ್ಲಿ, ನ್ಯಾಯಮೂರ್ತಿಗಳಾದ ಸೂರ್ಯ ಕಾಂತ್ ಮತ್ತು ಜೋಯ್ಮಲ್ಯ ಬಾಗ್ಚಿ ಅವರಿದ್ದ ದ್ವೀಸದಸ್ಯ ಪೀಠವು, ವಿವಿಧ ಸೇವೆಗಳನ್ನು ಪಡೆಯಲು ಆಧಾರ್ ಒಂದು ಪ್ರಮುಖ ಗುರುತಿನ ದಾಖಲೆಯಾಗಿ ಕಾರ್ಯನಿರ್ವಹಿಸುತ್ತದೆಯಾದರೂ, ಅದು ರಾಷ್ಟ್ರೀಯತೆಯನ್ನು ಸ್ಥಾಪಿಸುವುದಿಲ್ಲ ಎಂದು ಒತ್ತಿ ಹೇಳಿದೆ.
ಬಿಹಾರದ ವಿಶೇಷ ತೀವ್ರ ಪರಿಷ್ಕರಣೆ (SIR) ಕುರಿತ ವಿವಾದದ ಮಧ್ಯೆ ಸುಪ್ರೀಂ ಕೋರ್ಟ್‌ನ ಈ ತೀರ್ಪು ಹೊರ ಬಿದ್ದಿದೆ.
ಈ ವಿಷಯವನ್ನು ಆಲಿಸಿದ ಪೀಠವು ಆಧಾರ್ ಕಾರ್ಡ್ನ್ನು ನಿರ್ಣಾಯಕ ಪುರಾವೆಯಾಗಿ ಸ್ವೀಕರಿಸಲು ಸಾಧ್ಯವಿಲ್ಲ ಎಂಬ ಚುನಾವಣಾ ಆಯೋಗದ ಅಭಿಪ್ರಾಯ ಸರಿಯಾಗಿದೆ ಎಂದರು.
ಮತದಾರರ ಪರಿಶೀಲನಾ ಕಾರ್ಯವನ್ನು ನಡೆಸುವ ಅಧಿಕಾರ ಭಾರತದ ಚುನಾವಣಾ ಆಯೋಗಕ್ಕೆ ಇದೆಯೇ ಎಂಬುದು ನಿರ್ಧರಿಸಬೇಕಾದ ಪ್ರಾಥಮಿಕ ವಿಷಯವಾಗಿದೆ ಎಂದು ಸುಪ್ರೀಂ ಕೋರ್ಟ್ ಅಭಿಪ್ರಾಯಪಟ್ಟಿದ್ದು, ಅವರಿಗೆ ಅಧಿಕಾರವಿಲ್ಲದಿದ್ದರೆ ಎಲ್ಲವೂ ಮುಗಿಯುತ್ತದೆ. ಆದರೆ ಅವರಿಗೆ ಅಧಿಕಾರವಿದ್ದರೆ ಯಾವುದೇ ಸಮಸ್ಯೆ ಇರಲು ಸಾಧ್ಯವಿಲ್ಲ ಎಂದು ಹೇಳುವ ಮೂಲಕ ಪರಿಶೀಲನಾ ಪ್ರಕ್ರಿಯೆಯಲ್ಲಿ ಕಾನೂನು ಅಧಿಕಾರದ ಅಗತ್ಯವನ್ನು ನ್ಯಾಯಮೂರ್ತಿಗಳು ಎತ್ತಿ ತೋರಿಸಿದರು.
ಇದನ್ನೂ ಓದಿ:ಏಳು ಜನರ ವಿರುದ್ಧದ ಸುಳ್ಳು ಕೇಸ್ ಹಿಂಪಡೆಯಲಿ
ಹಿರಿಯ ವಕೀಲ ಕಪಿಲ್ ಸಿಬಲ್, 1950 ರ ನಂತರ ಭಾರತದಲ್ಲಿ ಜನಿಸಿದ ಪ್ರತಿಯೊಬ್ಬ ವ್ಯಕ್ತಿಯು ನಾಗರಿಕರಾಗಿದ್ದಾರೆ, ಆದರೆ ಪ್ರಸ್ತುತ ಪ್ರಕ್ರಿಯೆಯಲ್ಲಿ ಗಂಭೀರ ಕಾರ್ಯವಿಧಾನದ ಲೋಪಗಳಿವೆ ಎಂದು ಪ್ರತಿಪಾದಿಸಿದರು. ಒಂದು ಉದಾಹರಣೆಯನ್ನು ಉಲ್ಲೇಖಿಸಿ, ಒಂದು ಸಣ್ಣ ವಿಧಾನಸಭಾ ಕ್ಷೇತ್ರದಲ್ಲಿ, 12 ಜೀವಂತ ವ್ಯಕ್ತಿಗಳನ್ನು ಸತ್ತವರು ಎಂದು ಗುರುತಿಸಲಾಗಿದೆ ಮತ್ತು ಬೂತ್ ಮಟ್ಟದ ಅಧಿಕಾರಿಗಳು (ಬಿಎಲ್‌ಒಗಳು) ತಮ್ಮ ಕರ್ತವ್ಯಗಳನ್ನು ಸರಿಯಾಗಿ ನಿರ್ವಹಿಸಿಲ್ಲ ಎಂದರು.
ಮತದಾರರ ಪಟ್ಟಿಯಿಂದ 65 ಲಕ್ಷ ಹೆಸರುಗಳನ್ನು ಹೊರಗಿಡಲಾಗಿದೆ ಎಂಬ ಆರೋಪದ ಬಗ್ಗೆ ಸಾಕ್ಷಿ ಕೇಳಿದ ಸುಪ್ರೀಂ ಕೋರ್ಟ್, ನಿಮ್ಮ ಆತಂಕ ಕಾಲ್ಪನಿಕವೋ ಅಥವಾ ನಿಜವಾದ ಕಾಳಜಿಯೋ ಎಂಬುದನ್ನು ಸ್ಪಷ್ಟಪಡಿಸುವಂತೆ ಸೂಚಿಸಿತು. (ಏಜೆನ್ಸೀಸ್)
.