

ಸುಶಾಂತ್ ಸಿಂಗ್ ರಜಪೂತ್ ಆತ್ಮಹತ್ಯೆ ಪ್ರಕರಣ ದಿನದಿಂದ ದಿನಕ್ಕೆ ಬಗೆಬಗೆ ತಿರುವುಗಳನ್ನು ಪಡೆದುಕೊಳ್ಳುತ್ತದೆ. ಮುಂಬೈ ಪೊಲೀಸರು ಮತ್ತು ಬಿಹಾರ ಪೊಲೀಸರು ಪ್ರತ್ಯೇಕವಾಗಿ ವಿಚಾರಣೆಗೆ ಮುಂದಾಗಿದ್ದಾರೆ.
ಈ ನಡುವೆ ಬಿಹಾರ ಪೊಲೀಸರ ವಿಚಾರಣೆಗೆ ಮುಂಬೈ ಪೊಲೀಸರು ಸ್ಪಂದಿಸುತ್ತಿಲ್ಲ ಎಂಬ ಮಾತೂ ಕೇಳಿಬರುತ್ತಿವೆ. ಈ ಪ್ರಕರಣವನ್ನು ಸಿಬಿಐಗೆ ನೀಡುವ ಜರೂರತ್ತು ಇಲ್ಲ ಎಂದು ಮಹಾರಾಷ್ಟ್ರ ಗೃಹಮಂತ್ರಿ ಹೇಳಿದರೆ, ಅತ್ತ ಬಿಹಾರ ಸಿಎಂ ಸಿಬಿಐಗೆ ನೀಡಬೇಕೆಂಬುದರ ಬಗ್ಗೆ ಒಲವು ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: ಆತನನ್ನು ಆ ಸ್ಥಿತಿಯಲ್ಲಿ ನೋಡಲು ನನಗೆ ಇಷ್ಟವಿರಲಿಲ್ಲ…
ಪಾಟ್ನಾದ ರಾಜೀವ್ ನಗರ ಪೊಲೀಸ್ ಠಾಣೆಯಲ್ಲಿ ರಿಯಾ ವಿರುದ್ಧ ಸುಶಾಂತ್ ತಂದೆ ಕೆಕೆ ಸಿಂಗ್ ದೂರು ನೀಡುತ್ತಿದ್ದಂತೆ, ಪ್ರಕರಣದ ಗಂಭೀರತೆ ಹೆಚ್ಚಾಗಿತ್ತು. ಸುಶಾಂತ್ ಸಾವಿಗೆ ರಿಯಾ ಪರೋಕ್ಷ ಕಾರಣ ಎಂದು ಬಿಂಬಿಸಲಾಗಿತ್ತು. ಇದೀಗ ಕೆಕೆ ಸಿಂಗ್ ಪರವಾಗಿ ನಿಂತಿರುವ ಬಿಹಾರ ಸಿಎಂ ನಿತೀಶ್ಕುಮಾರ್, ಕೆಕೆ ಸಿಂಗ್ ಬಯಸಿದರೆ, ಈ ಪ್ರಕರಣವನ್ನು ಸಿಬಿಐಗೆ ನೀಡುವ ಬಗ್ಗೆ ಸರ್ಕಾರ ತೀರ್ಮಾನಿಸಲಿದೆ. ಅವರಿಗೆ ಸಾಥ್ ನೀಡಲಿದ್ದೇವೆ ಎಂದು ಹೇಳಿದ್ದಾರೆ.
ಇನ್ನು ಇದು ಕಾನೂನಾತ್ಮಕ ವಿಚಾರಣೆ. ಬಿಹಾರ ಪೊಲೀಸರ ತನಿಖೆಗೆ ಮಹಾರಾಷ್ಟ್ರ ಪೊಲೀಸ್ ಇಲಾಖೆ ಸ್ಪಂದಿಸಬೇಕು. ಎಫ್ಐಆರ್ ದಾಖಲಾಗಿದ್ದರಿಂದ ಅವರ ಕರ್ತವ್ಯವನ್ನು ಅವರು ಮಾಡುತ್ತಿದ್ದಾರೆ. ಸಹಕರಿಸಿ ಎಂದು ನಿತೀಶ್ ಕುಮಾರ್ ಹೇಳಿದ್ದಾರೆ.
ಇದನ್ನೂ ಓದಿ: ಬಿಹಾರ ಪೊಲೀಸರ ಕೈಗೆ ಇನ್ನೂ ಸಿಕ್ಕಿಲ್ಲ ರಿಯಾ ಚಕ್ರವರ್ತಿ
ಈ ನಡುವೆ ಬಿಹಾರದ ಉಪ ಮುಖ್ಯಮಂತ್ರಿ ಸುಶೀಲ್ ಕುಮಾರ್ ಮೋದಿ ಮಹಾರಾಷ್ಟ್ರ ಸರ್ಕಾರದ ಈ ನಡೆಯ ವಿರುದ್ಧ ತಿರುಗಿ ಬಿದ್ದಿದ್ದಾರೆ. ಟ್ವಿಟರ್ನಲ್ಲಿ ಖಾರವಾಗಿ ಪ್ರತಿಕ್ರಿಯಸಿರುವ ಅವರು, ‘ಬಿಹಾರ ಪೊಲೀಸರ ತನಿಖೆಗೆ ಮಹಾರಾಷ್ಟ್ರದ ಕಾಂಗ್ರೆಸ್ ಎನ್ಸಿಪಿ ಶಿವಸೇನಾ ಸರ್ಕಾರ ತೊಡಕಾಗಿದೆ. ಪ್ರಕರಣದ ಹಾದಿ ತಪ್ಪಿಸುತ್ತಿದ್ದಾರೆ. ನಮ್ಮ ಪೊಲೀಸರ ತನಿಖೆಗೆ ಅಡ್ಡಗಾಲು ಹಾಕುತ್ತಿದ್ದಾರೆ. ಕಾಂಗ್ರೆಸ್ಗೆ ಬಾಲಿವುಡ್ನಿಂದಲೂ ಫಂಡ್ ಸಿಕ್ಕಿದೆ. ಹಾಗಾಗಿ ಅವರನ್ನು ರಕ್ಷಿಸುವ ಹೊಣೆ ಹೊತ್ತಿದೆ’ ಎಂದಿದ್ದಾರೆ. (ಏಜೆನ್ಸೀಸ್)