

ಬೆಂಗಳೂರು: 11ನೇ ಆವೃತ್ತಿಯ ಬಿಗ್ಬಾಸ್ (BiggBoss) ಆರಂಭವಾಗಿ 10ಕ್ಕೂ ಅಧಿಕ ವಾರಗಳು ಕಳೆದಿದ್ದು, ದಿನಕ್ಕೊಂದು ಟ್ವಿಸ್ಟ್ ಪಡೆದುಕೊಳ್ಳುತ್ತಿದೆ. ಈ ವಾರ ಮನೆಯ ಕ್ಯಾಪ್ಟನ್ ಆಗಿ ಭವ್ಯಾ ಆಯ್ಕೆಯಾಗಿದ್ದು, ಕಳಪೆ ಪಟ್ಟವನ್ನು ಸ್ಫರ್ಧಿಗಳು ಒಮ್ಮತದಿಂದ ಚೈತ್ರಾ ಅವರಿಗೆ ನೀಡಿದ್ದಾರೆ. ಈ ವಾರದ ಟಾಸ್ಕ್ನಲ್ಲಿ ಚೈತ್ರಾ ಅವರು ಉಸ್ತುವಾರಿ ವಹಿಸಿಕೊಂಡಿದ್ದಾಗ ದೊಡ್ಡ ಜಗಳವೇ ನಡೆದು ಹೋಗಿತ್ತು. ಸ್ಫರ್ಧಿಗಳು ಮಾತನಾಡುವ ಭರದಲ್ಲಿ ಅತಿರೇಕದ ಹೇಳಿಕೆಗಳು ನೀಡಿರುವುದು ವೀಕ್ಷಕರ ಕೆಂಗಣ್ಣಿಗೆ ಗುರಿಯಾಗಿದೆ. ಇದೀಗ ಈ ವಿಚಾರವಾಗಿ ಕಿಚ್ಚ ಸುದೀಪ್ ಚೈತ್ರಾ ಅವರಿಗೆ ಕ್ಲಾಸ್ ತೆಗೆದುಕೊಳ್ಳುವುದು ಪಕ್ಕಾ ಆಗಿದ್ದು, ಇದಕ್ಕೆ ಸಂಬಂಧಿಸಿದ ಪ್ರೋಮೋ ವೈರಲ್ ಆಗಿದೆ.
ಇಂದಿನ ಪಂಚಾಯಿತಿಗೆ ರೆಡಿನಾ? ಶೀರ್ಷಿಕೆಯಡಿ ಬಿಡುಗಡೆಯಾಗಿರುವ ಪ್ರೋಮೋ (BiggBoss Promo) ನೋಡುವುದಾದರೆ ಉಸ್ತುವಾರಿಗಳು ತಮ್ಮ ಜವಾಬ್ದಾರಿಯನ್ನು ಮರೆತು ಆಟದ ದಾರಿಯನ್ನ ತಪ್ಪಿಸುತ್ತಿದ್ದಾರೆ. ಮಾತಿನ ಮಿತಿಗಳು ಮೀರುತ್ತ ಹೋಗುತ್ತಿದೆ ಎಂದು ಕಿಚ್ಚ ಸುದೀಪ್ ಹೇಳಿದ್ದಾರೆ. ಇದರಲ್ಲಿ ಪ್ರಮುಖವಾಗಿ ಚೈತ್ರಾ ಕುಂದಾಪುರ, ರಜತ್ ಹಾಗೂ ಹನುಮಂತು ಮಾತನಾಡಿರುವ ಕ್ಲಿಪ್ಗಳನ್ನು ಹಾಕಲಾಗಿದ್ದು, ಚೈತ್ರಾಗೆ ಈ ವಾರವೂ ವಿಶೇಷ ಕ್ಲಾಸ್ ತೆಗೆದುಕೊಳ್ಳುವುದು ಪಕ್ಕಾ ಆಗಿದೆ. ಸ್ಫರ್ಧಿ ಚೈತ್ರಾ ಇದಕ್ಕೆ ಹೇಗೆ ಪ್ರತಿಕ್ರಿಯಿಸಲಿದ್ದಾರೆ ಎಂದು ಕಾದು ನೋಡಬೇಕಿದೆ.
ಭರಪೂರ ಮನರಂಜನೆಯ ಜೊತೆಗೆ ವಿವಾದಗಳನ್ನು ಹುಟ್ಟು ಹಾಕುವ ಬಿಗ್ಬಾಸ್ (Bigg Boss), ಕಿರುತೆರೆ ಲೋಕದ ಜನಪ್ರಿಯ ಶೋಗಳಲ್ಲಿ ಒಂದೆಂದರೆ ತಪ್ಪಾಗಲಾರದು. ಪ್ರೀತಿ, ಸ್ನೇಹ ಸಂಬಂಧಗಳಿಗೆ ಈ ಶೋ ಬೆಸುಗೆಯಾಗುತ್ತದೆ. ಇಲ್ಲಿ ನಗು, ಕಣ್ಣೀರು, ಕೋಪ, ಮುನಿಸು ಮತ್ತು ಮನಸ್ತಾಪಗಳ ಮಿಶ್ರಣವು ಇದೆ. ಟಾಸ್ಕ್ ನೀಡುವುದರ ಜೊತೆಗೆ ಜೀವನದ ಪಾಠವನ್ನು ಹೇಳಲಾಗುತ್ತದೆ. ಎಲ್ಲದಕ್ಕಿಂತ ಹೆಚ್ಚಾಗಿ ವಾರದ ಕೊನೆಯಲ್ಲಿ ನಟ ಕಿಚ್ಚ ಸುದೀಪ್ ಸರಿ-ತಪ್ಪುಗಳ ತಿದ್ದುವಿಕೆ ಶೋಗೆ ಹೊಸ ಆಯಾಮವನ್ನು ತಂದುಕೊಡುತ್ತದೆ. ಈ ಎಲ್ಲ ಕಾರಣಗಳಿಂದ ಈ ಶೋ ವಿಶೇಷ ಎನಿಸಿಕೊಂಡಿದ್ದು, ಕಿರುತೆರೆ ಲೋಕದಲ್ಲಿ ಸಿಕ್ಕಾಪಟ್ಟೆ ಜನಪ್ರಿಯತೆ ಪಡೆದುಕೊಂಡಿದೆ.