ನಾನು ಶುರು ಮಾಡಿದರೆ… ಎಲ್ಲ ಸ್ಪರ್ಧಿಗಳಿಗೂ ಖಡಕ್​ ವಾರ್ನಿಂಗ್​ ಕೊಟ್ಟ ಲಾಯರ್​ ಜಗದೀಶ್!​ Lawyer Jagadish

Lawyer Jagadish
Published on

ಬೆಂಗಳೂರು: ಕನ್ನಡ ಕಿರುತೆರೆ ಲೋಕದ ಅತಿದೊಡ್ಡ ರಿಯಾಲಿಟಿ ಶೋ ಬಿಗ್​ಬಾಸ್ ಮತ್ತೆ ಆರಂಭವಾಗಿದೆ. ಸೆ.29ರಂದು ಶುರುವಾದ ಸೀಸನ್​ 11 ಮೂರನೇ ದಿನಕ್ಕೆ ಕಾಲಿಟ್ಟಿದ್ದು, ದೊಡ್ಮನೆಯಲ್ಲಿ ಸ್ಪರ್ಧಿಗಳ ನಡುವೆ ಕಾಡ್ಗಿಚ್ಚು ಹೊತ್ತಿಕೊಳ್ಳುತ್ತಿದೆ. ಹೀಗಾಗಿ ಕನ್ನಡಿಗರಲ್ಲಿ ಬಿಗ್​ಬಾಸ್​ ಫೀವರ್​ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಮೊದಲ ದಿನದಿಂದಲೇ ಸ್ಪರ್ಧಿಗಳ ಹೈಡ್ರಾಮ ಶುರುವಾಗಿದ್ದು, ಪ್ರೇಕ್ಷಕರನ್ನು ಸೆಳೆಯುತ್ತಿದೆ. ಅದರಲ್ಲೂ ಲಾಯರ್​ ಜಗದೀಶ್​ ಅವರು ಹೆಚ್ಚು ಚರ್ಚೆಗೆ ಗ್ರಾಸವಾಗಿದ್ದಾರೆ. ಬಿಗ್​ಬಾಸ್ ನಿಯಮಗಳನ್ನು ಪಾಲಿಸುತ್ತಿಲ್ಲ ಎಂದು ಇತರೆ ಸ್ಪರ್ಧಿಗಳು ಪದೇಪದೆ ಆರೋಪಗಳನ್ನು ಮಾಡುತ್ತಿದ್ದಾರೆ.

ಟಾಸ್ಕ್​ ಪ್ರಕಾರ ನರಕದ ಮನೆಲ್ಲಿರುವ ಚೈತ್ರಾ ಕುಂದಾಪುರ, ಸ್ವರ್ಗದ ಮನೆಯನ್ನು ಸ್ವಚ್ಛಗೊಳಿಸಬೇಕು. ಅದರ ಪ್ರಕಾರ ಚೈತ್ರಾ ಅವರು ಮೊದಲು ಶೌಚಾಲಯಕ್ಕೆ ಆದ್ಯತೆ ನೀಡಿದರು. ತನ್ನದೇಯಾದ ಲೆಕ್ಕಾಚಾರದೊಂದಿಗೆ ಬಂದ ಚೈತ್ರಾ ಮನೆಯಲ್ಲಿ ದೊಡ್ಡ ಹೈಡ್ರಾಮವನ್ನೇ ಸೃಷ್ಟಿಸಿದರು. ಆಕೆಯ ನಡೆಯನ್ನು ಟೀಕಿಸಿದ ಲಾಯರ್​ ಜಗದೀಶ್​ ( Lawyer Jagadish ), ಟಾಯ್ಲೆಟ್​ ಅನ್ನು ಸರಿಯಾಗಿ ಕ್ಲೀನ್​ ಮಾಡಿಲ್ಲ ಎಂದರು. ಟಾಯ್ಲೆಟ್​ ಅನ್ನು ಸರಿಯಾಗಿ ಹೇಗೆ ಕ್ಲೀನ್​ ಮಾಡಬೇಕೆಂಬುದು ಆಕೆಗೆ ಗೊತ್ತಿಲ್ಲ ಎಂದು ಜಗದೀಶ್​ ಕಿಡಿಕಾರಿದರು. ಅಲ್ಲದೆ, ಹೇಗೆ ಕ್ಲೀನ್​ ಮಾಡಬೇಕೆಂಬುದನ್ನು ನಾನು ನಿಮಗೆ ತೋರಿಸುತ್ತೇನೆಂದು ಸ್ವಚ್ಛಗೊಳಿಸುವ ಜವಾಬ್ದಾರಿಯನ್ನು ಜಗದೀಶ್​ ತೆಗೆದುಕೊಂಡರು. ಆದರೆ, ಬಿಗ್​ಬಾಸ್​ ನಿಯಮದ ಪ್ರಕಾರ ಮನೆಯನ್ನು ಸ್ವಚ್ಛಗೊಳಿಸುವುದು ನರಕ ನಿವಾಸಿಗಳ ಕರ್ತವ್ಯವಾಗಿತ್ತು. ಆದರೆ, ಜಗದೀಶ್​ ತಮ್ಮ ಪಾತ್ರೆಗಳನ್ನು ತಾವೇ ಸ್ವಚ್ಛಗೊಳಿಸುವ ಮೂಲಕ ನಿಯಮ ಉಲ್ಲಂಘಿಸಿದ್ದಾರೆ.

ನಾವು ಕೂಡ ನಿಯಮಗಳನ್ನು ಸರಿಯಾಗಿ ಪಾಲಿಸುತ್ತಿಲ್ಲ ಹೀಗಾಗಿ ನಿಯಮ ಉಲ್ಲಂಘನೆ ನಮ್ಮ ಕಡೆಯಿಂದಲೂ ಆಗಿದೆ ಎಂದು ಮನೆಯ ಸದಸ್ಯೆ ಯಮುನಾ ಶ್ರೀನಿಧಿ ಜಗದೀಶ್‌ ಅವರಿಗೆ ಈ ಸಂದರ್ಭದಲ್ಲಿ ತಿಳಿಸಿದರು. ಇದಕ್ಕೆ ಪ್ರತಿಕ್ರಿಯೆ ನೀಡಿದ ಜಗದೀಶ್​, ಚೈತ್ರಾ ಅವರಿಗೆ ದೊಡ್ಡ ಅಭಿಮಾನಿಗಳ ಬಳಗವಿದೆ ಎಂದು ಪ್ರತಿವಾದಿಸಿದರು. ಇತರ ಸ್ಪರ್ಧಿಗಳು ಜಗದೀಶ್​ ವಿರುದ್ಧ ಆರೋಪ ಮಾಡಲು ಪ್ರಾರಂಭಿಸಿದಾಗ, ಸರಿಯಾಗಿ ಕ್ಲೀನ್​ ಮಾಡಿಸಲು ನಿಮ್ಮಿಂದ ಆಗಲಿಲ್ಲ. ನನ್ನ ಬಗ್ಗೆ ಮಾತನಾಡಬೇಡಿ. ನಾನು ತಪ್ಪು ಮಾಡಿದ್ದರೆ, ಬಿಗ್​ಬಾಸ್ ನನಗೆ ತಿಳಿಸುತ್ತಾರೆ ಮತ್ತು ಮುಂದಿನ ಕ್ರಮವನ್ನು ನಾನು ಎದುರಿಸುತ್ತೇನೆ ಎಂದರು. ಅಲ್ಲದೆ, ನಾನು ನನ್ನ ಆಟ ಆಡಲು ಶುರು ಮಾಡಿದರೆ ನಿಮ್ಮೆಲ್ಲರಿಗೂ ಚೆಕ್‌ಮೇಟ್ ಇಡುತ್ತೇನೆ. ನಿಮಗೆ ಬೇಕಾದುದನ್ನು ಮಾಡಿ, ಆಟ ಈಗ ಶುರುವಾಗಿದೆ ಎಂದು ಎಚ್ಚರಿಕೆ ನೀಡಿದರು.

ಚೈತ್ರಾ ಕುಂದಾಪುರ ಅವರಿಗೆ ಯಮುನಾ ಶ್ರೀನಿಧಿ ಕಿರುಕುಳ ನೀಡಿದ್ದಾರೆ ಎಂದು ಇದೇ ಸಂದರ್ಭದಲ್ಲಿ ಜಗದೀಶ್ ಆರೋಪಿಸಿದರು. ಜಗದೀಶ್ ಅವರ ಪ್ರಕಾರ, ಯಮುನಾ ಅವರು ಟಾಸ್ಕ್​ ಪೂರ್ಣಗೊಂಡಿದೆಯೇ ಎಂಬುದನ್ನು ಖಚಿತಪಡಿಸಿಕೊಳ್ಳುವ ಬದಲು ನಿಯಮಗಳನ್ನು ಏರುವ ಮೂಲಕ ಚೈತ್ರಾ ಅವರ ಮೇಲೆ ವೈಯಕ್ತಿಕ ದಾಳಿ ಮಾಡುತ್ತಿರುವಂತೆ ತೋರುತ್ತದೆ. ಚೈತ್ರಾಳನ್ನು ಮನೆಗೆಲಸಗಳಲ್ಲಿ ತೊಡಗಿಸಿಕೊಳ್ಳುತ್ತಿರುವ ರೀತಿ ಕಿರುಕುಳದಂತೆ ಭಾಸವಾಗುತ್ತಿದೆ ಎಂದು ಜಗದೀಶ್​ ಹೇಳಿದರು.

ಸ್ವರ್ಗ ನಿವಾಸಿಗಳು: ಭವ್ಯ ಗೌಡ, ಯಮುನಾ ಶ್ರೀನಿಧಿ, ಧನರಾಜ್ ಆಚಾರ್, ಗೌತಮಿ ಜಾಧವ್, ಧರ್ಮ ಕೀರ್ತಿರಾಜ್, ವಕೀಲ ಜಗದೀಶ್, ತ್ರಿವಿಕ್ರಮ್, ಹಂಸ ಪ್ರತಾಪ್, ಐಶ್ವರ್ಯ ಸಿಂಧೋಗಿ ಮತ್ತು ಉಗ್ರಂ ಮಂಜು.

ನರಕ ನಿವಾಸಿಗಳು: ಅನುಷಾ ರೈ, ಶಿಶಿರ್ ಶಾಸ್ತ್ರಿ, ಮಾನಸ ಸಂತೋಷ್​, ಗೋಲ್ಡ್ ಸುರೇಶ್, ಚೈತ್ರಾ ಕುಂದಾಪುರ, ಮೋಕ್ಷಿತಾ ಪೈ ಮತ್ತು ರಂಜಿತ್.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net