

ಬೆಂಗಳೂರು: ಅಭಿನಯ ಚಕ್ರವರ್ತಿ, ನಟ ಕಿಚ್ಚ ಸುದೀಪ್ ನಡೆಸಿಕೊಡುತ್ತಿರುವ ಕನ್ನಡದ ಅತೀ ದೊಡ್ಡ ರಿಯಾಲಿಟಿ ಶೋ ಬಿಗ್ ಬಾಸ್ ಇದೀಗ 10ನೇ ಸೀಸನ್ಗೆ ಕಾಲಿಟ್ಟಿದ್ದು, ಗ್ರ್ಯಾಂಡ್ ಓಪನಿಂಗ್ ಮೂಲಕ ಯಶಸ್ವಿಯಾಗಿ ಪ್ರಾರಂಭಗೊಂಡಿದೆ. ಮನೆಗೆ ಎಂಟ್ರಿ ಕೊಟ್ಟಿರುವ ಸದಸ್ಯರ ಪೈಕಿ ಈಗಾಗಲೇ ಕಿರು ಪರಿಚಯದ ಜತೆಗೆ ಮಾತಿನ ಕಿಚ್ಚು ಕೂಡ ಜೋರಾಗಿಯೇ ಆರಂಭಗೊಂಡಿದೆ.
ಇಂದು ಮನೆ ಮಂದಿಯೆಲ್ಲಾ ಬಿಗ್ಬಾಸ್ ಸೀಸನ್ 04ರ ವಿಜೇತ ಪ್ರಥಮ್, ಲಾರ್ಡ್ ಪ್ರಥಮ್ ಆಗಿ ಮನೆಗೆ ಪ್ರವೇಶಿಸಿದ್ದನ್ನು ಕಂಡು ಶಾಕ್ ಆಗಿದ್ದು, ಪ್ರಥಮ್ ಹೇಳಿದ್ದಕ್ಕೆಲ್ಲಾ ಹೌದು ಎಂದು ಮಾತ್ರ ಹೇಳಲು ಸಾಧ್ಯವಿರುವುದು ಇದೀಗ ಕೊಂಚ ಗೊಂದಲಕ್ಕೀಡು ಮಾಡಿದೆ. ಇದು ಟಾಸ್ಕ್ ಆಗಿರಲಿದೆಯಾ ಅಥವಾ ಕೇವಲ ಅತಿಥಿ ಪಾತ್ರವಾಗಿರಲಿದೆಯಾ? ಎಂಬುದೇ ಸ್ಪರ್ಧಿಗಳ ಪ್ರಶ್ನೆಯಾಗಿದೆ.
ಈ ಮಧ್ಯೆ ಮನೆ ಮಂದಿಯೆಲ್ಲಾ ಒಂದೊಂದು ಕೆಲಸಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡರೆ, ಇತ್ತ ವಾಶ್ರೂಂ ಬಳಿ ರಕ್ಷಕ್ ಬುಲೆಟ್ ಮತ್ತು ಸ್ನೇಹಿತ್ ನಡುವೆ ಮಾತಿನ ಜಟಾಪಟಿ ನಡೆದಿದೆ. ರಕ್ಷಕ್ ನಡವಳಿಕೆಯನ್ನು ವಿಶ್ಲೇಷಿಸಿದ ಸ್ನೇಹಿತ್, ‘ನಮ್ ಜನರಿಗೆ ಇದ್ದಿದ್ದು ಇದ್ದಂಗೆ ಹೇಳಿದ್ರೆ ಇಷ್ಟವಾಗಲ್ಲ. ಇದ್ದಿದ್ದಕ್ಕಿಂತ ಸ್ವಲ್ಪ ಕಮ್ಮಿ ಹೇಳಿದ್ರೆ ಖುಷಿಯಾಗ್ತಾರೆ’ ಎಂದು ಹೇಳಿದ್ದಾರೆ.
ಇದಕ್ಕೆ ನೇರವಾಗಿ ಉತ್ತರಿಸಿದ ರಕ್ಷಕ್, ‘ಇಲ್ಲಿ ನಾವು ರಿಯಲ್ ಫೇಸ್ ತೋರ್ಸೋಕೆ ಬಂದಿದ್ದು. ಡ್ರಾಮಾ ಮಾಡ್ಕೊಂಡು, ನಾಟಕ ಆಡ್ಕೊಂಡು ಬದುಕೋಕೆ ಬಂದಿಲ್ಲ’ ಎಂದು ಖಡಕ್ ಆಗಿ ಹೇಳಿದ್ದಾರೆ. ಈ ಚರ್ಚೆ ಇಲ್ಲಿಗೆ ಮುಗಿಯಿತೇ ಅಥವಾ ಮುಂದುವರೆದಿದೆಯಾ ಎಂಬದನ್ನು ಇಂದಿನ ಸಂಚಿಕೆಯಲ್ಲಿ ನೋಡಿ ತಿಳಿದುಕೊಳ್ಳಬೇಕಿದೆ.
ನಮ್ರತಾ ಗೌಡ, ಡ್ರೋನ್ ಪ್ರತಾಪ್, ಅಭಿನವ್ ವಿಶ್ವನಾಥನ್, ವಿನಯ್ ಗೌಡ, ಗೌರೀಶ್ ಅಕ್ಕಿ, ರಕ್ಷಕ್ ಬುಲ್ಲೆಟ್, ಸಂಗೀತಾ ಶೃಂಗೇರಿ, ಸ್ನೇಕ್ ಶ್ಯಾಮ್, ಕೋಮಲ್, ನೀತು ವನಜಾಕ್ಷಿ ಬಿಗ್ ಮನೆಗೆ ಬಿಗ್ ಆಗಿ ಎಂಟ್ರಿ ಕೊಟ್ಟ ಕಂಟೆಸ್ಟೆಂಟ್ಗಳು.