ದೊಡ್ಮನೆ ಬಾಗಿಲು ಬಂದ್​... ಕಿಚ್ಚನ ಮುಂದೆ ರಕ್ಷಿತಾ ಶೆಟ್ಟಿ ಹೇಳಿದ ಮಾತು ಕೊನೆಗೂ ನಿಜವಾಯ್ತು! Bigg Boss Kannada 12

Bigg Boss Kannada 12
Published on

Bigg Boss Kannada 12 : ಕನ್ನಡ ಕಿರುತೆರೆ ಲೋಕದ ಅತಿದೊಡ್ಡ ರಿಯಾಲಿಟಿ ಶೋ ಎಂದೇ ಪ್ರಸಿದ್ಧಿಯಾಗಿರುವ ‘ಬಿಗ್​ಬಾಸ್ ಕನ್ನಡ ಸೀಸನ್ 12’ ಅನಿರೀಕ್ಷಿತವಾಗಿ ರದ್ದಾಗಿದೆ. ಶೋ ಶುರುವಾಗಿ ಕೇವಲ ಒಂದು ವಾರ ಮಾತ್ರ ಕಳೆದಿತ್ತು. ಎರಡನೇ ವಾರದ ಎರಡನೇ ದಿನದಲ್ಲೇ ಬಿಗ್​ಬಾಸ್​ ಮನೆಗೆ ಬೀಗ ಜಡಿಯಲಾಗಿದೆ. ರಾಜ್ಯ ಸರ್ಕಾರದಿಂದ ನೋಟಿಸ್​ ಜಾರಿಯಾದ ಬೆನ್ನಲ್ಲೇ ದೊಡ್ಮನೆಯ ಬಾಗಿಲನ್ನು ಅಧಿಕಾರಿಗಳು ಮುಚ್ಚಿದ್ದಾರೆ. ಅದಕ್ಕೂ ಮುನ್ನ ಎಲ್ಲ ಸ್ಪರ್ಧಿಗಳನ್ನು ಮನೆಯಿಂದ ಹೊರಗೆ ಕಳುಹಿಸಲಾಯಿತು. ಶೋ ಮತ್ತೆ ಶುರುವಾಗುತ್ತಾ? ಇಲ್ಲವಾ? ಅನ್ನೋದು ಇಂದು ನಿರ್ಧಾರವಾಗಲಿದೆ.

ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ (KSPCB) ಬಿಗ್​ಬಾಸ್​ ಶೋ ಆಯೋಜಕರಾದ ವೆಲ್ಸ್ ಸ್ಟುಡಿಯೋಸ್ ಮತ್ತು ಎಂಟರ್‌ಟೈನ್‌ಮೆಂಟ್ ಪ್ರೈವೇಟ್ ಲಿಮಿಟೆಡ್‌ಗೆ ಅಕ್ಟೋಬರ್ 6ರ ಸೋಮವಾರದಂದು ನೋಟಿಸ್​ ಜಾರಿ ಮಾಡಿತು. ಅದರ ಪ್ರಕಾರ, ವೆಲ್ಸ್​ ಸ್ಟುಡಿಯೋ ಸಂಸ್ಕರಿಸದ ತ್ಯಾಜ್ಯ ನೀರನ್ನು ಸರಿಯಾದ ಒಳಚರಂಡಿ ಹಾಗೂ ಸಂಸ್ಕರಣೆಯಿಲ್ಲದೆ ನೇರವಾಗಿ ಸಾರ್ವಜನಿಕ ಚರಂಡಿಗಳಿಗೆ ಬಿಡುತ್ತಿದೆ. ಈ ಕಾಯ್ದೆಯು 1974ರ ನೀರು (ಮಾಲಿನ್ಯ ತಡೆಗಟ್ಟುವಿಕೆ ಮತ್ತು ನಿಯಂತ್ರಣ) ಕಾಯ್ದೆಯನ್ನು ಉಲ್ಲಂಘಿಸುತ್ತದೆ. ಇದರ ಪರಿಣಾಮವಾಗಿ, ಮಾಲಿನ್ಯ ಮಂಡಳಿಯು ಮುಂದಿನ ಸೂಚನೆ ನೀಡುವವರೆಗೂ ವೆಲ್ಸ್​ ಸ್ಟುಡಿಯೋ ತನ್ನ ಕಾರ್ಯಾಚರಣೆಯನ್ನು ಸ್ಥಗಿತಗೊಳಿಸುವಂತೆ ನಿರ್ದೇಶಿಸಿತು. ಯಾವಾಗ ಕೆಎಸ್​ಪಿಸಿಬಿ ಸೂಚನೆ ನೀಡಿತೋ ರಾಮನಗರದ ತಹಸಿಲ್ದಾರ್ ಅವರು ಜಾಲಿವುಡ್​ ಸ್ಟುಡಿಯೋಸ್​ಗೆ ಬಂದು ಬಾಗಿಲನ್ನು ಬಂದ್​ ಮಾಡಿಸಿದರು. ಹೀಗಾಗಿ ಶೋ ರದ್ದಾಗಿದೆ.

ರಕ್ಷಿತಾ ಶೆಟ್ಟಿ ಹೇಳಿದ್ದು ನಿಜವಾಯ್ತು ಎಂದ ನೆಟ್ಟಿಗರು!

ಬಿಗ್​ಬಾಸ್​ ಶೋ ರದ್ದಾದ ಬೆನ್ನಲ್ಲೇ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ಟ್ರೋಲ್​ ಆಗುತ್ತಿದೆ. ಅದರಲ್ಲೂ ಸ್ಪರ್ಧಿಗಳಲ್ಲಿ ಒಬ್ಬರಾದ ರಕ್ಷಿತಾ ಶೆಟ್ಟಿ ಹೇಳಿದ್ದನ್ನು ಉಲ್ಲೇಖಿಸಿ ಅನೇಕ ಮೀಮ್​​ಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿವೆ. ಅಷ್ಟಕ್ಕೂ ರಕ್ಷಿತಾ ಶೆಟ್ಟಿ ಹೇಳಿದ್ದೇನು ಅನ್ನೋದನ್ನು ನೋಡುವುದಾದರೆ, ಶೋ ಆರಂಭವಾದ ಮೊದಲ ಎರಡು ದಿನಗಳಲ್ಲೇ ರಕ್ಷಿತಾ ಮನೆಯಿಂದ ಎಲಿಮಿನೇಟ್​ ಆದರು. ಈ ವೇಳೆ ಉಳಿದ ಸ್ಪರ್ಧಿಗಳು ಅವರ ಬಗ್ಗೆ ನಾನಾ ಕಾರಣಗಳನ್ನು ನೀಡಿ ನಾಮಿನೇಟ್​ ಮಾಡಿ ಎಲಿಮಿನೇಟ್​ಗೆ ಕಾರಣರಾದರು. ಇದರಿಂದ ರಕ್ಷಿತಾ ಭಾರಿ ಅಸಮಾಧಾನಗೊಂಡಿದ್ದರು. ಆದರೆ, ರಕ್ಷಿತಾ ಅವರನ್ನು ಬಿಗ್​ಬಾಸ್​, ವಾಪಸ್​ ಮನೆಗೆ ಕಳುಹಿಸಿರಲಿಲ್ಲ. ಸೀಕ್ರೆಟ್​ ರೂಮ್​ನಲ್ಲಿ ಅವರನ್ನು ಇರಿಸಲಾಗಿತ್ತು. ವಾರದ ಕೊನೆಯಲ್ಲಿ ನಡೆದ ವಾರದ ಕತೆ ಕಿಚ್ಚನ ಜೊತೆ ಸಂಚಿಕೆಯಲ್ಲಿ ಮತ್ತೆ ರಕ್ಷಿತಾ ಅವರನ್ನು ವೇದಿಕೆ ಬರಮಾಡಿಕೊಂಡ ನಿರೂಪಕ ಸುದೀಪ್​, ಆಕೆಯ ಜೊತೆ ಒಂದಿಷ್ಟು ಮಾತನಾಡಿ, ಮತ್ತೆ ಮನೆಯೊಳಗೆ ಕಳುಹಿಸಿಕೊಟ್ಟರು. ಮನೆಯೊಳಗೆ ಹೋಗುವ ಮುನ್ನ ಸುದೀಪ್​ ಮುಂದೆ ಸ್ಪರ್ಧಿಗಳ ಮೇಲಿರುವ ತಮ್ಮ ಅಸಮಾಧಾನವನ್ನು ರಕ್ಷಿತಾ ಹೊರಹಾಕಿದ್ದರು.

ನನ್ನನ್ನು ನಾಮಿನೇಟ್​ ಮಾಡಿದ್ದಕ್ಕೆ ಸರಿಯಾದ ಕಾರಣ ಕೊಡಲಿಲ್ಲ. ನಾನು ಅವರನ್ನು ಬಿಡುವುದಿಲ್ಲ ಎಂದು ರಕ್ಷಿತಾ ಹೇಳಿದ್ದರು. ನೀವು ಮನೆಯ ಒಳಗಡೆ ಹೋದರೆ, ಯಾರನ್ನು ಹೊರಗಡೆ ಕಳುಹಿಸುತ್ತೀರಾ ಎಂದು ಸುದೀಪ್​ ಪ್ರಶ್ನೆ ಮಾಡಿದರು. ಅದಕ್ಕೆ ಉತ್ತರಿಸಿದ ರಕ್ಷಿತಾ ನಾನು ಒಳಗೆ ಹೋಗಿ ಎಲ್ಲರನ್ನು ಆಚೆ ಹಾಕುತ್ತೇನೆ ಎಂದಿದ್ದರು. ರಕ್ಷಿತಾ ಈ ಮಾತನ್ನು ಹೇಳಿದ ಎರಡೇ ದಿನಕ್ಕೆ ಇಡೀ ಸ್ಪರ್ಧಿಗಳು ಬಿಗ್​ಬಾಸ್​ ಮನೆಯಿಂದ ಹೊರಗಡೆ ಬಂದಿದ್ದಾರೆ. ಇಡೀ ಶೋ ಬಂದ್​ ಆಗಿದೆ. ಹೀಗಾಗಿ ರಕ್ಷಿತಾ ಅವರ ಮಾತು ನಿಜವಾಗಿದೆ ಎಂದು ಸಾಕಷ್ಟು ಮೀಮ್​ಗಳು ಹರಿದಾಡುತ್ತಿವೆ.

ಅಂದಹಾಗೆ, ಬಿಗ್​ಬಾಸ್​ ಸೆಟ್​ ಅನ್ನು ರಾಮನಗರ ಜಿಲ್ಲೆಯ ಬಿಡದಿ ಕೈಗಾರಿಕಾ ಪ್ರದೇಶದಲ್ಲಿ ನಿರ್ಮಿಸಲಾಗಿದೆ. ಈ ವರ್ಷ ಮಾರ್ಚ್ 19 ಮತ್ತು ಜೂನ್ 11 ರಂದು ಸ್ಥಳೀಯ ಅಧಿಕಾರಿಗಳು ಸ್ಥಳವನ್ನು ತಪಾಸಣೆ ನಡೆಸಿದ್ದರು. ಆದರೂ, ಮಾಲಿನ್ಯ ನಿಯಂತ್ರಣ ಮಂಡಳಿಯಿಂದ ಕಡ್ಡಾಯ ಅನುಮತಿ ಪಡೆಯಲು ಸ್ಟುಡಿಯೋ ವಿಫಲವಾಗಿದೆ ಎಂದು ವರದಿಗಳು ಸೂಚಿಸುತ್ತವೆ. ಮನೋರಂಜನಾ ಉದ್ಯಾನವನದ ಶೈಲಿಯ ಆವರಣದಲ್ಲಿ ಉತ್ಪತ್ತಿಯಾಗುವ ತ್ಯಾಜ್ಯ ನೀರನ್ನು ಸಂಸ್ಕರಿಸದೆ ಹೊರಗಡೆ ಬಿಡುಗಡೆ ಮಾಡಲಾಗುತ್ತಿದೆ. ಇದು ಪರಿಸರ ಮಾಲಿನ್ಯಕ್ಕೆ ಕಾರಣವಾಗುತ್ತಿದೆ ಎಂದು ಅಧಿಕಾರಿಗಳು ವರದಿ ಮಾಡಿದ್ದಾರೆ. ಈ ಹಿನ್ನೆಲೆಯಲ್ಲಿ ನೋಟಿಸ್​ ಜಾರಿಯಾಗಿತ್ತು.

ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುವ ಈ ಕಾರ್ಯಕ್ರಮವು ಪ್ರಸ್ತುತ ಎರಡನೇ ವಾರದಲ್ಲಿತ್ತು. ಅಷ್ಟರಲ್ಲೇ ಶೋಗೆ ವಿಘ್ನ ಎದುರಾಗಿದೆ. ಈ ರೀತಿ ಅರ್ಧಕ್ಕೆ ಸ್ಥಗಿತಗೊಳ್ಳುತ್ತಿರುವುದು ಎರಡನೇ ಬಾರಿಗೆ ಆಗಿದೆ. ಈ ಹಿಂದೆಯೂ 2021ರಲ್ಲಿ ಕೋವಿಡ್ ಹಿನ್ನೆಲೆಯಲ್ಲಿ ಶೋ ಸ್ಥಗಿತಗೊಂಡಿತ್ತು.

ಇನ್ನು ತಮ್ಮ ಮೇಲೆ ಬಂದಿರುವ ಆರೋಪಗಳ ಬಗ್ಗೆ ಅಥವಾ ಮುಂದಿನ ಕ್ರಮದ ಬಗ್ಗೆ ವೆಲ್ಸ್ ಸ್ಟುಡಿಯೋಸ್ ಮತ್ತು ಎಂಟರ್‌ಟೈನ್‌ಮೆಂಟ್ ಪ್ರೈವೇಟ್ ಲಿಮಿಟೆಡ್ ಇನ್ನೂ ಯಾವುದೇ ಅಧಿಕೃತ ಹೇಳಿಕೆಯನ್ನು ನೀಡಿಲ್ಲ. ಆದರೆ, ಮ್ಯಾನೆಜ್​ಮೆಂಟ್ ಆಯೋಜಕರು ಬಿಗ್​ಬಾಸ್​ ಮನೆ ಸೀಜ್​​ ತೆರವಿಗೆ ಈಗಾಗಲೇ ಕೋರ್ಟ್​ಗೆ ಮನವಿ ಸಲ್ಲಿಸಿದ್ದಾರೆ. ಒಂದು ವೇಳೆ ಕೂಡಲೇ ಅನುಮತಿ ಸಿಕ್ಕರೆ ಶೋ ನಡೆಸುವ ಚಿಂತನೆಯಲ್ಲಿದ್ದಾರೆ. ಅನುಮತಿ ದೊರೆಯದಿದ್ದರೆ ಮುಂದೇನು? ಎಂಬ ಆಲೋಚನೆಯಲ್ಲಿದ್ದು, ಶೋ ನಡೆಸಬೇಕಾ? ಅಥವಾ ಬೇಡ್ವಾ ಎಂದು ಇಂದು ಸಂಜೆಯೊಳಗೆ ನಿರ್ಧಾರ ಪ್ರಕಟಿಸುವ ಸಾಧ್ಯತೆ ಇದೆ ಎಂದು ವರದಿ ಮೂಲಗಳು ತಿಳಿಸಿವೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net