ಮತ್ತೊಂದು ಕನ್ನಡ ಚಿತ್ರಕ್ಕೆ ಆಯ್ಕೆಯಾದ ಬಿಗ್ ಬಾಸ್ ಬೆಡಗಿ ದಿವ್ಯಾ ಸುರೇಶ್!

Published on
ಬೆಂಗಳೂರು: ಟಿಕ್​ಟಾಕ್ ಮತ್ತು ಬಿಗ್ ಬಾಸ್ ಶೋ ಮೂಲಕ ಸಾಮಾಜಿಕ ಜಾಲತಾಣದಲ್ಲಿ ಫೇಮಸ್ ಆಗಿ ನಂತರ 'ರೌಡಿ ಬೇಬಿ' ಎಂಬ ಕನ್ನಡ ಸಿನಿಮಾದ ಮೂಲಕ ಸ್ಯಾಂಡಲ್ ವುಡ್ ಗೆ ಪಾದಾರ್ಪಣೆ ಮಾಡಿದ ನಟಿ ದಿವ್ಯಾ ಸುರೇಶ್ ಈಗ ಮತ್ತೊಂದು ಕನ್ನಡದ ಸಿನಿಮಾಗೆ ಸಹಿ ಹಾಕಿದ್ದಾರೆ. ಹೌದು, ಖ್ಯಾತ ಹಾಸ್ಯ ನಟ ಡಿಂಗ್ರಿ ನಾಗರಾಜ್ ಅವರ ಸುಪುತ್ರ ನಟ ರಾಜವರ್ಧನ್ ಅವರ ಬಹುನಿರೀಕ್ಷಿತ ಮೂರನೇ ಸಿನಿಮಾ ಆಗಿರುವ 'ಹಿರಣ್ಯ'ದಲ್ಲಿ ನಟಿ ದಿವ್ಯಾ ಸುರೇಶ್ ಕಾಣಿಸಿಕೊಳ್ಳಲಿದ್ದಾರೆ.

ಅಂದಹಾಗೆ, ಈ ಸಿನಿಮಾದಲ್ಲಿ ಒಂದು ವಿಶೇಷ ಪಾತ್ರದಲ್ಲಿ ನಟಿ ದಿವ್ಯಾ ಸುರೇಶ್ ತೆರೆ ಮೇಲೆ ಮಿಂಚಲು ರೆಡಿಯಾಗಿದ್ದಾರೆ. ಪ್ರವೀಣ್ ಅವ್ಯುಕ್ತ್ ಅವರ ನಿರ್ದೇಶನದಲ್ಲಿ ಮೂಡಿ ಬರ್ತಿರುವ 'ಹಿರಣ್ಯ'ದಲ್ಲಿ ನಟ ರಾಜವರ್ಧನ್ ಹಾಗೂ ನಟಿ ದಿವ್ಯಾ ಸುರೇಶ್ ಅವರು ಇಬ್ಬರೂ ತುಂಬಾ ಆತ್ಮೀಯ ಸ್ನೇಹಿತರು ಆಗಿರುತ್ತಾರೆ ಎನ್ನಲಾಗಿದೆ. 'ನಾವು (ನಟ ರಾಜವರ್ಧನ್ ಹಾಗೂ ನಟಿ ದಿವ್ಯಾ ಸುರೇಶ್) ಒಟ್ಟಿಗೆ ನಟಿಸುವ ಅವಕಾಶ 'ಹಿರಣ್ಯ' ಸಿನಿಮಾ ಮೂಲಕ ನನಸಾಗ್ತಿದೆ' ಎಂದಿದ್ದಾರೆ ನಟಿ ದಿವ್ಯಾ ಸುರೇಶ್.
ಇನ್ನು, ಇದೇ ಮಾರ್ಚ್ 9 ರಿಂದ ಈ ಸಿನಿಮಾದಲ್ಲಿನ ನಟಿ ದಿವ್ಯಾ ಸುರೇಶ್ ಅವರ ಭಾಗದ ಶೂಟಿಂಗ್ ಶುರುವಾಗಲಿದೆಯಂತೆ. 'ಹಿರಣ್ಯ' ಚಿತ್ರದಲ್ಲಿ ನಟ ರಾಜವರ್ಧನ್ ಗೆ ನಾಯಕಿಯಾಗಿ ಮಾಡೆಲ್ ರಿಹಾನಾ ಅವರು ಸ್ಯಾಂಡಲ್​ವುಡ್​ಗೆ ಪಾದಾರ್ಪಣೆ ಮಾಡುತ್ತಿದ್ದು, ವೇದಾಸ್ ಇನ್ಫಿನೈಟ್ ಪಿಕ್ಚರ್ಸ್ ಬ್ಯಾನರ್ ಅಡಿಯಲ್ಲಿ ನಿರ್ಮಾಪಕರಾದ ವಿಘ್ನೇಶ್ವರ.ಯು ಮತ್ತು ವಿಜಯ್ ಕುಮಾರ್.ಬಿ.ವಿ ಅವರು ಈ ಸಿನಿಮಾಗೆ ಬಂಡವಾಳ ಹೂಡಲಿದ್ದಾರೆ. ಈ ಚಿತ್ರಕ್ಕೆ ಯೋಗೇಶ್ವರನ್‌ ಆರ್‌ ಅವರ ಛಾಯಾಗ್ರಹಣವಿದ್ದು. ಜ್ಯೂಡಾ ಸ್ಯಾಂಡಿ ಅವರು ಸಂಗೀತ ನಿರ್ದೇಶನ ಮಾಡಲಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net