

ಬೆಂಗಳೂರು: ಸ್ಯಾಂಡಲ್ವುಡ್ ನಿರ್ಮಾಪಕ ಸೌಂದರ್ಯ ಜಗದೀಸ್ ಏಪ್ರಿಲ್ 14ರಂದು ವಿಧಿವಶರಾದರು. ಅವರು ಮಹಾಲಕ್ಷ್ಮಿ ಲೇಔಟ್ನಲ್ಲಿರುವ ತಮ್ಮ ನಿವಾಸದಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದರು. ಸಾಲಭಾದೆಯಿಂದ ಅವರು ದುಡುಕಿನ ನಿರ್ಧಾರ ತೆಗೆದುಕೊಂಡರು ಎಂದು ಹೇಳಲಾಗಿತ್ತು. ಇದೀಗ ನಿರ್ಮಾಪಕ ಸೌಂದರ್ಯ ಜಗದೀಶ್ ಆತ್ಮಹತ್ಯೆಗೆ ಕೇಸ್ಗೆ ಬಿಗ್ ಟ್ವಿಸ್ಟ್ ಸಿಕ್ಕಿದೆ.
ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಎ1 ಆರೋಪಿಯಾದ ಪವಿತ್ರಾಗೌಡ ಮತ್ತು ಎ2 ಆರೋಪಿಯಾಗಿ ನಟ ದರ್ಶನ್ ಸೆರೆವಾಸದಲ್ಲಿದ್ದಾರೆ. ಸದ್ಯ ಪವಿತ್ರಾಗೌಡ ಮತ್ತು ನಿರ್ಮಾಪಕ ಸೌಂದರ್ಯ ಜಗದೀಶ್ ನಡುವೆ ಹಣದ ವ್ಯವಹಾರ ನಡೆದಿತ್ತು ಎಂಬ ಮಾಹಿತಿ ಬೆಳಕಿಗೆ ಬಂದಿದೆ. ಪವಿತ್ರಾಗೌಡಗೆ ನಿರ್ಮಾಪಕ ಸೌಂದರ್ಯ ಜಗದೀಶ್ 2 ಕೋಟಿ ಹಣ ವರ್ಗಾವಣೆ ಮಾಡಿರುವ ದಾಖಲೆಗಳು ಸಿಕ್ಕಿವೆ. ಈ ಹಣ ವರ್ಗಾವಣೆ ವಿಚಾರ ಚರ್ಚೆಗೆ ಬರುತ್ತಿದ್ದಂತೆ ಜಗದೀಶ್ ಆತ್ಮಹತ್ಯೆಗೂ ಇದಕ್ಕೂ ಏನಾದರೂ ಲಿಂಕ್ ಇದ್ಯಾ ಎನ್ನುವ ಮಾತುಗಳು ಕೇಳಿಬರುತ್ತಿವೆ.
ಸೌಂದರ್ಯ ಜಗದೀಶ್ ಅವರು ಮೃತಪಟ್ಟ ಒಂದು ತಿಂಗಳ ನಂತರ ಅವರ ರೂಮಿನಲ್ಲಿ ಪತ್ತೆಯಾಗಿದ್ದ ಡೆತ್ನೋಟ್ನಲ್ಲಿ ಸೌಂದರ್ಯ ಕನ್ಸ್ಟ್ರಕ್ಷನ್ಸ್ನ ಸಹ ಪಾಲುದಾರರಿಂದ ಸುಮಾರು 60 ಕೋಟಿ ರೂಪಾಯಿ ನಷ್ಟವಾಗಿದ್ದು, ಮೋಸ ಮಾಡಿದ್ದಾರೆ ಎಂದು ಬರೆದಿತ್ತು. ಸೌಂದರ್ಯ ಜಗದೀಶ್ ಆತ್ಮಹತ್ಯೆ ಬಳಿಕ ಪಾಲುದಾರರಿಂದ 60 ಕೋಟಿ ನಷ್ಟವಾಗಿರುವುದಾಗಿ ಜಗದೀಶ್ ಪತ್ನಿ ರೇಖಾ ಅವರು ದೂರು ದಾಖಲಿಸಿದ್ದರು. ರೇಖಾ ಅವರು ದೂರು ನೀಡಿದ ನಂತರ, ಪಾಲುದಾರ ಸುರೇಶ್ ವ್ಯವಹಾರದ ದಾಖಲೆಯನ್ನು ಪೊಲೀಸರಿಗೆ ನೀಡಿದ್ದಾರೆ.
ಸೌಂದರ್ಯ ಜಗದೀಶ್ 2 ಕೋಟಿ ಹಣ ಕೊಟ್ಟ ಮಾರನೇ ದಿನವೇ ಪವಿತ್ರಾಗೌಡ ಮನೆ ಖರೀದಿಸಿದ್ದಾರೆ. 2017 ನವೆಂಬರ್ 13 ರಂದು 1 ಕೋಟಿ ರೂ. ಹಾಗೂ 2018 ಜನವರಿ 23ರಂದು ಮತ್ತೆ 1 ಕೋಟಿ ರೂಪಾಯಿಯನ್ನು ಪವಿತ್ರಾಗೌಡಗೆ ವರ್ಗಾವಣೆ ಮಾಡಿದ್ದಾರೆ. ಇದಾದ ಮರುದಿನವೇ 2018 ಜನವರಿ 24ರಂದು ಪವಿತ್ರಾಗೌಡ ಆರ್.ಆರ್.ನಗರದ ಕೆಂಚನಹಳ್ಳಿಯಲ್ಲಿ 1. 75 ಲಕ್ಷ ಮೌಲ್ಯದ ಮನೆ ಖರೀದಿಸಿದ್ದಾರೆ. ಪವಿತ್ರಾಗೌಡ ಮನೆ ಖರೀದಿ ಪತ್ರದಲ್ಲಿ ಸಾಕ್ಷಿಯಾಗಿ ಸೌಂದರ್ಯ ಜಗದೀಶ್ ಸಹಿ ಹಾಕಿದ್ದಾರೆ. ಈ ಹಣದ ವ್ಯವಹಾರವನ್ನು ಪಾಲುದಾರರಿಂದ ಸೌಂದರ್ಯ ಜಗದೀಶ್ ಮುಚ್ಚಿಟ್ಟಿದ್ದರು ಎನ್ನಲಾಗಿದೆ.
ಸೌಂದರ್ಯ ಜಗದೀಶ್ ಆತ್ಮಹತ್ಯೆ ಬಳಿಕ ಪಾಲುದಾರರ ವಿರುದ್ಧ ಅವರ ಪತ್ನಿ ರೇಖಾ ದೂರು ನೀಡಿದ ಬಳಿಕ ವ್ಯವಹಾರದ ದಾಖಲೆ ಪಾಲುದಾರರು ಕಲೆಹಾಕಿದ್ದಾರೆ. ಆ ವೇಳೆ ಸಿಕ್ಕಿದ ದಾಖಲೆಯಲ್ಲಿ ದರ್ಶನ್ ಮತ್ತು ಪವಿತ್ರಾಗೌಡ ಹಾಗೂ ಜಗದೀಶ್ ನಡುವಿನ ವ್ಯವಹಾರ ಪತ್ತೆಯಾಗಿದೆ. ಈ ಹಣದ ವ್ಯವಹಾರದ ದಾಖಲೆಯನ್ನು ಪಾಲುದಾರ ಸುರೇಶ್ ಪೊಲೀಸರಿಗೆ ನೀಡಿದ್ದಾರೆ.
ಪವಿತ್ರಾಗೌಡಗೆ ಸೌಂದರ್ಯ ಜಗದೀಶ್ ಹಣ ಕೊಟ್ಟ ದಾಖಲೆ ಮಾತ್ರ ಲಭ್ಯವಾಗಿದೆ. ಆದರೆ ಈವರೆಗೂ ಸೌಂದರ್ಯ ಜಗದೀಶ್ಗೆ ಪವಿತ್ರಾಗೌಡ ಹಣ ವಾಪಸ್ ನೀಡಲ್ಲ. ದರ್ಶನ್ ಕಾರಣಕ್ಕೆ ಪವಿತ್ರಾಗೆ 2 ಕೋಟಿ ರೂಪಾಯಿ ಜಗದೀಶ್ ನೀಡಿದ್ರಾ ಎಂಬ ಅನುಮಾನ ಶುರುವಾಗಿದೆ. ಯಾವ ಕಾರಣಕ್ಕೆ ಹಣ ಕೊಟ್ಟಿದ್ದಾರೆ ಎಂಬುದು ಸ್ಪಷ್ಟವಾಗಿಲ್ಲ. ದರ್ಶನ್ ಒತ್ತಡಕ್ಕೆ ಮಣಿದು ಹಣ ನೀಡಿರಬಹುದೇ ಎಂಬ ಅನುಮಾನದ ಮೇಲೆ ಮಹಾಲಕ್ಷ್ಮಿ ಲೇಔಟ್ ಪೊಲೀಸರು ತನಿಖೆ ನಡೆಸುತ್ತಿದ್ದಾರೆ ಎನ್ನಲಾಗಿದೆ.