ನಕಲಿ ಎನ್​ಸಿಬಿ ಅಧಿಕಾರಿಗಳ ಕಿರುಕುಳ; ನಟಿ ಆತ್ಮಹತ್ಯೆ

Published on
ಮುಂಬೈ: ಭಾರತದಲ್ಲಿ ಕಳೆದ ಎರಡು ವರ್ಷಗಳಿಂದ ಸಿನಿಮಾ ಸೆಲೆಬ್ರಿಟಿಗಳಿಗೆ ನಡುಕ ಹುಟ್ಟಿಸಿದೆ ಎನ್​ಸಿಬಿ. ಎನ್​ಸಿಬಿ ಅಧಿಕಾರಿಗಳ ಹೆಸರು ತೆಗೆದರೆ ದೊಡ್ಡಣ್ಣ ಬಾಲಿವುಡ್​ನ ಖ್ಯಾತ ನಟ-ನಟಿಯರೂ ಹೆದರುತ್ತಾರೆ. ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋ ಎಂದರೆ ಸಾಕು ಬಾಲಿವುಡ್​ನ ನಟ ಶಾರುಖ್ ಖಾನ್, ನಟಿ ದೀಪಿಕಾ ಪಡುಕೋಣೆ, ನಿರ್ಮಾಪಕ ಕರಣ್ ಜೋಹಾರ್, ಟಾಲಿವುಡ್​ನ ನಟಿ ರಾಕುಲ್ ಪ್ರೀತ್ ಸಿಂಗ್, ನಟ ರಾಣಾ ದಗ್ಗುಬಾಟಿ, ನಟ ರವಿತೇಜ ಎಂಬಂತೆ ಹಲವು ಸ್ಟಾರ್ ನಟರಿಗೂ ಬಹಳ ಭಯ ಮತ್ತು ಇದರಿಂದ ಸಂಕಷ್ಟಕ್ಕೆ ಸಿಲುಕಿದ್ದಾರೆ. ಇಂತಹ ಭಯವನ್ನೇ ಬಂಡವಾಳ ಮಾಡಿಕೊಂಡ ಕೆಲವು ಕೀಡಿಗೇಡಿಗಳು ಭೋಜಪುರಿ ನಟಿಯೊಬ್ಬರನ್ನು ಬೆದರಿಸಿದ್ದು, ನಟಿ ಆತ್ಮಹತ್ಯೆಗೆ ಶರಣಾಗಿದ್ದಾರೆ. ಈ ಸುದ್ದಿ ಸದ್ಯ ಚಿತ್ರರಂಗದಲ್ಲಿ ಎಲ್ಲರ ಆಘಾತಕ್ಕೆ ಕಾರಣವಾಗಿದೆ.
28 ವರ್ಷದ ಭೋಜಪುರಿ ನಟಿ ಮುಂಬೈನಲ್ಲಿ ನೆಲೆಸಿದ್ದು, ಡಿ.20 ರಂದು ತಮ್ಮ ಇಬ್ಬರು ಗೆಳೆಯರೊಟ್ಟಿಗೆ ಐಶಾರಾಮಿ ಹೋಟಲ್ ಒಂದಕ್ಕೆ ಪಾರ್ಟಿ ಮಾಡಲು ಹೋಗಿದ್ದರು. ಹೋಟೆಲ್​ನಲ್ಲಿ ಗೆಳೆಯರೊಟ್ಟಿಗೆ ಇದ್ದ ನಟಿಯನ್ನು ಗಮನಿಸಿದ ಕೀಡಿಗೇಡಿಗಳು ಅವರನ್ನು ಡ್ರಗ್ಸ್ ಕೇಸ್ ದಾಖಲಿಸುವುದಾಗಿ ಬೆದರಿಸಿದ್ದಾರೆ. ನಂತರ 40 ಲಕ್ಷ ಡಿಮ್ಯಾಂಡ್ ಮಾಡಿದ್ದಾರೆ. ಕೇಸ್​ಗೆ ಹೆದರಿ ನಟಿ 20 ಲಕ್ಷ ಹಣ ನೀಡಿದ್ದಾರೆ. ಆದರೆ, ಉಳಿದ 20 ಲಕ್ಷಕ್ಕೆ, ನಟಿಗೆ ಆ ನಕಲಿ ಎನ್​ಸಿಬಿ ಅಧಿಕಾರಿಗಳು ಕಿರುಕುಳ ನೀಡಿದ್ದಾರೆ. ಇದರಿಂದ ಹೆದರಿದ ನಟಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಅಸಹಜ ಸಾವು ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ಶುರು ಮಾಡಿದ ನಂತರ ವಿಷಯ ಬೆಳಕಿಗೆ ಬಂದಿದೆ. ಇದೀಗ, ಇಬ್ಬರು ನಕಲಿ ಎನ್​ಸಿಬಿ ಅಧಿಕಾರಿಗಳನ್ನು ಮತ್ತು ನಟಿಯ ಜೊತೆಗೆ ಪಾರ್ಟಿಗೆ ಹೋದ ಇಬ್ಬರು ಗೆಳೆಯರನ್ನು ಬಂಧಿಸಲಾಗಿದೆ. ನಟಿಯ ಗೆಳೆಯರು ಕೂಡ ನಕಲಿ ಎನ್​ಸಿಬಿ ಅಧಿಕಾರಿಗಳೊಂದಿಗೆ ಶಾಮೀಲಾಗಿದ್ದಾರೆ ಎಂಬ ಅನುಮಾನಗಳು ಕೇಳಿಬರುತ್ತಿವೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net