

ಕುಂಬಳೆ: ಕುಂಬಳೆಯ ಕಣಿಪುರ ಕ್ಷೇತ್ರದಲ್ಲಿ ಸೆ.29ರಂದು ವಿಶೇಷ ಭಜನಾ ಕಮ್ಮಟ ಜರುಗಲಿದೆ. ಕನ್ನಡದ ಖ್ಯಾತ ಗಾಯಕ ಶಂಕರ್ ಶ್ಯಾನುಭೋಗ್ ಸಾರಥ್ಯದಲ್ಲಿ ಜರಗುವ ಕಮ್ಮಟ ಕಾಸರಗೋಡಿನ ಜನಪ್ರಿಯ ಸಾಂಸ್ಕೃತಿಕ ಸಂಸ್ಥೆ ರಂಗಚಿನ್ನಾರಿಯ ಸಹಸಂಸ್ಥೆಗಳಾದ ನಾರಿ ಚಿನ್ನಾರಿ ಮತ್ತು ಸ್ವರ ಚಿನ್ನಾರಿ ಆಯೋಜಿಸುತ್ತಿದ್ದು, ಕನ್ನಡ ಸಂಸ್ಕೃತಿ ಇಲಾಖೆ ಸಹಯೋಗದೊಂದಿಗೆ ಜರುಗಲಿದೆ.
ಸೆ.29ರಂದು ಬೆಳಗ್ಗೆ ಉದ್ಘಾಟನೆಗೊಂಡು ಸಂಜೆ 4ರ ತನಕ ಭಕ್ತಿರಸ ಗಾಯನ ಕಲಿಕಾ ಕಮ್ಮಟದಲ್ಲಿ ಕುಂಬಳೆ ಸಮೀಪದ 500 ಭಜನಾರ್ಥಿಗಳು ಪಾಲ್ಗೊಳ್ಳುವುದನ್ನು ಕಣಿಪುರ ಕ್ಷೇತ್ರದಲ್ಲಿ ಶನಿವಾರ ನಡೆದ ಭಜಕರ ಸಿದ್ಧತಾ ಸಭೆಯಲ್ಲಿ ನಿರ್ಣಯಿಸಲಾಯಿತು. ಸಮಾರೋಪ ಸಭೆಯಲ್ಲಿ ಹಿರಿಯ ಭಜನಾರ್ಥಿಗಳನ್ನು ಸನ್ಮಾನಿಸಲು ನಿರ್ಣಯಿಸಲಾಯಿತು.
ರಂಗಚಿನ್ನಾರಿ ಸಂಸ್ಥೆ ಸಂಚಾಲಕ, ರಂಗಕರ್ಮಿ ಕಾಸರಗೋಡು ಚಿನ್ನಾ ಆಶಯ ಮಂಡಿಸಿದರು. ಹರಿದಾಸ, ಕಲಾರತ್ನ ಶಂ.ನಾ.ಅಡಿಗ ಕುಂಬಳೆ ಅಧ್ಯಕ್ಷತೆ ವಹಿಸಿದ್ದರು.
ಪ್ರಾದೇಶಿಕ ಸಂಘಟನಾ ಸಮಿತಿ ಅಧ್ಯಕ್ಷ ಸುಧಾಕರ ಕಾಮತ್ ಕುಂಬಳೆ, ಉಪಾಧ್ಯಕ್ಷ ಸತೀಶ್ ನಾಯ್ಕಪು, ಕಾರ್ಯದರ್ಶಿ ಮಧುಸೂಧನ ಕಾಮತ್, ಕುಂಬಳೆ ಸಮೀಪದ ಭಜನಾ ತರಬೇತುದಾರರು ಪಾಲ್ಗೊಂಡಿದ್ದರು.