

ಬೆಂಗಳೂರು: 'ಮಫ್ತಿ' ಬಿಡುಗಡೆಯಾದ ನಂತರದ ದಿನಗಳಲ್ಲಿ 'ಭೈರತಿ ರಣಗಲ್' ಎಂಬ ಆ ಚಿತ್ರದ ಮುಂದುವರೆದ ಭಾಗ ಬರುತ್ತದೆ, ಅದರಲ್ಲಿ ಭೈರತಿ ರಣಗಲ್ನ ಹಿಂದಿ ವೃತ್ತಾಂತವಿರುತ್ತದೆ, ಈ ಚಿತ್ರವನ್ನು ಗೀತಾ ಶಿವರಾಜಕುಮಾರ್ ಅವರೇ ನಿರ್ಮಿಸುತ್ತಾರೆ ಎಂಬ ಸುದ್ದಿಯೊಂದು ಕೇಳಿ ಬಂದಿತ್ತು. ಆದರೆ, ಆ ಚಿತ್ರವನ್ನು ನಿರ್ದೇಶಿಸಬೇಕಿದ್ದ ನರ್ತನ್, ಯಶ್ ಚಿತ್ರ ನಿರ್ದೇಶಿಸಿಬೇಕಿದ್ದರಿಂದ 'ಭೈರತಿ ರಣಗಲ್' ನೆನೆಗುದಿಗೆ ಬಿದ್ದಿತ್ತು.
ಈಗ 'ಭೈರತಿ ರಣಗಲ್' ಚಿತ್ರಕ್ಕೆ ಮತ್ತೊಮ್ಮೆ ಜೀವ ಬಂದಿದೆ. ಶಿವರಾತ್ರಿ ಹಬ್ಬದ ಪ್ರಯುಕ್ತ ಆ ಚಿತ್ರದ ಘೋಷಣೆಯಾಗಿದ್ದು, ಸದ್ಯದಲ್ಲೇ ಆ ಚಿತ್ರದ ಚಿತ್ರೀಕರಣ ಪ್ರಾರಂಭವಾಗಲಿದೆ ಎಂದು ಹೇಳಲಾಗುತ್ತಿದೆ.
'ಭೈರತಿ ರಣಗಲ್' ಚಿತ್ರವು 'ಮಫ್ತಿ'ಯ ಪ್ರೀಕ್ವೆಲ್ ಆಗಿದ್ದು, ಈ ಚಿತ್ರದಲ್ಲಿ ಭೈರತಿ ರಣಗಲ್ ನಡೆದು ಬಂದ ಹಾದಿಯ ಬಗ್ಗೆ ಚಿತ್ರಣ ಇರುತ್ತದಂತೆ. 'ಮಫ್ತಿ' ಚಿತ್ರ ನಿರ್ದೇಶಿಸುವುದರ ಜತೆಗೆ ಭೈರತಿ ರಣಗಲ್ ಪಾತ್ರವನ್ನು ಸೃಷ್ಟಿಸಿದ್ದ ನರ್ತನ್ ಅವರೇ ಈ ಚಿತ್ರಕ್ಕೂ ಕಥೆ ಬರೆದು ನಿರ್ದೇಶನ ಮಾಡುತ್ತಿದ್ದಾರೆ. ಸದ್ಯ ಆ ಚಿತ್ರದ ಪ್ರೀ-ಪ್ರೊಡಕ್ಷನ್ ಕೆಲಸಗಳಲ್ಲಿ ನರ್ತನ್ ತೊಡಗಿಸಿಕೊಂಡಿದ್ದು, ಶಿವರಾಜಕುಮಾರ್ ಒಪ್ಪಿರುವ ಒಂದಿಷ್ಟು ಚಿತ್ರಗಳ ಕೆಲಸಗಳು ಮುಗಿದ ಮೇಲೆ 'ಭೈರತಿ ರಣಗಲ್' ಚಿತ್ರೀಕರಣ ಪ್ರಾರಂಭವಾಗಲಿದೆ.
ಅಂದ ಹಾಗೆ, 'ಮಫ್ತಿ' ಚಿತ್ರದಲ್ಲಿನ ಭೈರತಿ ರಣಗಲ್ ಪಾತ್ರ ಮತ್ತು ಲುಕ್ ಸಾಕಷ್ಟು ಜನಪ್ರಿಯವಾಗಿದ್ದು, ತೆಲುಗು ನಟ ನಂದಮೂರಿ ಬಾಲಕೃಷ್ಣ ಸಹ, 'ವೀರ ಸಿಂಹ ರೆಡ್ಡಿ' ಚಿತ್ರದಲ್ಲಿ ತಮ್ಮ ಲುಕ್ ಸಹ ಭೈರತಿ ರಣಗಲ್ ಲುಕ್ನಿಂದ ಪ್ರೇರಣೆ ಪಡೆದಿತ್ತು ಎಂದು ಹೇಳಿಕೊಂಡಿದ್ದರು.
ಶಿವರಾಜಕುಮಾರ್ ಎಂ.ಜಿ. ಶ್ರೀನಿ ನಿರ್ದೇಶನದ 'ಘೋಸ್ಟ್', ಯೋಗರಾಜ್ ಭಟ್ ನಿರ್ದೇಶನದ 'ಕರಟಕ ದಮನಕ', ಸಂಗೀತ ನಿರ್ದೇಶಕ ಅರ್ಜುನ್ ಜನ್ಯ ನಿರ್ದೇಶಿಸಲಿರುವ '45' ಹಾಗೂ ತಮಿಳನ 'ಕ್ಯಾಪ್ಟನ್ ಮಿಲ್ಲರ್' ಚಿತ್ರಗಳಲ್ಲಿ ನಟಿಸುತ್ತಿದ್ದಾರೆ. ಇದಲ್ಲದೆ, ರಜನಿಕಾಂತ್ ಅಭಿನಯದ 'ಜೈಲರ್' ಚಿತ್ರದಲ್ಲೂ ಅತಿಥಿ ಪಾತ್ರದಲ್ಲಿ ನಟಿಸುತ್ತಿದ್ದಾರೆ.