More

    ಮನಾಲಿಯಲ್ಲಿ ಸತೀಶ್-ಅದಿತಿ: ಮೈನಸ್ 5 ಡಿಗ್ರಿ ಚಳಿಯಲ್ಲಿ ಹಾಡಿನ ಚಿತ್ರೀಕರಣ …

    ಬೆಂಗಳೂರು: ಎರಡು ಹಾಡುಗಳನ್ನು ಹೊರತುಪಡಿಸಿದರೆ, ಮಿಕ್ಕಂತೆ ಸತೀಶ್ ನೀನಾಸಂ, ರಚಿತಾ ರಾಮ್ ಮತ್ತು ಅದಿತಿ ಪ್ರಭುದೇವ ಅಭಿನಯದ ‘ಮ್ಯಾಟ್ನಿ’ ಚಿತ್ರವು ಬಹುತೇಕ ಮುಕ್ತಾಯವಾಗಿತ್ತು. ಈಗ ಆ ಎರಡು ಹಾಡುಗಳಲ್ಲಿ ಒಂದು ಸದ್ದಿಲ್ಲದೆ ಮುಗಿದಿದೆ. ಇತ್ತೀಚೆಗೆ ಮನಾಲಿಯಲ್ಲಿ ಸತೀಶ್ ಮತ್ತು ಅದಿತಿ ಅಭಿನಯದಲ್ಲಿ ಒಂದು ರೊಮ್ಯಾಂಟಿಕ್ ಹಾಡಿನ ಚಿತ್ರೀಕರಣವನ್ನು ಚಿತ್ರತಂಡ ಮುಗಿಸಿದೆ.

    ಈ ಹಾಡಿನ ಕುರಿತು ಮಾತನಾಡುವ ಸತೀಶ್ ನೀನಾಸಂ, ‘ಮನಾಲಿಯಲ್ಲಿ ಮೈನಸ್ 5 ಡಿಗ್ರಿ ಚಳಿಯಲ್ಲಿ ಹಿಮದ ನಡುವೆ ಚಿತ್ರೀಕರಣ ಮಾಡಿದ್ದೇವೆ. ಅಲ್ಲಿ ಆಕ್ಸಿಜನ್ ಮಟ್ಟ ಕಡಿಮೆ ಇದೆ ಎಂಬ ಕಾರಣಕ್ಕೆ ಚಿತ್ರೀಕರಣ ಮಾಡುವುದಕ್ಕೆ ಅವಕಾಶ ಸಿಗುವುದಿಲ್ಲ. ನಮಗೆ ಅಂಥದ್ದೊಂದು ಅವಕಾಶ ಸಿಕ್ಕಿತ್ತು. ಹಿಮ ಸತತವಾಗಿ ಸುರಿಯುತ್ತಿತ್ತು. ಅದರ ನಡುವೆಯೇ ಚಿತ್ರೀಕರಣ ಮಾಡಿದ್ದೇವೆ. ನನಗಾದರೂ ಕೋಟ್ ಇತ್ತು. ಕಾಲಿಗೆ ಶೂ ಇತ್ತು. ಆದರೆ, ಅದಿತಿ ಸೀರೆಯಲ್ಲಿ ಕಾಣಿಸಿಕೊಳ್ಳಬೇಕಿತ್ತು. ಈ ಹಾಡಿಗೆ ಬಹಳ ಕಷ್ಟಪಟ್ಟಿದ್ದಾರೆ ಅವರು’ ಎನ್ನುತ್ತಾರೆ ಸತೀಶ್.

    ಸತತವಾಗಿ ಹಿಮ ಸುರಿಯುತ್ತಿದ್ದರಿಂದ ಚಿತ್ರೀಕರಣ ಮಾಡುವುದು ಕಷ್ಟವಾಗಿತ್ತು ಎನ್ನುವ ಸತೀಶ್, ‘ದಿನಕ್ಕೆ ನಾಲ್ಕೈದು ತಾಸುಗಳ ಕಾಲ ಚಿತ್ರೀಕರಣ ಮಾಡುವುದಕ್ಕೆ ಮಾತ್ರ. ಚಿತ್ರೀಕರಣಕ್ಕೆ ಹೋಗುವಾಗ ಒಂದು ಗಾಡಿ ಸ್ಕಿಡ್ ಆಗಿ, ಬೆಟ್ಟದ ಅಂಚಿಗೆ ಹೋಗಿ ನಿಂತಿತ್ತು. ಇನ್ನೊಂದು ಗಾಡಿಯಲ್ಲಿ ಹೋಗಿ ಚಿತ್ರೀಕರಣ ಮಾಡಿಕೊಂಡು ಬಂದಿದ್ದೇವೆ. ಇಷ್ಟೆಲ್ಲ ಕಷ್ಟಗಳಿದ್ದರೂ, ಹಾಡು ಬಹಳ ಚೆನ್ನಾಗಿ ಮೂಡಿಬಂದಿದೆ. ಇಂಗ್ಲೀಷ್ ಸಿನಿಮಾ ನೋಡಿದ ಅನುಭವವಾಗುತ್ತದೆ. ಮನಾಲಿ, ಯಾವ ಸ್ವಿಟ್ಜರ್​ಲ್ಯಾಂಡ್​ಗೂ ಕಡಿಮೆ ಇಲ್ಲ’ ಎನ್ನುತ್ತಾರೆ ಸತೀಶ್.

    ಈ ಹಾಡು ಹೊರತುಪಡಿಸಿದರೆ ಇನ್ನೊಂದು ಹಾಡಿನ ಚಿತ್ರೀಕರಣ ಬಾಕಿ ಇದ್ದು, ಅದರಲ್ಲಿ ಸತೀಶ್ ಜತೆಗೆ ನಾಗಭೂಷಣ್, ಪೂರ್ಣಚಂದ್ರ ಮೈಸೂರು, ಶಿವರಾಜ್ ಕೆ.ಆರ್. ಪೇಟೆ ಮತ್ತು ದಿಗಂತ್ ಎಂಬುವವರು ಕಾಣಿಸಿಕೊಳ್ಳಲಿದ್ದಾರಂತೆ. ಈ ಹಾಡಿನ ಮೂಲಕ ಚಿತ್ರೀಕರಣ ಮುಗಿಯಲಿದೆ. ‘ಮ್ಯಾಟ್ನಿ’ ಚಿತ್ರವನ್ನು ಮನೋಹರ್ ಕಾಂಪಳ್ಳಿ ನಿರ್ದೇಶಿಸಿದರೆ, ಪಾರ್ವತಿ ಎಸ್. ಗೌಡ ನಿರ್ಮಾಣ ಮಾಡುತ್ತಿದ್ದಾರೆ. ಪೂರ್ಣಚಂದ್ರ ತೇಜಸ್ವಿ ಸಂಗೀತ, ಕೀರ್ತನ್ ಪೂಜಾರ್ ಮತ್ತು ಸುಧಾಕರ್ ಛಾಯಾಗ್ರಹಣ ಈ ಚಿತ್ರಕ್ಕಿದೆ.

    ನಟ ನಂದಮೂರಿ ತಾರಕ ರತ್ನ ನಿಧನ; ಫಲಿಸಲಿಲ್ಲ 22 ದಿನಗಳ ಜೀವನ್ಮರಣ ಹೋರಾಟ

    ಎಂಬಿಬಿಎಸ್​ ವಿದ್ಯಾರ್ಥಿನಿ ಮೇಲೆ ಅಪ್ಪ-ಮಗನ ಅತ್ಯಾಚಾರ; ಇಸ್ಲಾಂ ಧರ್ಮಕ್ಕೆ ಮತಾಂತರಿಸಲೂ ಯತ್ನ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts