More

    ಡೀಸೆಲ್ ವಾಹನ ನಿಷೇಧದ ಆಚೆ ಈಚೆ

    ಪರಿಸರ ಮಾಲಿನ್ಯ ತಗ್ಗಿಸುವ ಸಾಧಿಸುವ ನಿಟ್ಟಿನಲ್ಲಿ 2027ರ ವೇಳೆಗೆ ನಗರ ಪ್ರದೇಶಗಳಲ್ಲಿ ನಾಲ್ಕು ಚಕ್ರಗಳ ಡೀಸೆಲ್ ವಾಹನಗಳನ್ನು ನಿಷೇಧಿಸುವ ಹಾಗೂ ವಾಣಿಜ್ಯ- ಸಾರ್ವಜನಿಕ ಸಾರಿಗೆ ವಾಹನಗಳನ್ನು ಡೀಸೆಲ್​ನಿಂದ ಎಲ್​ಎನ್​ಜಿ ಇಂಧನಕ್ಕೆ ಬದಲಾಯಿಸುವ ಶಿಫಾರಸುಗಳನ್ನು ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯವು ರಚಿಸಿದ ಸಮಿತಿಯು ನೀಡಿದೆ. ಆದರೆ, ಈ ಬದಲಾವಣೆ ಸಾರಿಗೆ ವಲಯದಲ್ಲಿ ವ್ಯಾಪಕ ಅಡಚಣೆಯನ್ನುಂಟು ಮಾಡುತ್ತದೆ ಎಂಬುದು ಪರಿಣತರ ಅಭಿಪ್ರಾಯ.

    ಹತ್ತು ಲಕ್ಷಕ್ಕಿಂತ ಹೆಚ್ಚು ಜನಸಂಖ್ಯೆ ಇರುವ ನಗರಗಳಲ್ಲಿ 2027ರ ವೇಳೆಗೆ ಡೀಸೆಲ್ ಚಾಲಿತ ನಾಲ್ಕು-ಚಕ್ರ ವಾಹನಗಳ ಬಳಕೆ ನಿಷೇಧಿಸುವಂತೆ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯವು ರಚಿಸಿದ ಸಮಿತಿ ಶಿಫಾರಸು ಮಾಡಿದೆ. ಇದರ ಬದಲಾಗಿ, ಎಲೆಕ್ಟ್ರಿಕ್ ಮತ್ತು ಅನಿಲಚಾಲಿತ ವಾಹನಗಳನ್ನು ಬಳಸಬೇಕೆಂದು ಸಲಹೆ ನೀಡಿದೆ. ಪೆಟ್ರೋಲಿಯಂ ಸಚಿವಾಲಯದ ಮಾಜಿ ಕಾರ್ಯದರ್ಶಿ ತರುಣ್ ಕಪೂರ್ ನೇತೃತ್ವದ ಇಂಧನ ಪರಿವರ್ತನಾ ಸಲಹಾ ಸಮಿತಿಯು ನಗರಗಳ ಸಾರಿಗೆಯು 2030ರ ವೇಳೆಗೆ ಮೆಟ್ರೋ ರೈಲುಗಳು ಮತ್ತು ಎಲೆಕ್ಟ್ರಿಕ್ ಬಸ್​ಗಳ ಸಮ್ಮಿಲನವಾಗಬೇಕೆಂದು ಶಿಫಾರಸು ಮಾಡಿದೆ.

    ಭಾರತ ಬಳಸುವ ಒಟ್ಟು ಪೆಟ್ರೋಲಿಯಂ ಉತ್ಪನ್ನಗಳ ಪೈಕಿ ಡೀಸೆಲ್ ಪಾಲು ಶೇ. 40ರಷ್ಟು ಇದೆ. ಹೀಗಾಗಿ, ಡೀಸೆಲ್ ಚಾಲಿತ 4 ಚಕ್ರ ವಾಹನಗಳನ್ನು ಆದಷ್ಟು ಬೇಗ ತೆಗೆದುಹಾಕಬೇಕು. 10 ಲಕ್ಷಕ್ಕೂ ಅಧಿಕ ಜನಸಂಖ್ಯೆ ಇರುವ ನಗರಗಳು ಮತ್ತು ಹೆಚ್ಚಿನ ಮಾಲಿನ್ಯ ಇರುವ ಪಟ್ಟಣಗಳಲ್ಲಿ ಡೀಸೆಲ್ ಚಾಲಿತ ನಾಲ್ಕು-ಚಕ್ರ ವಾಹನಗಳಿಗೆ ನಿಷೇಧವನ್ನು ಐದು ವರ್ಷಗಳಲ್ಲಿ, ಅಂದರೆ 2027ರ ವೇಳೆಗೆ ಜಾರಿಗೊಳಿಸಬೇಕು. ಅಲ್ಲದೆ, ವಾಣಿಜ್ಯ ವಾಹನಗಳು ಅಲ್ಪಾವಧಿಯಲ್ಲಿ ಎಲ್​ಎನ್​ಜಿಗೆ (ಲಿಕ್ವಿಫೈಡ್ ನ್ಯಾಚುರಲ್ ಗ್ಯಾಸ್- ದ್ರವೀಕೃತ ನೈಸರ್ಗಿಕ ಅನಿಲ)

    ಪರಿವರ್ತನೆಯಾಗಬೇಕು ಮತ್ತು ಇನ್ನು 10 ವರ್ಷಗಳಲ್ಲಿ ನಗರ ಸಾರ್ವಜನಿಕ ಸಾರಿಗೆಯು ಶುದ್ಧ ಇಂಧನ ಚಾಲಿತವಾಗಿ ಪರಿವರ್ತನೆಗೊಳ್ಳಲು ಇನ್ನು ಮುಂದೆ ಡೀಸೆಲ್ ಬಸ್​ಗಳನ್ನು ಹೆಚ್ಚುವರಿಯಾಗಿ ಸೇರಿಸಲು ಅನುಮತಿಸಬಾರದು ಎಂದೂ ಸಮಿತಿ ಹೇಳಿದೆ. ಮಾಲಿನ್ಯ ಸೂಸುವಿಕೆಯನ್ನು ಕಡಿಮೆ ಮಾಡುವ ಸರ್ಕಾರದ ಉದ್ದೇಶ ಹಾಗೂ 2070ರ ವೇಳೆಗೆ ಭಾರತಕ್ಕೆ ಅಗತ್ಯವಿರುವ ವಿದ್ಯುತ್​ನ ಪೈಕಿ ಶೇ. 40ರಷ್ಟನ್ನು ನವೀಕರಿಸಬಹುದಾದ ಇಂಧನದಿಂದ ಉತ್ಪಾದಿಸುವ ಗುರಿಯ ಹಿನ್ನೆಲೆಯಲ್ಲಿ ಸಮಿತಿ ಈ ಶಿಫಾರಸುಗಳನ್ನು ಮಾಡಿದೆ.

    ಗೇಮ್ ಚೇಂಜರ್ ಎಲ್​ಎನ್​ಜಿ

    ಬೃಹತ್ ಸರಕು ಸಾಗಣೆ ವಾಹನ ಗಳಲ್ಲಿ ಡೀಸೆಲ್ ಮತ್ತು ಸಿಎನ್​ಜಿ ಇಂಧನಕ್ಕೆ ಪರ್ಯಾಯವಾಗುವ ಸಾಮರ್ಥ್ಯವು ಎಲ್​ಎನ್​ಜಿಗೆ ಇದೆ ಎಂದು ಇಂಧನ ಪರಿವರ್ತನೆ ಸಲಹಾ ಸಮಿತಿಯ ವರದಿ ಹೇಳು ತ್ತದೆ. ಅಲ್ಲದೆ, ಮಾಲಿನ್ಯದ ಪ್ರಮಾಣ ವನ್ನು ಕೂಡ ಇದು ಕಡಿಮೆ ಮಾಡು ತ್ತದೆ. ಹೀಗಾಗಿ, ಭಾರತೀಯ ಲಾಜಿ ಸ್ಟಿಕ್ಸ್ ಮಾರುಕಟ್ಟೆಯಲ್ಲಿ ಇದು ಪರಿವರ್ತನೆಯ ಹರಿಕಾರ ಆಗಬಹು ದಾಗಿದೆ ಎಂದು ವರದಿ ಹೇಳಿದೆ.

    ತಗ್ಗಿದ ಡೀಸೆಲ್ ಕಾರು ತಯಾರಿಕೆ

    ದೇಶದ ಅತಿದೊಡ್ಡ ಪ್ರಯಾಣಿಕ ವಾಹನ ತಯಾರಕ ಕಂಪನಿಯಾದ ಮಾರುತಿ ಸುಜುಕಿಯು 2020ರ ಏಪ್ರಿಲ್ 1ರಿಂದ ಡೀಸೆಲ್ ವಾಹನಗಳ ತಯಾರಿಕೆಯನ್ನು ಸ್ಥಗಿತಗೊಳಿಸಿದೆ. ಅಲ್ಲದೆ, ಈ ವಿಭಾಗಕ್ಕೆ ಮರುಪ್ರವೇಶಿಸುವುದಿಲ್ಲ ಎಂದು ಹೇಳಿದೆ. ಹ್ಯುಂಡೈ, ಕಿಯಾ ಮತ್ತು ಟೊಯೋಟಾ ಮೋಟರ್ ಕಂಪನಿಗಳ ಕೆಲ ಮಾದರಿಗಳು ಡೀಸೆಲ್ ಇಂಜಿನ್ ಹೊಂದಿವೆ. ಟಾಟಾ ಮೋಟಾರ್ಸ್, ಮಹೀಂದ್ರಾ ಮತ್ತು ಹೋಂಡಾ ಕಂಪನಿಗಳು 1.2 ಲೀಟರ್ ಡೀಸೆಲ್ ಇಂಜಿನ್​ಗಳ ಉತ್ಪಾದನೆಯನ್ನು ನಿಲ್ಲಿಸಿದ್ದು, 1.5 ಲೀಟರ್ ಅಥವಾ ಹೆಚ್ಚಿನ ಸಾಮರ್ಥ್ಯದ ಡೀಸೆಲ್ ಇಂಜಿನ್​ಗಳನ್ನು ಮಾತ್ರ ಉತ್ಪಾದಿಸುತ್ತಿವೆ. 2020ರಿಂದ ಹೆಚ್ಚಿನ ಕಾರು ತಯಾರಕರು ಡೀಸೆಲ್ ಕಾರ್​ಗಳ ಉತ್ಪಾದನೆ ಕಡಿತಗೊಳಿಸಲು ಕ್ರಮಗಳನ್ನು ತೆಗೆದುಕೊಂಡಿದ್ದಾರೆ. ಇದರ ಪರಿಣಾಮವಾಗಿ, ಒಟ್ಟಾರೆ ಡೀಸೆಲ್ ಕಾರ್​ಗಳ ಬೇಡಿಕೆ ಶೇ. 16.5ಕ್ಕೆ ಕುಸಿದಿದೆ. 2013ರಲ್ಲಿ ಈ ಬೇಡಿಕೆ ಶೇ. 28.5 ಇತ್ತು.

    ಡೀಸೆಲ್ ವಾಹನ ಇಷ್ಟಪಡಲು ಕಾರಣವೇನು?

    ಪೆಟ್ರೋಲ್ ವಾಹನಗಳಿಗೆ ಹೋಲಿಸಿದರೆ ಡೀಸೆಲ್ ಇಂಜಿನ್​ಗಳ ಇಂಧನ ವೆಚ್ಚ ಕಡಿಮೆ. ಡೀಸೆಲ್ ಇಂಜಿನ್​ಗಳು ಹೆಚ್ಚಿನ ವೋಲ್ಟೇಜ್ ಸ್ಪಾರ್ಕ್ ಇಗ್ನಿಷನ್ (ಸ್ಪಾರ್ಕ್ ಪ್ಲಗ್​ಗಳು) ಬಳಸುವುದಿಲ್ಲ. ಹೀಗಾಗಿ, ಪ್ರತಿ ಕಿಲೋಮೀಟರ್​ಗೆ ಕಡಿಮೆ ಇಂಧನ ಬಳಸುತ್ತವೆ. ಭಾರಿ ವಾಹನಗಳು ಸಾಮಾನ್ಯವಾಗಿ ಡೀಸೆಲ್ ಇಂಜಿನ್ ಹೊಂದಿರುತ್ತವೆ. ಅಲ್ಲದೆ, ಡೀಸೆಲ್ ಇಂಜಿನ್​ಗಳು ಹೆಚ್ಚಿನ ಟಾರ್ಕ್ (ತಿರುಗುವಿಕೆ ಅಥವಾ ತಿರುಗುವ ಬಲ) ನೀಡುತ್ತವೆ. ಯಾಂತ್ರಿಕ ಅಥವಾ ಎಲೆಕ್ಟ್ರಾನಿಕ್ ಗವರ್ನರ್​ನಿಂದ ನಿಯಂತ್ರಿಸಲ್ಪಡುವುದರಿಂದ ಸ್ಥಗಿತಗೊಳ್ಳುವ ಸಾಧ್ಯತೆ ಕಡಿಮೆ ಇರುತ್ತದೆ. ಇದರಿಂದಾಗಿ ಭಾರಿ ವಾಹನಗಳಿಗೆ ಡೀಸೆಲ್ ಉತ್ತಮ ಎಂದು ಕಂಡುಬರುತ್ತದೆ.

    ಸಾಧಕ ಬಾಧಕ ಅಸ್ಪಷ್ಟ

    ಡೀಸೆಲ್ ವಾಹನಗಳ ನಿಷೇಧದ ಸಾಧಕ- ಬಾಧಕ ಹಾಗೂ ಈ ಪ್ರಸ್ತಾವ ಕಾರ್ಯಗತಗೊಳಿಸುವುದು ವಾಸ್ತವದ ನೆಲೆಗಟ್ಟಿನಲ್ಲಿ ಎಷ್ಟು ಸಾಧ್ಯ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ಹೆದ್ದಾರಿಗಳಲ್ಲಿ ಸರಕುಗಳ ಸಾಗಣೆಗೆ ಬಳಸಲಾಗುವ ಮಧ್ಯಮ ಮತ್ತು ಭಾರಿ ವಾಣಿಜ್ಯ ವಾಹನಗಳು ಹಾಗೂ ನಗರಗಳಲ್ಲಿ ಸಂಚರಿಸುವ ಬಸ್​ಗಳ ವಿಷಯದಲ್ಲಂತೂ ಉದ್ದೇಶಿತ ನಿಷೇಧ ವ್ಯಾಪಕ ಪರಿಣಾಮ ಬೀರಲಿದೆ. ಡೀಸೆಲ್ ವಾಹನಗಳನ್ನು ಬದಲಿಸಲು ದೀರ್ಘ ಸಮಯಾವಕಾಶ ನೀಡಲಾಗಿದ್ದರೂ ಗಮನಾರ್ಹ ಅಡಚಣೆ ತಲೆದೋರಲಿದೆ ಎಂದು ಹೇಳಲಾಗಿದೆ. ಭಾರತದಲ್ಲಿ ಮಾರಾಟವಾಗುವ ಡೀಸೆಲ್ ಇಂಧನದ ಪೈಕಿ ಶೇ. 87ರಷ್ಟು ಸಾರಿಗೆ ವಲಯಕ್ಕೆ ಬಳಕೆಯಾಗುತ್ತದೆ. ಈ ಪೈಕಿ ಟ್ರಕ್ ಮತ್ತು ಬಸ್​ಗಳಿಗೆ ಶೇ. 68ರಷ್ಟು ಉಪಯೋಗಿಸಲಾಗುತ್ತದೆ. ಡೀಸೆಲ್ ಟ್ರಕ್​ಗಳನ್ನು ಸಂಕುಚಿತ ನೈಸರ್ಗಿಕ ಅನಿಲ (ಸಿಎನ್​ಜಿ) ಇಂಧನಕ್ಕೆ ಪರಿವರ್ತಿಸುವುದು ಸುಲಭವೆಂದು ತೋರುತ್ತದೆಯಾದರೂ ಕೆಲವು ಇತಿಮಿತಿಗಳಿವೆ. ಸಿಎನ್​ಜಿ ಇಂಧನವನ್ನು ಕಡಿಮೆ ದೂರಕ್ಕೆ ಬಳಸಲಾಗುತ್ತದೆ. ಅಲ್ಲದೆ, ಹೆಚ್ಚು ತೂಕದ ಸರಕು ಸಾಗಿಸುವ ಸಾಮರ್ಥ್ಯವನ್ನು ಸಿಎನ್​ಜಿ ಹೊಂದಿಲ್ಲ ಎನ್ನಲಾಗಿದೆ.

    ಹಲವು ಸವಾಲು

    ಡೀಸೆಲ್ ವಾಹನಗಳ ಸಂಪೂರ್ಣ ನಿಷೇಧದಿಂದ ಉಂಟಾಗುವ ತೊಂದರೆಗಳತ್ತ ವಾಹನ ಪರಿಣತರು ಗಮನ ಸೆಳೆಯುತ್ತಾರೆ. ಡೀಸೆಲ್ ಕಾರು ತಯಾರಕರು ಬಿಎಸ್ 4ನಿಂದ ಬಿಎಸ್ 5 ಮಾಲಿನ್ಯ ಮಾನದಂಡಗಳಿಗೆ ಬದಲಾವಣೆ ಮಾಡಿಕೊಳ್ಳಲು ಹಣ ಹೂಡಿಕೆ ಮಾಡಿದ್ದಾರೆ. ಡೀಸೆಲ್ ಕಾರ್​ಗಳನ್ನು ಸಂಪೂರ್ಣವಾಗಿ ನಿಷೇಧಿಸಿದರೆ ಈ ಹೂಡಿಕೆ ನಷ್ಟವಾಗುತ್ತದೆ. ವಾಣಿಜ್ಯ ವಾಹನಗಳ ವಿಭಾಗದಲ್ಲಿ, ಡೀಸೆಲ್ ವಾಹನಗಳೇ ಹೆಚ್ಚಿನ ಸಂಖ್ಯೆಯಲ್ಲಿವೆ. ಡೀಸೆಲ್​ಗೆ ಪರ್ಯಾಯವಾದ ಎಲೆಕ್ಟ್ರಿಕ್, ಸಿಎನ್​ಜಿ, ಎಲ್​ಎನ್​ಜಿ, ಮತ್ತು ಹೈಡ್ರೋಜನ್ ವಾಹನಗಳನ್ನು ಈಗಷ್ಟೇ ಪರಿಶೋಧಿಸಲಾಗುತ್ತಿದೆ. ಹೀಗಾಗಿ, ಸಂಪೂರ್ಣ ನಿಷೇಧ ಗಂಭೀರ ಅಡಚಣೆ ಉಂಟು ಮಾಡುತ್ತದೆ ಎಂಬುದು ತಜ್ಞರ ಅನಿಸಿಕೆ.

    ಮತ ಚಲಾಯಿಸಿದ ಬೆನ್ನಿಗೇ ‘ಕರೆಂಟ್ ಶಾಕ್​’: ಏ. 1ರಿಂದಲೇ ಜಾರಿಗೆ ಬರುವಂತೆ ವಿದ್ಯುತ್ ದರ ಏರಿಕೆ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts