

ಕೊಲರಾಡೊ : ವೈದ್ಯಕೀಯ ಜರ್ನಲ್ ಲ್ಯಾನ್ಸೆಟ್ನಲ್ಲಿ ಪ್ರಕಟವಾಗಿರುವ ಹೊಸ ಅಸೆಸ್ಮೆಂಟ್ ವರದಿಯ ಪ್ರಕಾರ, "ಕರೊನಾಗೆ ಕಾರಣವಾಗುವ ಸಾರ್ಸ್-ಕೋವ್-2 ವೈರಸ್ ಪ್ರಧಾನವಾಗಿ ಗಾಳಿಯ ಮೂಲಕ ಹರಡುತ್ತದೆ ಎಂಬುದಕ್ಕೆ ಸ್ಥಿರವಾದ ಮತ್ತು ಬಲವಾದ ಪುರಾವೆಗಳು" ಸಿಕ್ಕಿವೆಯಂತೆ. ಆದ್ದರಿಂದ, ಈ ವೈರಸ್ಅನ್ನು ಪ್ರಧಾನವಾಗಿ 'ಏರ್ಬೋರ್ನ್' ಎಂದು ಪರಿಗಣಿಸುವಲ್ಲಿ ವಿಫಲವಾದ ಸಾರ್ವಜನಿಕ ಆರೋಗ್ಯ ವ್ಯವಸ್ಥೆಗಳು ಜನರನ್ನು ಅಸುರಕ್ಷಿತವಾಗಿಸಿ, ವೈರಸ್ ಹರಡಲು ಅನುವು ಮಾಡಿಕೊಡುತ್ತಿವೆ ಎಂದು ಇಂಗ್ಲೆಂಡ್, ಅಮೆರಿಕ ಮತ್ತು ಕೆನಡಾದ ಆರು ತಜ್ಞರು ಎಚ್ಚರಿಸಿದ್ದಾರೆ.
ಕರೊನಾ ಬಗ್ಗೆ ಪ್ರಕಟವಾಗಿರುವ ಸಂಶೋಧನೆಗಳನ್ನೆಲ್ಲಾ ಕ್ರೋಢೀಕರಿಸಿ ಪರಾಮರ್ಶಿಸಿರುವ ಈ ತಜ್ಞರ ತಂಡ, ಕರೊನಾ ವೈರಸ್ 'ಏರ್ಬೋರ್ನ್' ಅಥವಾ 'ವಾಯುಗಾಮಿ'ಯಾಗಿದೆ ಎನ್ನುವುದಕ್ಕೆ 10 ಮುಖ್ಯ ಪುರಾವೆಗಳನ್ನು ಕಂಡುಕೊಂಡಿದ್ದಾರೆ ಎನ್ನಲಾಗಿದೆ. "ವಾಯುಗಾಮಿ ಪ್ರಸರಣವನ್ನು ಬೆಂಬಲಿಸುವ ಪುರಾವೆಗಳು ಅಗಾಧವಾಗಿವೆ ಮತ್ತು ದೊಡ್ಡ ಹನಿ ಪ್ರಸರಣ(ಈವರೆಗೂ ನಂಬಲಾಗಿದ್ದ ಡ್ರಾಪ್ಲೆಟ್ ಟ್ರಾನ್ಸ್ಮಿಷನ್)ವನ್ನು ಬೆಂಬಲಿಸುವ ಪುರಾವೆಗಳು ಬಹುತೇಕ ಅಸ್ತಿತ್ವದಲ್ಲಿಲ್ಲ" ಎಂದು ಈ ಅಧ್ಯಯನದಲ್ಲಿ ಭಾಗಿಯಾದ ಕೊಲೊರಾಡೋ ಬೌಲ್ಡರ್ ವಿಶ್ವವಿದ್ಯಾಲಯದ ರಸಾಯನಶಾಸ್ತ್ರಜ್ಞ ಜೋಸ್-ಲೂಯಿಸ್ ಜಿಮೆನೆಜ್ ಹೇಳಿದ್ದಾರೆ.
"ವಿಶ್ವ ಆರೋಗ್ಯ ಸಂಸ್ಥೆ ಮತ್ತು ಇತರ ಸಾರ್ವಜನಿಕ ಆರೋಗ್ಯ ಸಂಸ್ಥೆಗಳು ಕರೊನಾ ವೈರಸ್ ಪ್ರಸರಣದ ವಿವರಣೆಯನ್ನು ವೈಜ್ಞಾನಿಕ ಪುರಾವೆಗಳಿಗೆ ಹೊಂದಿಕೊಳ್ಳುವಂತೆ ನೀಡುವುದು ತುರ್ತು ಅಗತ್ಯವಾಗಿದೆ. ಗಾಳಿಯ ಮೂಲಕ ಹರಡುವುದನ್ನು ತಡೆಯುವ ಕ್ರಮಗಳನ್ನು ತೆಗೆದುಕೊಳ್ಳುವ ಬಗ್ಗೆ ಎಲ್ಲರೂ ಗಮನ ಹರಿಸಬೇಕಾಗಿದೆ" ಎಂದಿದ್ದಾರೆ.
ಅವರ ಈ ನಿರ್ಧಾರಕ್ಕೆ ಕಾರಣವಾಗಿರುವ ಅಂಶಗಳು ಹಲುವು. ಅತಿ ಮುಖ್ಯವಾದುದೆಂದರೆ, ಸೂಪರ್ ಸ್ಪ್ರೆಡರ್ ಈವೆಂಟ್ಗಳು ! ಒಬ್ಬನೇ ಸೋಂಕಿತ ವ್ಯಕ್ತಿಯಿಂದ 53 ಜನರಿಗೆ ಸೋಂಕು ತಗುಲಿದ ಸ್ಕಾಗಿಟ್ ಖಾಯರ್ ಕರೊನಾ ಸ್ಫೋಟಕ ಪ್ರಕರಣವನ್ನು ಅವರು ಉದಾಹರಿಸಿದ್ದಾರೆ. ಇಂಥ ಹಲವು ಪ್ರಕರಣಗಳಲ್ಲಿ ನಿಕಟ ಸಂಪರ್ಕ ಹೊಂದಿರುವ ಅಥವಾ ಸೋಂಕಿತರು ಮುಟ್ಟಿದ ವಸ್ತುಗಳನ್ನು ಮುಟ್ಟಿದ ಸನ್ನಿವೇಶವು ಕಂಡುಬಂದಿಲ್ಲ. ಜೊತೆಗೆ, ಏಸಿಂಪ್ಟಮಾಟಿಕ್ ಜನರಿಂದ ರೋಗ ಹರಡುವುದು ಮತ್ತು ಮುಚ್ಚಿದ ಪ್ರದೇಶಗಳಲ್ಲಿ ತೆರೆದ ಪ್ರದೇಶಗಳಿಗಿಂತ ಹೆಚ್ಚು ಹರಡುವ ಅಪಾಯ ಇರುವುದೂ ಈ ನಿರ್ಧಾರಕ್ಕೆ ಪೂರಕವಾಗಿವೆ ಎಂದು ಈ ತಜ್ಞರ ತಂಡದ ನೇತೃತ್ವ ವಹಿಸಿದ ಆಕ್ಸ್ಫರ್ಡ್ ವಿಶ್ವವಿದ್ಯಾಲಯದ ಟ್ರಿಶ್ ಗ್ರೀನ್ಹಾಲ್ಗ್ ಹೇಳಿದ್ದಾರೆ.
ಕೈತೊಳೆಯುವುದು, ಸರ್ಫೇಸ್ಗಳನ್ನು ಸ್ಯಾನಿಟೈಸ್ ಮಾಡುವುದಕ್ಕಿಂತ ಸೋಂಕಿತ ವ್ಯಕ್ತಿ ಬಿಟ್ಟ ಉಸಿರು ತಾಗದಂತೆ ಎಚ್ಚರ ವಹಿಸುವುದು ಹೆಚ್ಚು ಮುಖ್ಯ. ವಾಯುಗಾಮಿ ವೈರಸ್ನ ಸೋಂಕಿನ ಅಪಾಯ ತಪ್ಪಿಸಲು, ಜನಜಂಗುಳಿ ಸೇರುವುದು ಮತ್ತು ಮುಚ್ಚಿದ ಪ್ರದೇಶಗಳಲ್ಲಿ ಹೆಚ್ಚು ಜನರೊಂದಿಗೆ ಹೆಚ್ಚು ಸಮಯ ಕಳೆಯುವುದನ್ನು ತಪ್ಪಿಸಬೇಕು. ಮಾಸ್ಕ್ನ ಗುಣಮಟ್ಟ ಮತ್ತು ಫಿಟ್ ಬಗ್ಗೆ ಹೆಚ್ಚು ಗಮನ ವಹಿಸುವುದು, ವೈದ್ಯಕೀಯ ಕಾರ್ಯಕರ್ತರಿಗೆ ಉತ್ತಮ ದರ್ಜೆಯ ಪಿಪಿಇ ಕಿಟ್ಗಳನ್ನು ನೀಡುವುದು ಅವಶ್ಯಕ ಎಂದು ಗ್ರೀನ್ಹಾಲ್ಗ್ ಹೇಳಿದ್ದಾರೆ. (ಏಜೆನ್ಸೀಸ್)