

Betting Case: ನಿನ್ನೆಯಷ್ಟೇ (ಮಾ.20) ಜಾಲತಾಣಗಳಲ್ಲಿ ಬೆಟ್ಟಿಂಗ್ ಆ್ಯಪ್ಗಳನ್ನು ಪ್ರಚಾರ ಮಾಡುತ್ತಿರುವವರ ವಿರುದ್ಧ ಹೈದರಾಬಾದ್ ಪೊಲೀಸರು ಸಮರ ಸಾರಿದರು. ಟಾಲಿವುಡ್ ಚಿತ್ರ ನಟ-ನಟಿಯರು, ಕಿರುತೆರೆ ಕಲಾವಿದರು, ಸೋಶಿಯಲ್ ಮೀಡಿಯಾ ಇನ್ಫ್ಲುಯೆನ್ಸರ್ಗಳ ವಿರುದ್ಧ ಸರಣಿ ಪ್ರಕರಣಗಳು ದಾಖಲಾಗಿವೆ. ಈ ಕುರಿತಂತೆ ಈಗಾಗಲೇ ನಟ ಪ್ರಕಾಶ್ ರಾಜ್ ವಿಡಿಯೋ ಮೂಲಕ ಪ್ರತಿಕ್ರಿಯಿಸಿ, ನಾನು ವಿಚಾರಣೆಗೆ ಕರೆದರೆ ಖಂಡಿತ ಹಾಜರಾಗುತ್ತೇನೆ ಎಂದು ಸ್ಪಷ್ಟನೆ ನೀಡಿದ್ದಾರೆ.
ಬೆಟ್ಟಿಂಗ್ ಅಪ್ಲಿಕೇಶನ್‌ಗಳ ಪ್ರಚಾರ ಮಾಡಿದ ಸಿನಿಮಾ ಮತ್ತು ಯೂಟ್ಯೂಬ್ ಪ್ರಭಾವಿಗಳ ವಿರುದ್ಧ ತೆಲಂಗಾಣ ಪೊಲೀಸರು ಈಗಾಗಲೇ ಪ್ರಕರಣಗಳನ್ನು ದಾಖಲಿಸಿ, ಕೆಲವರಿಗೆ ವಿಚಾರಣಾ ನೋಟಿಸ್ ರವಾನಿಸಿದ್ದಾರೆ. ಈ ಸಾಲಿನಲ್ಲಿ ವೈಎಸ್‌ಆರ್‌ಸಿಪಿ ಮಹಿಳಾ ನಾಯಕಿ ಮತ್ತು ನಿರೂಪಕಿ ಶ್ಯಾಮಲಾ ಕೂಡ ಇದ್ದು, ತಮ್ಮ ವಿರುದ್ಧ ದಾಖಲಾಗಿರುವ ಕೇಸ್ ವಿರುದ್ಧ ಕೋರ್ಟ್ನಲ್ಲಿ ಹೋರಾಡಲು ಮುಂದಾಗಿದ್ದಾರೆ. ಆದಾಗ್ಯೂ, ಈ ವಿಷಯಕ್ಕೆ ಸಂಬಂಧಿಸಿದಂತೆ ಹೈಕೋರ್ಟ್ ಮೆಟ್ಟಿಲೇರಿದ್ದಾರೆ ಎಂದು ವರದಿಯಾಗಿದೆ.
ಬೆಟ್ಟಿಂಗ್ ಪ್ರಕರಣದಲ್ಲಿ ತಮ್ಮ ವಿರುದ್ಧ ದಾಖಲಾಗಿರುವ ಎಫ್‌ಐಆರ್ ರದ್ದುಗೊಳಿಸಬೇಕೆಂದು ಶ್ಯಾಮಲಾ ತಮ್ಮ ಅರ್ಜಿಯಲ್ಲಿ ತಿಳಿಸಿದ್ದಾರೆ. ಆದಾಗ್ಯೂ, ಹೈಕೋರ್ಟ್ ಇಂದು ಅರ್ಜಿಯನ್ನು ವಿಚಾರಣೆ ನಡೆಸಲಿದೆ. ಬೆಟ್ಟಿಂಗ್ ಅಪ್ಲಿಕೇಶನ್‌ಗಳನ್ನು ಪ್ರಚಾರ ಮಾಡಿದ್ದಕ್ಕಾಗಿ ಪಂಜಗುಟ್ಟ ಪೊಲೀಸ್ ಠಾಣೆಯಲ್ಲಿ ಶ್ಯಾಮಲಾ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ಆಂಧ್ರ365 ಎಂಬ ಆನ್‌ಲೈನ್ ಗೇಮಿಂಗ್ ಅಪ್ಲಿಕೇಶನ್ ಅನ್ನು ಆಂಕರ್ ಶ್ಯಾಮಲಾ ಪ್ರಚಾರ ಮಾಡಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖವಾಗಿದೆ.
ನಿಷೇಧಿತ ಬೆಟ್ಟಿಂಗ್ ಅಪ್ಲಿಕೇಶನ್‌ಗಳನ್ನು ಪ್ರಚಾರ ಮಾಡಿರುವ ಆರೋಪದಡಿ ಮಿಯಾಪುರ ಪೊಲೀಸರು ನಟರಾದ ದಗ್ಗುಬಟ್ಟಿ ರಾಣಾ, ಪ್ರಕಾಶ್ ರಾಜ್, ವಿಜಯ್ ದೇವರಕೊಂಡ, ಮಂಚು ಲಕ್ಷ್ಮಿ, ಪ್ರಣೀತಾ, ನಿಧಿ ಅಗರ್ವಾಲ್, ಅನನ್ಯ ನಾಗಲ್ಲ ಮತ್ತು ನಿರೂಪಕಿ ಶ್ಯಾಮಾ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ಇವರೊಂದಿಗೆ ಪ್ರಭಾವಿ ಹಾಗೂ ಕಿರುತೆರೆ ನಟರಾದ ವಿಷ್ಣು ಪ್ರಿಯಾ, ಹರ್ಷ ಸಾಯಿ, ಭಯ್ಯಾ ಸನ್ನಿ ಯಾದವ್, ಟೇಸ್ಟಿ ತೇಜ, ರಿತು ಚೌಧರಿ, ಬಂಡಾರು ಸುಪ್ರೀತಾ, ಶ್ರೀಮುಖಿ, ವರ್ಷಿಣಿ, ಸೌಂದರರಾಜನ್, ಸಿರಿ ಹನುಮಂತು, ವಸಂತಿ ಕೃಷ್ಣನ್, ಶೋಭಾ ಶೆಟ್ಟಿ, ಅಮೃತಾ ಪವನ್, ಅಮೃತಾ ಚೌಧರಿ, ನೇಹಾ ಪವನ್ ಹೆಸರನ್ನು ಪೊಲೀಸರು ಸೇರಿಸಿದ್ದಾರೆ.
ಎಫ್‌ಐಆರ್‌ನಲ್ಲಿ ಇಮ್ರಾನ್ ಖಾನ್ ಮತ್ತು ಇತರರು ಸೇರಿದ್ದಾರೆ. ಮಿಯಾಪುರದ ವ್ಯಕ್ತಿಯೊಬ್ಬರು ನೀಡಿದ ದೂರಿನ ಆಧಾರದ ಮೇಲೆ ಪೊಲೀಸರು ಎಫ್‌ಐಆರ್ ದಾಖಲಿಸಿದ್ದಾರೆ ಎಂದು ವರದಿಯಾಗಿದೆ. ಈ ಮಧ್ಯೆ ಶ್ಯಾಮಲಾ, ವಿಷ್ಣು ಪ್ರಿಯಾ ಸೇರಿ ಒಟ್ಟು 11 ಮಂದಿ ವಿರುದ್ಧ ಪಂಜಗುಟ್ಟ ಪೊಲೀಸ್ ಠಾಣೆಯಲ್ಲಿ ಇದೇ 17ರಂದು ಪ್ರಕರಣ ದಾಖಲಾಯಿತು. ಪ್ರಕರಣದ ವಿಚಾರಣೆಗೆ ಹಾಜರಾಗುವಂತೆ ಪೊಲೀಸರು ನೋಟಿಸ್ ಕೂಡ ಜಾರಿಗೊಳಿಸಿದ್ದಾರೆ.
ಈ ಪೈಕಿ ವಿಷ್ಣು ಪ್ರಿಯಾ ಮತ್ತು ರಿತು ಚೌಧರಿ ಗುರುವಾರ (ಮಾ.20) ಪಂಜಗುಟ್ಟ ಪೊಲೀಸ್ ಠಾಣೆಯಲ್ಲಿ ವಿಚಾರಣೆಗೆ ಹಾಜರಾದರು. ಪೊಲೀಸರು ವಿಷ್ಣು ಪ್ರಿಯಾರನ್ನು 10 ಗಂಟೆಗಳ ಕಾಲ ಮತ್ತು ರಿತು ಚೌಧರಿಯನ್ನು ಐದೂವರೆ ಗಂಟೆಗಳ ಕಾಲ ವಿಚಾರಣೆಗೆ ಒಳಪಡಿಸಿದ್ದರು ಎಂದು ವರದಿ ಉಲ್ಲೇಖಿಸಿದೆ,(ಏಜೆನ್ಸೀಸ್).