Benjamin Netanyahu | ಹಮಾಸ್​ ಮೇಲೆ ಇಸ್ರೇಲ್​​​ ದಾಳಿ; ಭಯೋತ್ಪಾದನೆ ವಿರುದ್ಧ ಕ್ರಮ ಕೈಗೊಳ್ಳದಿದ್ದರೆ ಇದೇ ರೀತಿ ವರ್ತಿಸುತ್ತೇವೆ ಎಂದ ಪ್ರಧಾನಿ ನೆತನ್ಯಾಹು

Benjamin Netanyahu
Published on

Benjamin Netanyahu: ಕತಾರ್ ರಾಜಧಾನಿ ದೋಹಾದಲ್ಲಿ ಹಮಾಸ್ ಅಧಿಕಾರಿಗಳನ್ನು ಗುರಿಯಾಗಿಸಿಕೊಂಡು ಇಸ್ರೇಲ್ ನಡೆಸಿದ ಇತ್ತೀಚಿನ ಮಿಲಿಟರಿ ಕ್ರಮವನ್ನು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಸಮರ್ಥಿಸಿಕೊಂಡಿದ್ದು , 9/11 ದಾಳಿಗೆ ಅಮೆರಿಕದ ಪ್ರತಿಕ್ರಿಯೆಗೆ ಸಮಾವಾಗಿದ್ದು. ಇಲ್ಲಿಯವರೆಗೆ ಭಯೋತ್ಪಾದಕರಿಗೆ ಆಶ್ರಯ ನೀಡುವ ದೇಶಗಳು ಅವರನ್ನು ಮೊದಲು ಹೊರಹಾಕಬೇಕು ಮತ್ತು ನ್ಯಾಯಲಯಕ್ಕೆ ತರಬೇಕು ಎಂದು ಒತ್ತಾಯಿಸಿದರು.

ಒಂದು ವೇಳೆ ಭಯೋತ್ಪಾದನೆ ವಿರುದ್ಧ ಆಯಾ ದೇಶಗಳು ಕ್ರಮ ಕೈಗೊಳ್ಳದೆ ಹೋದರೆ, ಇಸ್ರೇಲ್‌ ಆ ಕೆಲಸವನ್ನು ಮಾಡುತ್ತದೆ ಎಂದು ಎಚ್ಚರಿಕೆ ನೀಡಿದರು. ಗಾಜಾ ಪಟ್ಟಿಯಲ್ಲಿ ಕದನ ವಿರಾಮಕ್ಕಾಗಿ ಅಮೆರಿಕದ ಪ್ರಸ್ತಾವನೆಯನ್ನು ಪರಿಗಣಿಸಲು ಹಮಾಸ್‌ನ ಉನ್ನತ ನಾಯಕರು ಮಂಗಳವಾರ ಸೇರಿದಾಗ ಇಸ್ರೇಲ್, ಕತಾರ್‌ನಲ್ಲಿರುವ ಹಮಾಸ್​​​ನ ಪ್ರಮುಖ ಕಚೇರಿಯ ಮೇಲೆ ದಾಳಿ ಮಾಡಿತು ಎನ್ನಲಾಗಿದೆ.

ಈ ದಾಳಿಯನ್ನು ಖಂಡಿಸಿರುವ ಕತಾರ್, ಇದೊಂದು ಹೇಡಿತನದ ನಡೆಯಾಗಿದ್ದು, ಅಂತರರಾಷ್ಟ್ರೀಯ ಕಾನೂನುಗಳು ಮತ್ತು ಮಾನದಂಡಗಳ ಸ್ಪಷ್ಟ ಉಲ್ಲಂಘನೆಯಾಗಿದೆ, ಕತಾರ್‌ನಲ್ಲಿರುವ ನಿವಾಸಿಗಳ ಭದ್ರತೆ ಮತ್ತು ಸುರಕ್ಷತೆಗೆ ಗಂಭೀರ ಬೆದರಿಕೆಯನ್ನು ಒಡ್ಡುತ್ತದೆ ಎಂದಿದೆ.

ಅಫ್ಘಾನಿಸ್ತಾನದಲ್ಲಿ ಅಲ್-ಖೈದಾ ವಿರುದ್ಧ ಅಮೆರಿಕದ ಕಾರ್ಯಾಚರಣೆಗಳು ಮತ್ತು ಪಾಕಿಸ್ತಾನದಲ್ಲಿ ಒಸಾಮಾ ಬಿನ್ ಲಾಡೆನ್ ಹತ್ಯೆಯನ್ನು ಉಲ್ಲೇಖಿಸಿದ ನೆತನ್ಯಾಹು, ಅಂದು ಅಮೆರಿಕ ಮಾಡಿದ್ದನ್ನೇ ಇಂದು ನಾವು ಮಾಡಿದ್ದೇವೆ ಎಂದರು.

ಸೆಪ್ಟೆಂಬರ್ 11 ರ ನಂತರ ಅಮೆರಿಕ ಈ ಘೋರ ಅಪರಾಧ ಎಸಗಿದ ಭಯೋತ್ಪಾದಕರು ಎಲ್ಲೇ ಇದ್ದರೂ ಬೇಟೆಯಾಡುವುದಾಗಿ ಅದು ಭರವಸೆ ನೀಡಿತು. ಮತ್ತು ಎರಡು ವಾರಗಳ ನಂತರ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ಸರ್ಕಾರಗಳು ಭಯೋತ್ಪಾದಕರಿಗೆ ಆಶ್ರಯ ನೀಡುವಂತಿಲ್ಲ ಎಂದು ಹೇಳುವ ನಿರ್ಣಯವನ್ನು ಅಂಗೀಕರಿಸಿತು, ನಿನ್ನೆ ನಾವು ಅದೇ ರೀತಿ ವರ್ತಿಸಿದ್ದೇವೆ ಎಂದು ನೆತನ್ಯಾಹು ಹೇಳಿದ್ದಾರೆ.

ಪ್ರಪಂಚದ ವಿವಿಧ ದೇಶಗಳು ಈ ವಿಷಯದಲ್ಲಿ ಇಸ್ರೇಲನ್ನು ಖಂಡಿಸುತ್ತಿವೆ,ಆದರೆ, ಆತ್ಮರಕ್ಷಣೆ ಮತ್ತು ಭಯೋತ್ಪಾದನೆ ನಿಗ್ರಹದ ಪ್ರಶ್ನೆ ಎದುರಾದಾಗ ನಾವು ಇದೇ ರೀತಿಯಾಗಿ ವರ್ತಿಸುತ್ತೇವೆ,  ಎಲ್ಲರೂ ನಮ್ಮನ್ನು ಶ್ಲಾಘಿಸಬೇಕೆಂದರು.(ಏಜೆನ್ಸೀಸ್​​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net