

ಯೆಮೆನ್: ಇಸ್ರೇಲ್, ಯೆಮನ್‌ನಲ್ಲಿ ಮತ್ತೊಂದು ಸುತ್ತಿನ ಭಾರೀ ವೈಮಾನಿಕ ದಾಳಿ ನಡೆಸಿದ ಪರಿಣಾಮ, ಕನಿಷ್ಠ 35 ಜನರು ಸಾವನ್ನಪ್ಪಿ 130 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ ಎಂದು ಹೌತಿ ಅಧಿಕಾರಿಗಳು ತಿಳಿಸಿದ್ದಾರೆ. ಹೌತಿ ಬಂಡುಕೋರರು ಇಸ್ರೇಲಿ ವಿಮಾನ ನಿಲ್ದಾಣದ ಮೇಲೆ ಡ್ರೋನ್ ದಾಳಿ ನಡೆಸಿದ ಕೆಲ ದಿನಗಳ ಬಳಿಕ ಈ ಬೆಳವಣಿಗೆ ನಡೆದಿದೆ.
ಯೆಮೆನ್ ಮೇಲೆ ನಡೆದ ದಾಳಿಗಳಲ್ಲಿ ಸನಾ ಕೇಂದ್ರದಲ್ಲಿರುವ ಮಿಲಿಟರಿ ಪ್ರಧಾನ ಕಚೇರಿಯ ಕಟ್ಟಡದ ಮೇಲೂ ದಾಳಿ ನಡೆದಿದೆ ಎಂದು ಹೌತಿ ನಿಯಂತ್ರಿತ ಉಪಗ್ರಹ ಸುದ್ದಿ ವಾಹಿನಿ ಅಲ್-ಮಸಿರಾ ವರದಿ ಮಾಡಿದೆ. ನೆರೆಹೊರೆಯ ಮನೆಗಳಿಗೂ ಹಾನಿಯಾಗಿದೆ ಎನ್ನಲಾಗಿದೆ.
ಯೆಮೆನ್ ಅಧಿಕಾರಿಗಳ ಪ್ರಕಾರ, ದಾಳಿಯಲ್ಲಿ ಮಿಲಿಟರಿ ನೆಲೆಗಳು ಮತ್ತು ಇಂಧನ ಕೇಂದ್ರವನ್ನು ಗುರಿಯಾಗಿಸಿಕೊಳ್ಳಲಾಗಿದೆ. ಇಸ್ರೇಲ್ ಯುದ್ಧ ವಿಮಾನಗಳ ಮೂಲಕ ಈ ದಾಳಿಯನ್ನು ನಡೆಸಿದೆ ಎನ್ನಲಾಗಿದೆ.ರಾಜಧಾನಿ ಸನಾ ಸೇರಿದಂತೆ ಯೆಮೆನ್‌ನ ಹಲವಾರು ಭಾಗಗಳಲ್ಲಿ ಇಸ್ರೇಲ್ ಬುಧವಾರ ಹೌತಿ ಬಂಡುಕೋರರ ಮೇಲೆ ವಾಯುದಾಳಿ ನಡೆಸಿದೆ.
(ಏಜೆನ್ಸೀಸ್)
ಇಸ್ರೇಲ್ ಮೇಲೆ ಹೌತಿಗಳು ಕ್ಷಿಪಣಿಗಳು ಮತ್ತು ಡ್ರೋನ್‌ಗಳನ್ನು ಹಾರಿಸುತ್ತಿರುವುದಕ್ಕೆ ಪ್ರತಿಕ್ರಿಯೆಯಾಗಿ ಇಸ್ರೇಲ್ ಈ ಹಿಂದೆಯೂ ವೈಮಾನಿಕ ದಾಳಿಗಳನ್ನು ನಡೆಸಿದೆ. ಇರಾನ್ ಬೆಂಬಲಿತ ಹೌತಿಗಳು ಗಾಜಾ ಪಟ್ಟಿಯಲ್ಲಿ ಹಮಾಸ್ ಮತ್ತು ಪ್ಯಾಲೆಸ್ತೇನಿಯನ್ನರನ್ನು ಬೆಂಬಲಿಸುತ್ತಿರುವುದಾಗಿ ಹೇಳಿಕೊಂಡಿದ್ದು, ಭಾನುವಾರ ಇಸ್ರೇಲ್‌ನ ಬಹುಪದರದ ವಾಯು ರಕ್ಷಣೆಯನ್ನು ಉಲ್ಲಂಘಿಸಿ ದೇಶದ ದಕ್ಷಿಣ ವಿಮಾನ ನಿಲ್ದಾಣಕ್ಕೆ ಡ್ರೋನ್ ಅನ್ನು ಕಳುಹಿಸಿತ್ತು. ಇನ್ನೂ ಗಾಜಾ ನಗರದಲ್ಲಿ ಸುಮಾರು 1 ಮಿಲಿಯನ್ ಜನರು ಸ್ಥಳಾಂತರಗೊಳ್ಳಬೇಕೆಂದು ಇಸ್ರೇಲ್ ತನ್ನ ಕರೆಗಳನ್ನು ಪುನರುಚ್ಚರಿಸಿದೆ.