

ಬೆಂಗಳೂರು: ಸಿಐಡಿ ಡಿವೈಎಸ್ಪಿ ಲಕ್ಷ್ಮೀ ಅನುಮಾನಾಸ್ಪದ ಆತ್ಮಹತ್ಯೆ ಪ್ರಕರಣ ಮಾಸುವ ಮುನ್ನವೇ ಪೊಲೀಸ್ ದಂಪತಿ ಆತ್ಮಹತ್ಯೆ ಮಾಡಿಕೊಂಡಿರುವ ಮತ್ತೊಂದು ಪ್ರಕರಣ ಶುಕ್ರವಾರ ವರದಿಯಾಗಿದೆ.
ಪೊಲೀಸ್ ಪೇದೆಗಳಾದ ಶೀಲಾ ಹಾಗೂ ಹೆಚ್.ಸಿ. ಸುರೇಶ್ ನೇಣಿಗೆ ಶರಣಾಗಿದ್ದಾರೆ. ಕಳೆದ ಹತ್ತು ವರ್ಷದ ಹಿಂದೆ ಶೀಲಾ ಮತ್ತು ಸುರೇಶ್ ಮದುವೆಯಾಗಿದ್ದರು. ಇಬ್ಬರದ್ದು ಪ್ರೇಮವಿವಾಹ. ಶೀಲಾ ಮೂಲತಃ ಚಿಕ್ಕಮಗಳೂರಿನವರು. ಸುರೇಶ್ ಕೋಲಾರ ಮೂಲದವರು. ಕ್ಷುಲ್ಲಕ ಕಾರಣಕ್ಕೆ ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ವ್ಯಕ್ತವಾಗಿದ್ದು, ಪೊಲೀಸ್ ತನಿಖಾ ನಂತರವಷ್ಟೇ ಪೂರ್ಣ ಮಾಹಿತಿ ದೊರೆಯಲಿದೆ.
ಶೀಲಾ ಕೊತ್ತನೂರು ಠಾಣೆಯಲ್ಲಿ ಹಾಗೂ ಸುರೇಶ್ ಸಂಪಿಗೆಹಳ್ಳಿ ಎಸಿಪಿ ಕಚೇರಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು. ಆತ್ಮಹತ್ಯೆ ಪ್ರಕರಣ ಸಂಬಂಧ ಕೊತ್ತನೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. (ದಿಗ್ವಿಜಯ ನ್ಯೂಸ್)