

ಬೆಂಗಳೂರು: ಇತ್ತೀಚಿನ ದಿನಗಳಲ್ಲಿ ಕೃತಕ ಬುದ್ಧಿಮತ್ತೆಯ (AI) ವ್ಯಾಪ್ತಿ ಎಲ್ಲಾ ಕ್ಷೇತ್ರಕ್ಕೂ ವಿಸ್ತರಿಸಿದ್ದು, ಎಐ ನಮ್ಮ ದೈನಂದಿನ ಭಾಗವಾಗಿಬಿಟ್ಟಿದೆ. ಅದು ಎಷ್ಟರಮಟ್ಟಿಗೆ ಎಂದರೆ ನಾವು ಮನೆಯಲ್ಲಿ ಮಾಡುವ ಚಪಾತಿ ಅಥವಾ ರೊಟ್ಟಿ ರೌಂಡ್ ಶೇಪ್ನಲ್ಲಿ ಇದೆಯಾ ಎಂಬುದನ್ನು ಪರಿಶೀಲಿಸಲು ಎಐ ಟೂಲ್ ಬಂದಿದೆ. ಆಶ್ಚರ್ಯವೆನಿಸಿದರು ಇದು ನಿಜವಾಗಿದೆ.
ಬೆಂಗಳೂರು ಮೂಲದ ಐಐಟಿ ಪದವಿಧರರೊಬ್ಬರು ರೊಟ್ಟಿ ಹಾಗೂ ಚಪಾತಿ ಗುಂಡಾಗಿದೆಯೇ ಎಂದು ಪರೀಕ್ಷಿಸಲು ಎಐ (AI) ಟೂಲ್ ಒಂದನ್ನು ಅಭಿವೃದ್ಧಿಪಡಿಸಿದ್ದು, ಈ ಸಾಧನದ ಮೂಲಕ ನೀವು ಮಾಡಿದ ರೊಟ್ಟಿ ಅಥವಾ ಚಪಾತಿ ಎಷ್ಟು ಗುಂಡಾಗಿದೆ ಎಂಬುದನ್ನು ಮೌಲ್ಯಮಾಪನ ಮಾಡಬಹುದಾಗಿದೆ. ಈ ಕುರಿತ ಪೋಸ್ಟ್ ಒಂದು ಇದೀಗ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗುತ್ತಿದೆ.
ಐಐಟಿ ಖರಗ್‌ಪುರ ಪದವೀಧರರಾಗಿರುವ ಬೆಂಗಳೂರು ಮೂಲದ ಡೆವಲಪರ್ ಅನಿಮೇಶ್ ಚೌಹಾಣ್ ರೊಟ್ಟಿ ಮತ್ತು ಚಪಾತಿ ರೇಟ್ ಮಾಡಲು ಅನುವು ಮಾಡಿಕೊಡುವ ತಂತ್ರಜ್ಞಾನದೊಂದಿಗೆ ಬರುವುದಾಗಿ ಬಹಿರಂಗಪಡಿಸಿದ್ದಾರೆ. ಈ ಎಐ (AI) ಉಪಕರಣವು ಮೊದಲು ರೊಟ್ಟಿ ಅಥವಾ ಚಪಾತಿಯ ರೌಂಡ್ ಶೇಪ್‌ನ್ನು ಸ್ಕ್ಯಾನ್ ಮಾಡುತ್ತದೆ, ನಂತರ ಅದಕ್ಕೆ 100 ಕ್ಕೆ ಇಂತಿಷ್ಟು ಅಂಕವನ್ನು ನೀಡುತ್ತದೆ.
ತಮ್ಮ ಬಿಡುವಿನ ಸಮಯದಲ್ಲಿ ಈ ಟೂಲ್ ಅಭಿವೃದ್ಧಿಡಿಸಿದ್ದು, ಇದೀಗ ಈ ಎಐ (AI) ಪರಿಕರದ ಸುದ್ದಿ ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದ್ದು, ಕುತೂಹಲಕಾರಿ ವಿಷಯವೆಂದರೆ ಇದಕ್ಕೆ ಹೂಡಿಕೆದಾರರ ಬಗ್ಗೆಯೂ ಚರ್ಚೆಗಳು ಪ್ರಾರಂಭವಾಗಿವೆ. rotichecker.ai ಖಾತೆಯಲ್ಲಿ ಇದರ ಲಿಂಕ್ ಶೇರ್ ಮಾಡಿದ್ದಾರೆ. ಅನೇಕರು ತಮ್ಮ ಮನೆಯಲ್ಲಿ ಮಾಡಿರುವ ಚಪಾತಿ ಹಾಗೂ ರೊಟ್ಟಿಯ ಫೋಟೋಗಳ ಮೌಲ್ಯಮಾಪನವನ್ನು ಅಪ್ಲೋಡ್ ಮಾಡಿದ್ದಾರೆ. ಜನವರಿ 31ರಂದು ಈ ಪೋಸ್ಟ್ಅನ್ನು ಹಂಚಿಕೊಳ್ಳಲಾಗಿದ್ದು, ಈವರೆಗೂ 468.7k ವೀವ್ಸ್ ಪಡೆದುಕೊಂಡಿದೆ. ಸದ್ಯ ಈ ಪೋಸ್ಟ್ ವೈರಲ್ ಆಗಿದೆ.