11 ಅಲ್ಲ 12 ಆಟಗಾರರೊಂದಿಗೆ ಆಡಿದ್ದಾರೆ; ಸರಣಿ ಗೆಲುವಿನ ಬೆನ್ನಲ್ಲೇ Team India ವಿರುದ್ಧ ಕೇಳಿಬಂತು ಮೋಸದಾಟದ ಆರೋಪ

Team India
Published on

ನವದೆಹಲಿ: ಫೆಬ್ರವರಿ 02ರಂದು ವಾಂಖೆಡೆ ಕ್ರೀಡಾಂಗಣದಲ್ಲಿ ನಡೆದ ಭಾರತ (Team India) ಹಾಗೂ ಇಂಗ್ಲೆಂಡ್​ (England) ನಡುವಿನ ಟಿ20 ಸರಣಿಯಲ್ಲಿ ಆತಿಥೇಯರು 4-1 ಅಂತರದಿಂದ ಸರಣಿಯನ್ನು ಜಯಿಸಿದ್ದು, ಮುಂಬರುವ ಸರಣಿಗಳಿಗೆ ಈಗಿನಿಂದಲೇ ತಯಾರಿ ಆರಂಭಿಸಿದೆ. ಇನ್ನೂ ಸರಣಿಯನ್ನು ಸೋಲುವ ಮೂಲಕ ಇಂಗ್ಲೆಂಡ್​ ತಂಡವು ಭಾರೀ ಮುಖಭಂಗವನ್ನು ಅನುಭವಿಸಿದ್ದು, ತಂಡದ ಮ್ಯಾನೇಜ್​ಮೆಂಟ್​ಗೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ. ಸರಣಿ ಸೋತ ಬೆನ್ನಲ್ಲೇ ಟೀಮ್​ ಇಂಡಿಯಾ ವಿರುದ್ಧ ಮೋಸದಾಟದ ಆರೋಪ ಕೇಳಿ ಬಂದಿದ್ದು, ಇಂಗ್ಲೆಂಡ್ ತಂಡದ ಮಾಜಿ ನಾಯಕ ಈ ಬಗ್ಗೆ ದೂರಿದ್ದಾರೆ.

ಖಾಸಗಿ ಸುದ್ದಿ ವಾಹಿನಿಗೆ ನೀಡಿದ ಸಂದರ್ಶನದಲ್ಲಿ ಈ ಬಗ್ಗೆ ಮಾತನಾಡಿರುವ ಮೈಕಲ್​ ವಾಗನ್​, ಇಂಗ್ಲೆಂಡ್​ ಭಾರತದ (Team India) ವಿರುದ್ಧ 4-1 ಅಥವಾ 3-2 ಅಂತರದಲ್ಲಿ ಸರಣಿ ಜಯಿಸುತ್ತದೆ ಎಂದು ಭವಿಷ್ಯ ನುಡಿದಿದ್ದರು. ಆದರೆ, ವಾಗನ್​ ಲೆಕ್ಕಾಚಾರ ತಲೆಕೆಳಗಾದ ಕಾರಣ ಟ್ವೀಟ್​ನಲ್ಲಿ 2-2 ಕೊನೆಯ ಪಂದ್ಯವನ್ನು ಲೆಕ್ಕಿಕಿಡಲು ಸಾದ್ಯವಿಲ್ಲ. ಏಕೆಂದರೆ ಭಾರತ 11ರ ಬದಲು 12 ಆಟಗಾರರನ್ನು ಆಡಿಸಿದೆ ಎಂದು ಟ್ವೀಟ್​ ಮಾಡಿ ಆರೋಪಿಸಿದ್ದಾರೆ.

ಇದೀಗ ಮೈಕಲ್​ ವಾಗನ್ ಆರೋಪ ಹೊಸ ಚರ್ಚೆಗೆ ನಾಂದಿ ಹಾಡಿದ್ದು, ಟೀಮ್ ಇಂಡಿಯಾ (Team India) ವಿರುದ್ಧ ಆರೋಪಿಸಿ ಇಂಗ್ಲೆಂಡ್​ನ ಮಾಜಿ ನಾಯಕ ಟೀಕೆಗೆ ಗುರಿಯಾಗಿರುವುದು ಇದೇ ಮೊದಲಲ್ಲ. ಈ ಹಿಂದೆ ಭಾರತ ತಂಡ ವಿಶ್ವಕಪ್ ಗೆದ್ದಾಗಲೂ ಮೈಕಲ್ ವಾಗನ್​ ಇಲ್ಲದ ಆರೋಪ ಮಾಡಿ ಟೀಕೆಗೆ ಗುರಿಯಾಗಿದ್ದರು. ಇದೀಗ ಮತ್ತೊಮ್ಮೆ ಹೇಳಿಕೆ ನೀಡಿರುವ ವಾಗನ್​ ಮತ್ತೊಮ್ಮೆ ಭಾರತೀಯರ ಕೆಂಗಣ್ಣಿಗೆ ಗುರಿಯಾಗಿದ್ದಾರೆ.

ಮ್ಯಾಚ್ ರಿಪೋರ್ಟ್​

ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್​ ಮಾಡಿದ ಟೀಮ್​ ಇಂಡಿಯಾಕ್ಕೆ (Team India) ಸಾಧಾರಣ ಆರಂಭ ಸಿಕ್ಕಿತು. ಆರಂಭಿಕ ಸಂಜು ಸ್ಯಾಮ್ಸನ್ ಮೊದಲ ಎಸೆತದಲ್ಲೇ ಸಿಕ್ಸರ್ ಬಾರಿಸುವ ಮೂಲಕ ತಂಡದ ಉದ್ದೇಶವನ್ನು ಸ್ಪಷ್ಟಪಡಿಸಿದ್ದರು. ಆದರೆ ವಿಕೆಟ್ ಮೇಲೆ ಹೆಚ್ಚು ಸಮಯ ಕಳೆಯಲು ಸಾಧ್ಯವಾಗದೆ 16 ರನ್ ಗಳಿಸಿ ಪೆವಿಲಿಯನ್ ಸೇರಿಕೊಂಡರು. ಇದರ ನಂತರ ಇನ್ನಿಂಗ್ಸ್ ಜವಬ್ದಾರಿ ಹೊತ್ತ ಅಭಿಷೇಕ್ ಶರ್ಮಾ ಮತ್ತು ತಿಲಕ್ ವರ್ಮಾ ಎರಡನೇ ವಿಕೆಟ್‌ಗೆ 43 ಎಸೆತಗಳಲ್ಲಿ 115 ರನ್‌ಗಳ ಜೊತೆಯಾಟ ನಡೆಸಿದರು. ಆದರೆ ಈ ವೇಳೆ ತಿಲಕ್ ವರ್ಮಾ 24 ರನ್ ಗಳಿಸಿ ವಿಕೆಟ್ ಒಪ್ಪಿಸಿದರು. ಒನ್ ಮ್ಯಾನ್ ಶೋ ಪ್ರದರ್ಶನ ಮುಂದುವರೆಸಿದ ಅಭಿಷೇಕ್ ಶರ್ಮಾ 54 ಎಸೆತಗಳಲ್ಲಿ ಏಳು ಬೌಂಡರಿ ಹಾಗೂ 13 ಸಿಕ್ಸರ್‌ಗಳ ಸಹಾಯದಿಂದ 135 ರನ್ ಗಳಿಸಿ ಔಟಾದರು. ಉಳಿದಂತೆ ಸೂರ್ಯಕುಮಾರ್ ಯಾದವ್ ಎರಡು ರನ್, ಶಿವಂ ದುಬೆ 30 ರನ್, ಹಾರ್ದಿಕ್ ಪಾಂಡ್ಯ 9 ರನ್, ರಿಂಕು ಸಿಂಗ್ 9 ರನ್, ಅಕ್ಷರ್ ಪಟೇಲ್ 15 ರನ್​ಗಳ ಕಾಣಿಕೆ ನೀಡಿದರು. ಇತ್ತ ಇಂಗ್ಲೆಂಡ್ ಪರ ಬ್ರೇಡನ್ ಕಾರ್ಸೆ ಮೂರು ಹಾಗೂ ಮಾರ್ಕ್ ವುಡ್ ಎರಡು ವಿಕೆಟ್ ಪಡೆದರೆ, ಆರ್ಚರ್, ಓವರ್ಟನ್ ಮತ್ತು ಆದಿಲ್ ರಶೀದ್ ತಲಾ ಒಂದೊಂದು ವಿಕೆಟ್ ಪಡೆದರು.

ಈ ಬೃಹತ್ ಮೊತ್ತ ಬೆನ್ನಟ್ಟಿದ ಇಂಗ್ಲೆಂಡ್​ಗೆ ಒಂದೇ ಒಂದು ಒಳ್ಳೇಯ ಜೊತೆಯಾಟ ಸಿಗಲಿಲ್ಲ. ಆರಂಭದಿಂದಲೂ ತಂಡ ನಿಯಮಿತ ಅಂತರದಲ್ಲಿ ವಿಕೆಟ್ ಕಳೆದುಕೊಳ್ಳುತ್ತ ಸಾಗಿತು. ಹೀಗಾಗಿ ಇಡೀ ತಂಡಕ್ಕೆ 100 ರನ್​ಗಳ ಗಡಿ ದಾಟಲು ಸಾಧ್ಯವಾಗಲಿಲ್ಲ. ಆಂಗ್ಲರ ಪರ ಆರಂಭಿಕ ಪಿಲ್ ಸಾಲ್ಟ್​ 55 ರನ್ ಬಾರಿಸಿದನ್ನು ಬಿಟ್ಟರೆ, ಜೆಕಬ್ ಬೆಥೆಲ್ 10 ರನ್​ಗಳ ಕಾಣಿಕೆ ನೀಡಿದರು. ಉಳಿದ ಅಷ್ಟೂ ಬ್ಯಾಟರ್​ಗಳಿಗೆ ಒಂದಂಕಿ ಮೊತ್ತ ದಾಟಲು ಸಾಧ್ಯವಾಗಲಿಲ್ಲ. ಇತ್ತ ಐದನೇ ಟಿ20 ಪಂದ್ಯದಲ್ಲಿ ಇಂಗ್ಲೆಂಡ್ ತಂಡವನ್ನು 150 ರನ್‌ಗಳ ಅಂತರದಿಂದ ಸೋಲಿಸುವ ಮೂಲಕ ಭಾರತ ಟಿ20 ಅಂತರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಎರಡನೇ ಅತಿ ದೊಡ್ಡ ಗೆಲುವನ್ನು ದಾಖಲಿಸಿದ ದಾಖಲೆಯನ್ನು ಸೃಷ್ಟಿಸುವುದರೊಂದಿಗೆ ಸರಣಿಗೆ ಅಂತ್ಯ ಹಾಡಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net