ಕೆಐಎಗೆ ಮೆಟ್ರೋ; ನಿಗದಿಗೂ ಮುನ್ನವೇ ಯೋಜನೆ ಸಾಕಾರ?

mtro
Published on

ರಾಮಕಿಶನ್ ಕೆ.ವಿ.
ಬೆಂಗಳೂರು: ನಗರದಿಂದ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ (ಕೆಐಎ) ನೇರ ಸಂಪರ್ಕ ಕಲ್ಪಿಸುವ ಮೆಟ್ರೋ ಕಾಮಗಾರಿ ತ್ವರಿತ ಗತಿಯಲ್ಲಿ ನಡೆಯುತ್ತಿದ್ದು, ಗಡುವಿಗೆ ಮುನ್ನ ಯೋಜನೆ ಪೂರ್ಣಗೊಳಿಸಲು ಸರ್ಕಾರ ಉತ್ಸುಕತೆ ಹೊಂದಿದೆ.

ಸದ್ಯ ನಗರದಿಂದ ಏರ್‌ಪೋರ್ಟ್‌ಗೆ ಹೋಗಿ ಬರಲು ಪ್ರಯಾಸದ ಹಾದಿ ಸವೆಸಬೇಕಿದೆ. ದುಬಾರಿ ಹಣ ತೆತ್ತರೂ ತ್ವರಿತವಾಗಿ ತಲುಪಲು ಹಲವು ಅಡೆತಡೆಗಳಿವೆ. ಈ ಸಮಸ್ಯೆಗೆ ಮುಕ್ತಿ ಸಿಗಲು ಮೆಟ್ರೋ ಕಾಮಗಾರಿ ಪೂರ್ಣಗೊಳ್ಳುವವರೆಗೂ ಕಾಯಬೇಕಿದೆ. ಹೀಗಾಗಿ ಬಿಎಂಆರ್‌ಸಿಎಲ್‌ಏರ್‌ಪೋರ್ಟ್ ಮಾರ್ಗವನ್ನು ಆದಷ್ಟು ಬೇಗ ಪೂರ್ಣಗೊಳಿಸಲು ಹಗಲು-ರಾತ್ರಿ ಕಾಮಗಾರಿಯನ್ನು ಕೈಗೊಂಡಿದೆ. ಸಂಚಾರದಟ್ಟಣೆಯಲ್ಲಿ ಸಿಲುಕಿ ಸಮಸ್ಯೆ ಎದುರಿಸುತ್ತಿರುವ ಸಾರ್ವಜನಿಕರು ಕೇವಲ 45 ನಿಮಿಷಗಳಲ್ಲಿ ವಿಮಾನ ನಿಲ್ದಾಣ ತಲುಪಬಹುದಾಗಿದೆ. ಏರ್‌ಪೋರ್ಟ್ ಸಂಪರ್ಕಿಸುವ ನೀಲಿ ಮಾರ್ಗವು ಕೇಂದ್ರೀಯ ರೇಷ್ಮೆ ಮಂಡಳಿ-ಕೆ.ಆರ್. ಪುರ-ಹೆಬ್ಬಾಳ-ಕೆಐಎ ಒಳಗೊಂಡಿದೆ. ಕೆ.ಆರ್.ಪುರದಿಂದ ಕೆಐಎಗೆ ಒಟ್ಟು 39 ಕಿ.ಮೀ. ಉದ್ದದ ಈ ಮಾರ್ಗವನ್ನು ತ್ವರಿತವಾಗಿ ಪೂರ್ಣ ಗೊಳಿಸಲು ಎರಡು ಹಂತಗಳಲ್ಲಿ ಕಾಮಗಾರಿಯನ್ನು ಕೈಗೊಳ್ಳಲಾಗಿದೆ.

ರೇಷ್ಮೆ ಮಂಡಳಿ-ಕೆ.ಆರ್.ಪುರ ಮಾರ್ಗದ ‘2ಎ’ ಸಂಪೂರ್ಣ ನಗರದೊಳಗೆ ಹಾದುಹೋಗಬೇಕಿರುವ ಕಾರಣ ಕಾಮಗಾರಿ ಸ್ವಲ್ಪ ಮಟ್ಟಿಗೆ ನಿಧಾನಗೊಂಡಿದೆ. ಕೆ.ಆರ್.ಪುರದಿಂದ ಹೆಬ್ಬಾಳ ಮಾರ್ಗವಾಗಿ ಕೆಐಎ ತಲುಪುವ ‘2ಬಿ’ ಮಾರ್ಗದ ಕಾಮಗಾರಿ ನಿಗದಿಗಿಂತ ತ್ವರಿತವಾಗಿ ನಡೆದಿದೆ. ಇದರ ಒಟ್ಟು ವೆಚ್ಚ ಸುಮಾರು 14,778 ಕೋಟಿ ರೂ. ‘2ಬಿ’ ಮಾರ್ಗದಲ್ಲಿ ಈಗಾಗಲೆ ಪಿಲ್ಲರ್‌ಗಳ ನಿರ್ಮಾಣ ಬಹುತೇಕ ಪೂರ್ಣಗೊಂಡಿದೆ. ಕೆಲವೆಡೆ ಸ್ಟೀಲ್ ಗರ್ಡರ್ ಅಳವಡಿಸಲಾಗಿದೆ. ಜತೆಗೆ ನಿಲ್ದಾಣಗಳ ಕಾಮಗಾರಿಯನ್ನೂ ಕೈಗೆತ್ತಿಕೊಳ್ಳಲಾಗಿದೆ.

ಇತ್ತೀಚೆಗೆ ಸಿಎಂ ಹಾಗೂ ಡಿಸಿಎಂ ಏರ್‌ಪೋರ್ಟ್ ಸಂಪರ್ಕಿಸುವ ಮೆಟ್ರೋ ಯೋಜನೆಗೆ ಇನ್ನಷ್ಟು ಚುರುಕು ನೀಡುವಂತೆ ಬಿಎಂಆರ್‌ಸಿಎಲ್ ಅಧಿಕಾರಿಗಳಿಗೆ ಸೂಚಿಸಿದ್ದಾರೆ. ಇದರಿಂದಾಗಿ 2026ರ ಮಧ್ಯಭಾಗಕ್ಕೆ ಗಡುವು ಇದ್ದರೂ, ಅವಧಿಗೆ ಮುನ್ನವೇ ಕಾಮಗಾರಿ ಪೂರ್ಣಗೊಳಿಸಲು ಮರು ನಿಗದಿಪಡಿಸಿಕೊಂಡು ಕೆಲಸ ಮಾಡುತ್ತಿರುವುದು ವಿಮಾನ ನಿಲ್ದಾಣ ಮಾರ್ಗದ ಮೆಟ್ರೋ ಯೋಜನೆ ಕನಸು ಸಕಾಲದೊಳಗೆ ನನಸಾಗುವ ಆಶಾಭಾವ ಮೂಡಿಸಿದೆ.

ಪ್ರಯಾಣಿಕರ ಸಂಖ್ಯೆ ಹೆಚ್ಚಳ ನಿರೀಕ್ಷೆ

ಏರ್‌ಪೋರ್ಟ್ ಮಾರ್ಗದ ಮೆಟ್ರೋ ರೈಲು ಸೇವೆ ಆರಂಭವಾದಲ್ಲಿ ಗಣನೀಯ ಸಂಖ್ಯೆಯಲ್ಲಿ ಪ್ರಯಾಣಿಕರು ಹೆಚ್ಚುವ ಸಾಧ್ಯತೆ ಇದೆ. ಹಾಲಿ ನೇರಳೆ ಹಾಗೂ ಹಸಿರು ಮಾರ್ಗದಲ್ಲಿ ನಿತ್ಯ 5 ಲಕ್ಷಕ್ಕೂ ಅಧಿಕ ಪ್ರಯಾಣಿಕರು ಸಂಚರಿಸುತ್ತಿದ್ದಾರೆ. ಈ ಮಾರ್ಗ ಸಂಚಾರಕ್ಕೆ ಮುಕ್ತಗೊಂಡಲ್ಲಿ ಪ್ರಯಾಣಿಕರ ಸಂಖ್ಯೆ 6 ಲಕ್ಷ ದಾಟಬಹುದೆಂಬ ಲೆಕ್ಕಾಚಾರ ಇದೆ.

ಒಟ್ಟಾರೆ 30 ನಿಲ್ದಾಣಗಳ ಪಥ

ಏರ್‌ಪೋರ್ಟ್ ಮೆಟ್ರೋ ಮಾರ್ಗವು ಒಟ್ಟು 30 ನಿಲ್ದಾಣಗಳನ್ನು ಒಳಗೊಂಡಿದೆ. ಕೇಂದ್ರೀಯ ರೇಷ್ಮೆ ಮಂಡಳಿ -ಕೆ.ಆರ್.ಪುರ ಮಾರ್ಗದಲ್ಲಿ 13 ನಿಲ್ದಾಣಗಳು ಬರಲಿವೆ. ಕೆ.ಆರ್.ಪುರ-ಕೆಐಎ ಮಾರ್ಗದಲ್ಲಿ 17 ನಿಲ್ದಾಣಗಳು ಇರಲಿವೆ. ಕೆ.ಆರ್. ಪುರದಿಂದ ಆರಂಭವಾಗಿ ಕಸ್ತೂರಿನಗರ, ಹೊರಮಾವು, ಎಚ್‌ಆರ್‌ಬಿಆರ್ ಲೇಔಟ್, ಕಲ್ಯಾಣನಗರ, ಎಚ್‌ಬಿಆರ್ ಲೇಔಟ್, ನಾಗವಾರ, ವೀರಣ್ಣಪಾಳ್ಯ, ಕೆಂಪಾಪುರ, ಹೆಬ್ಬಾಳ, ಕೊಡಿಗೇಹಳ್ಳಿ ಗೇಟ್, ಜಕ್ಕೂರು ಕ್ರಾಸ್ (ಬ್ಯಾಟರಾಯನಪುರ), ಯಲಹಂಕ, ಬಾಗಲೂರು ಕ್ರಾಸ್, ಬೆಟ್ಟಹಲಸೂರು, ದೊಡ್ಡಜಾಲ ಮೂಲಕ ವಿಮಾನ ನಿಲ್ದಾಣ ಸಂಪರ್ಕಿಸಲಿದೆ. ಇದರಿಂದ ಮೆಜೆಸ್ಟಿಕ್, ಜೆ.ಪಿ. ನಗರ, ಮಾನ್ಯತಾ ಟೆಕ್‌ಪಾರ್ಕ್, ಹೆಬ್ಬಾಳ ಸೇರಿ ನಗರದ ದಕ್ಷಿಣ, ಪೂರ್ವ ಹಾಗೂ ಉತ್ತರ ಭಾಗದ ಜನರು ಸುಲಭವಾಗಿ ಏರ್‌ಪೋರ್ಟ್ ತಲುಪಲು ಸಾಧ್ಯವಾಗಲಿದೆ.

ಪ್ರಯಾಣಿಕರಿಗೆ ಲಾಭ

ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವನ್ನು ಸಂಪರ್ಕಿಸುವ ಮೆಟ್ರೋ ಮಾರ್ಗ ನಗರದ ಟ್ರಾಫಿಕ್ ಜಂಜಾಟವನ್ನು ತಗ್ಗಿಸಲಿದೆ. ಸದ್ಯ ಪ್ರಯಾಣಿಕರು ವಿಮಾನ ನಿಲ್ದಾಣಕ್ಕೆ ತೆರಳಲು ಕ್ಯಾಬ್, ಸ್ವಂತ ವಾಹನ ಹಾಗೂ ಬಿಎಂಟಿಸಿ ವೋಲ್ವೋ ಬಸ್ ಅವಲಂಬಿಸಿದ್ದಾರೆ. ಏರ್‌ಪೋರ್ಟ್ ರಸ್ತೆಯುದ್ದಕ್ಕೂ ಬಹುತೇಕ ಸಮಯದಲ್ಲಿ ಟ್ರಾಫಿಕ್ ಕಿರಿಕಿರಿ ಇದ್ದೇ ಇದೆ. ಹೀಗಾಗಿ ಪ್ರಯಾಣಿಕರು ಸಾಕಷ್ಟು ಮುಂಚಿತವಾಗಿ ಪ್ರಯಾಣ ಆರಂಭಿಸಬೇಕಿದೆ. ಇಂತಹ ಪರಿಸ್ಥಿತಿಯಲ್ಲಿ ಮೆಟ್ರೋ ಸೇವೆ ಆರಂಭವಾಗುತ್ತಿದ್ದಂತೆ ವಿಮಾನ ನಿಲ್ದಾಣಕ್ಕೆ ತೆರಳುವ ಮಂದಿ ಹೆಚ್ಚಿನ ಅನುಕೂಲ ಪಡೆಯುವುದು ನಿಶ್ಚಿತ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net