

ನವದೆಹಲಿ: ಬಾಲಿವುಡ್ ನಟಿ ನೀನಾ ಗುಪ್ತ ನಟಿಸಿರುವ ‘ಲಸ್ಟ್ ಸ್ಟೋರೀಸ್ 2’ ಸಿನಿಮಾ ಬಿಡುಗಡೆಗೆ ಸಜ್ಜಾಗಿದೆ. ಈ ನಡುವೆ ಸಂದರ್ಶನವೊಂದರಲ್ಲಿ ತಮ್ಮ ಮೊದಲ 'ಕಿಸ್ಸಿಂಗ್ ಸೀನ್' ಬಗ್ಗೆ ಮಾತನಾಡುತ್ತಾ, ಅದೊಂದು ಕೆಟ್ಟ ಅನುಭವವಾಗಿದ್ದು, ಅಂದು ಇಡೀ ರಾತ್ರಿ ನಿದ್ದೆ ಬಂದಿರಲಿಲ್ಲ ಎಂದು ಹೇಳಿಕೊಂಡಿದ್ದಾರೆ.
1990ರ ಸಂದರ್ಭದಲ್ಲಿ ಟಿ.ವಿ ಪರದೆಯ ಮೇಲೆ ಚುಂಬನದ ದೃಶ್ಯಗಳನ್ನು ಪ್ರಸಾರ ಮಾಡುತ್ತಿರಲಿಲ್ಲ. ಆದರೆ ನಾನು ಭಾರತೀಯ ಟಿವಿ ಇತಿಹಾಸದಲ್ಲಿ ಮೊಟ್ಟ ಮೊದಲ ಬಾರಿಗೆ ಕಿಸ್ಸಿಂಗ್ ಸೀನ್ ಮಾಡಬೇಕಾಗಿ ಬಂತು. ಈ ದೃಶ್ಯಗಳನ್ನು ಬಳಿಸಿಕೊಂಡು ಸಂಚಿಕೆಗಳ ಬಗ್ಗ ಪ್ರಚಾರ ಮಾಡಲಾಯಿತು. ಅದು ಮನೆ ಮಂದಿ ಎಲ್ಲರು ಒಟ್ಟಾಗಿ ಕುಳಿತು ಟಿ.ವಿ ಕಾರ್ಯಕ್ರಮ ನೋಡುತ್ತಿದ್ದ ಸಮಯ. ಹೀಗಾಗಿ ಚುಂಬನದ ದೃಶ್ಯಕ್ಕೆ ಹಲವರು ಆಕ್ಷೇಪ ವ್ಯಕ್ತಪಡಿಸಿದ್ದರು.
ಇದನ್ನೂ ಓದಿ: ಅದಲು ಬದಲಾದ ವೀರ್ಯ! 1.50 ಕೋಟಿ ರೂ. ದಂಡ
ದಿಲೀಪ್ ಧವನ್ ಅವರೊಂದಿಗೆ ಧಾರಾವಾಹಿ ಮಾಡುತ್ತಿದ್ದ ಸಂದರ್ಭದಲ್ಲಿ ಮೊದಲ ಬಾರಿಗೆ ದೂರದರ್ಶನಕ್ಕಾಗಿ ಚುಂಬನ ದೃಶ್ಯದಲ್ಲಿ ಕಾಣಿಸಿಕೊಂಡೆ. ಆ ಸಮಯದಲ್ಲಿ ನಾನು ಮತ್ತು ಧವನ್ ಕೇವಲ ಪರಿಚಿತರಷ್ಟೇ, ಸ್ನೇಹಿತರಾಗಿರಲಿಲ್ಲ. ಮುಖ್ಯವಾಗಿ ಆ ದೃಶ್ಯಕ್ಕಾಗಿ ದೈಹಿಕವಾಗಿ ಮತ್ತು ಮಾನಸಿಕವಾಗಿ ಸಿದ್ಧವಾಗಿರಲಿಲ್ಲ. ಹೀಗಾಗಿ ಚಿತ್ರೀಕರಣ ಬಳಿಕ ಅಂದು ರಾತ್ರಿಯಿಡೀ ನಿದ್ದೆ ಬಂದಿರಲಿಲ್ಲ.
ಚಿತ್ರೀಕರಣದ ಸಂದರ್ಭದಲ್ಲಿ ಸಾಕಷ್ಟು ಉದ್ವಿಗ್ನಳಾಗಿದ್ದೆ. ಚುಂಬನದ ದೃಶ್ಯದ ಶೂಟಿಂಗ್ ಮುಗಿಯುತ್ತಿದ್ದಂತೆ, ತಡ ಮಾಡದೆ ಡೆಟಾಲ್ನಿಂದ ಬಾಯಿ ತೊಳೆದು ಬಂದೆ. ಆ ಸಂದರ್ಭದಲ್ಲಿ ನನಗೆ ಗೊತ್ತಿಲ್ಲದ ವ್ಯಕ್ತಿಯನ್ನು ಚುಂಬಿಸುವುದು ತುಂಬಾ ಕಷ್ಟಕರವಾಗಿತ್ತು. ಅಂತಿಮವಾಗಿ ಕಿಸ್ಸಿಂಗ್ ದೃಶ್ಯಗಳನ್ನು ಬಳಸಿಕೊಂಡು ಚಾನೆಲ್ ಪ್ರಚಾರ ಮಾಡಿತು. ಆದರೆ ಯಾವುದೇ ಪ್ರಯೋಜನವಾಗಿಲ್ಲ ಎಂದು ನೀನಾ ಗುಪ್ತ ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದಾರೆ. (ಏಜೆನ್ಸೀಸ್)