

Rental wife : ಸಂಬಂಧಗಳು ಹೆಚ್ಚು ವೈವಿಧ್ಯಮಯವಾಗುತ್ತಿರುವ ಕಾಲಘಟ್ಟದಲ್ಲಿ ನಾವಿಂದು ವಾಸ ಮಾಡುತ್ತಿದ್ದೇವೆ. ಘೋಸ್ಟಿಂಗ್, ಸಿಚುವೇಶನ್ಶಿಪ್, ಬ್ರೆಡ್ಕ್ರಂಬಿಂಗ್, ಜೋಂಬಿಯಿಂಗ್, ಸ್ಲೆಡ್ಜಿಂಗ್ ಮತ್ತು ಫ್ರೆಂಡ್ಶಿಪ್ ಮ್ಯಾರೇಜ್ನಂತಹ ಅನೇಕ ರೀತಿಯ ವಿಚಿತ್ರ ಸಂಬಂಧಗಳು ಇಂದು ಚಾಲ್ತಿಯಲ್ಲಿದೆ. ಒಂದೊಂದು ಸಂಬಂಧಗಳು ಕೂಡ ತುಂಬಾ ವಿಚಿತ್ರವಾಗಿವೆ. ಅನೇಕ ದೇಶದ ಯುವಕರು ಇಂತಹ ಸಂಬಂಧಗಳ ಹಿಂದೆ ಬಿದ್ದಿದ್ದಾರೆ. ಹೀಗಾಗಿಯೇ ಇಂದು ವಿಚ್ಛೇದನಗಳು ಹೆಚ್ಚಾಗುತ್ತಿರುವುದು ಮತ್ತು ಮದುವೆಯನ್ನು ತ್ಯಜಿಸುವವರ ಸಂಖ್ಯೆ ಹೆಚ್ಚಾಗುತ್ತಿರುವುದನ್ನು ನಾವು ನೋಡುತ್ತಿದ್ದೇವೆ. ಇದೇ ಸಂದರ್ಭದಲ್ಲಿ ಮತ್ತೊಂದು ವಿಚಿತ್ರ ವಿದ್ಯಮಾನವು ವಿಶ್ವಪ್ರಸಿದ್ಧ ದೇಶದಲ್ಲಿ ವೇಗವಾಗಿ ಜನಪ್ರಿಯತೆಯನ್ನು ಗಳಿಸುತ್ತಿದೆ. ಪ್ರವಾಸೋದ್ಯಮಕ್ಕೆ ಹೆಸರುವಾಸಿಯಾದ ಥಾಯ್ಲೆಂಡ್‌ನಲ್ಲಿ ಹೆಂಡತಿಯನ್ನು ಬಾಡಿಗೆಗೆ ಪಡೆಯುವ ಸೌಲಭ್ಯವು ಜನಪ್ರಿಯತೆಯನ್ನು ಗಳಿಸುತ್ತಿದೆ.
ಈ ವಿಚಿತ್ರ ವಿದ್ಯಮಾನವು ಥೈಲ್ಯಾಂಡ್‌ನ ಪ್ರಸಿದ್ಧ ನಗರ ಹಾಗೂ ಪ್ರವಾಸಿಗರ ಸ್ವರ್ಗವಾದ ಪಟ್ಟಾಯದ ಸಾಂಸ್ಕೃತಿಕ ಆಚರಣೆಗಳಿಂದಲೇ ಹುಟ್ಟಿಕೊಂಡಿದೆ ಎಂದು ನಂಬಲಾಗಿದೆ. ಈ ವಿಚಿತ್ರ ಸಂಪ್ರದಾಯವನ್ನು 'ಹೆಂಡತಿ ಬಾಡಿಗೆ' ಅಥವಾ 'ಕಪ್ಪು ಮುತ್ತು' ಎಂದು ಕರೆಯಲಾಗುತ್ತದೆ. ಈ ಸಂಪ್ರದಾಯದ ಪ್ರಕಾರ ನಿರ್ದಿಷ್ಟ ಅವಧಿಯವರೆಗೆ ಮಹಿಳೆಯರನ್ನು ಖರೀದಿ ಮಾಡಬಹುದು. ಬಾಡಿಗೆಗೆ ಬರುವ ಮಹಿಳೆಯರು ಹೆಂಡತಿ ನಿರ್ವಹಿಸುವ ಎಲ್ಲ ಕರ್ತವ್ಯಗಳನ್ನು ನಿರ್ವಹಿಸುತ್ತಾರೆ. ಒಂದು ಕಾಲದಲ್ಲಿ ಸಂಸ್ಕೃತಿಯ ಭಾಗವಾಗಿದ್ದ ಈ ಪದ್ಧತಿ ಈಗ ಥಾಯ್ಲೆಂಡ್‌ನಲ್ಲಿ ವ್ಯಾಪಾರವಾಗಿ ಬದಲಾಗುತ್ತಿದೆ.
ಲಾ ವೆರೈಟ್ ಇಮ್ಯಾನುಯೆಲ್ ಎಂಬುವರು ಪ್ರಕಟಿಸಿರುವ 'ಥಾಯ್ಲೆಂಡ್ಸ್ ಟಬೂ, ದಿ ರೈಸ್ ಆಫ್ ವೈಫ್ ರೆಂಟಲ್ ಇನ್ ಮಾಡರ್ನ್ ಸೊಸೈಟಿ' ಎಂಬ ಪುಸ್ತಕವು ಥಾಯ್ಲೆಂಡ್‌ನ ಈ ಹೊಸ ವ್ಯವಹಾರವನ್ನು ವಿಶ್ವದ ಗಮನಕ್ಕೆ ತಂದಿದೆ. ಈ ಹೊಸ ವ್ಯವಹಾರವು ಥೈಲ್ಯಾಂಡ್‌ನಲ್ಲಿ ಹೆಚ್ಚಿನ ಸಂಖ್ಯೆಯ ಮಹಿಳೆಯರಿಗೆ ಆದಾಯದ ಮೂಲವನ್ನು ಒದಗಿಸುತ್ತದೆ ಎಂದು ಪುಸ್ತಕವು ಹೇಳುತ್ತದೆ.
ಪಟ್ಟಾಯಕ್ಕೆ ಭೇಟಿ ನೀಡುವ ಹೆಚ್ಚಿನ ಪ್ರವಾಸಿಗರು ಮಹಿಳೆಯರನ್ನು ಹೆಂಡತಿಯಾಗಿ ಬಾಡಿಗೆ ಪಡೆಯುತ್ತಾರೆ. ಆದರೆ, ಥಾಯ್ಲೆಂಡ್‌ನಲ್ಲಿ ಇಂತಹ ಚಟುವಟಿಕೆಗಳು ಕಾನೂನುಬದ್ಧವಾಗಿಲ್ಲ. ಆದಾಗ್ಯೂ ಇಂತಹ ಅಭ್ಯಾಸಗಳು ಇಂದಿಗೂ ನಡೆದುಕೊಂಡು ಬರುತ್ತಲೇ ಇದೆ. ಕೆಲವೇ ಕೆಲವು ದಿನಗಳಿಂದ ಒಂದು ತಿಂಗಳವರೆಗೆ ಅಲ್ಪಾವಧಿಯ ಒಪ್ಪಂದಗಳನ್ನು ಮಾಡಿಕೊಂಡು ಪತ್ನಿಯರನ್ನು ಬಾಡಿಗೆ ಪಡೆಯುತ್ತಾರೆ.
ಹೆಂಡತಿಯರನ್ನು ಬಾಡಿಗೆಗೆ ಪಡೆಯುವ ಸೌಲಭ್ಯವು ಬಾರ್‌ಗಳು ಮತ್ತು ನೈಟ್‌ಕ್ಲಬ್‌ಗಳಲ್ಲಿ ಲಭ್ಯವಿದೆ. ವಯಸ್ಸು, ಸೌಂದರ್ಯ, ಶಿಕ್ಷಣ ಮತ್ತು ಒಪ್ಪಂದದ ಅವಧಿಯನ್ನು ಆಧರಿಸಿ ಬಾಡಿಗೆ ದರವನ್ನು ನಿರ್ಧರಿಸಲಾಗುತ್ತದೆ. ಬಾಡಿಗೆ ದರವು 1,600 ಡಾಲರ್ನಿಂದ ಹಿಡಿದು 1,16,000 ಡಾಲರ್ವರೆಗೂ ಇರುತ್ತದೆ. (ಏಜೆನ್ಸೀಸ್)