ಖಾಸಗಿ ಜೆಟ್​ನಲ್ಲಿ ವಿಜಯ್​-ತ್ರಿಷಾ ಒಟ್ಟಿಗೆ ಪ್ರಯಾಣ: ಕೇಳಿಬಂತು ಜಸ್ಟೀಸ್​ ಫಾರ್ ಸಂಗೀತಾ ಕೂಗು! Vijay and Trisha

Vijay and Trisha
Published on

Vijay and Trisha : ತಮಿಳು ಚಿತ್ರರಂಗದ ಸೂಪರ್‌ಸ್ಟಾರ್ ಮತ್ತು ಟಿವಿಕೆ ಪಕ್ಷದ ಅಧ್ಯಕ್ಷ ವಿಜಯ್ ಮತ್ತು ನಟಿ ತ್ರಿಷಾ ಅವರ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಕಾಣಿಸಿಕೊಂಡ ಬೆನ್ನಲ್ಲೇ ಭಾರಿ ಚರ್ಚೆ ನಡೆಯುತ್ತಿದೆ. ನಟಿ ಕೀರ್ತಿ ಸುರೇಶ್ ಡಿ.12ರಂದು ಗೋವಾದಲ್ಲಿ ಮದುವೆಯಾಗಿದ್ದು ಎಲ್ಲರಿಗೂ ಗೊತ್ತೇ ಇದೆ. ಈ ಮದುವೆಗೆ ವಿಜಯ್​ ಮತ್ತು ತ್ರಿಷಾ ಒಟ್ಟಿಗೆ ಹೋಗಿದ್ದಾರೆ. ಇದಕ್ಕೆ ಸಂಬಂಧಿಸಿದ ಫೋಟೋಗಳು ಜಾಲತಾಣದಲ್ಲಿ ಹರಿದಾಡುತ್ತಿದ್ದು, ವಿಜಯ್ ಅವರ ಪತ್ನಿ ಸಂಗೀತಾರನ್ನು ಉಲ್ಲೇಖಿಸಿ 'ಜಸ್ಟೀಸ್ ಫಾರ್ ಸಂಗೀತಾ' ಎಂಬ ಹ್ಯಾಶ್‌ಟ್ಯಾಗ್‌ನೊಂದಿಗೆ ಜಾಲತಾಣದಲ್ಲಿ ವಿಜಯ್​ ವಿರುದ್ಧ ನಿಂದನಾತ್ಮಕ ಕಾಮೆಂಟ್​ಗಳನ್ನು ಹರಿಬಿಡಲಾಗುತ್ತಿದೆ. ಈ ಸೈಬರ್​ ದಾಳಿಯ ಹಿಂದೆ ವಿಜಯ್ ಅವರ ರಾಜಕೀಯ ವಿರೋಧಿಗಳ ಕೈವಾಡವಿರುವ ಶಂಕೆ ವ್ಯಕ್ತವಾಗಿದೆ.

ವಿಜಯ್​ ಅವರ ಬಗ್ಗೆ ವಿಶೇಷವಾಗಿ ಹೇಳಬೇಕಾಗಿಲ್ಲ. ಕಾಲಿವುಡ್​ನ ಸೂಪರ್​ಸ್ಟಾರ್​. ಸಿನಿಮಾದ ಉತ್ತುಂಗದಲ್ಲಿರುವಾಗಲೇ ರಾಜಕೀಯಕ್ಕೆ ಧುಮುಕಿರುವ ವಿಜಯ್​ ತಮ್ಮದೇಯಾದ ರಾಜಕೀಯ ಪಕ್ಷ ಕಟ್ಟಿಕೊಂಡಿದ್ದಾರೆ. ತಮ್ಮ ಪಕ್ಷಕ್ಕೆ ತಮಿಳಿಗ ವೆಟ್ರಿ ಕಳಗಂ ಎಂದು ಹೆಸರಿಟ್ಟಿದ್ದಾರೆ. ರಾಜಕೀಯದಲ್ಲಿ ಬಿಜಿಯಾದ ಬಳಿಕ ಸಿನಿಮಾದಿಂದ ಅಂತರ ಕಾಯ್ದುಕೊಳ್ಳಲು ವಿಜಯ್​ ಮುಂದಾಗಿದ್ದಾರೆ. ಸದ್ಯ ಅವರ ನಟನೆಯ ಗೋಟ್​ ಸಿನಿಮಾ ಕೊನೆಯದಾಗಿ ಬಿಡುಗಡೆಯಾಯಿತು. ಇನ್ನು ಒಂದು ಸಿನಿಮಾ ಮಾತ್ರ ಮಾಡಲಿದ್ದಾರೆ ಎಂಬ ಸುದ್ದಿ ಇದೆ. 2026ರಲ್ಲಿ ಎದುರಾಗುವ ತಮಿಳುನಾಡು ವಿಧಾನಸಭಾ ಚುನಾವಣೆಯಲ್ಲಿ ವಿಜಯ್​ ಅವರ ಪಕ್ಷ ಎಲ್ಲ ವಿಧಾನಸಭಾ ಕ್ಷೇತ್ರಗಳಲ್ಲಿ ಸ್ಪರ್ಧಿಸಲಿದ್ದು, ಸಿನಿಮಾ ಬಿಟ್ಟು ರಾಜಕೀಯ ಕಡೆ ಮುಖ ಮಾಡಲಿದ್ದಾರೆ.

ಇನ್ನು ತ್ರಿಷಾ ಅವರ ವಿಚಾರಕ್ಕೆ ಬರುವುದಾದರೆ, ಬಹುಭಾಷ ನಟಿಯಾಗಿರುವ ತ್ರಿಷಾ ಅವರನ್ನು ಕೂಡ ವಿಶೇಷವಾಗಿ ಪರಿಚಯಿಸುವ ಅಗತ್ಯವಿಲ್ಲ. ತಮಿಳು, ತೆಲುಗು ಸಿನಿಮಾ ಇಂಡಸ್ಟ್ರಿಯಲ್ಲಿ ಸ್ಟಾರ್​ ನಟಿಯಾಗಿರುವ ತ್ರಿಷಾ ಇಳಯದಳಪತಿ ವಿಜಯ್​, ಸೂರ್ಯ, ವಿಕ್ರಮ್, ಪ್ರಭಾಸ್​, ಚಿರಂಜೀವಿ, ಅಜಿತ್​, ಸಿಂಬು ಸೇರಿದಂತೆ ಸ್ಟಾರ್​ ನಟರ ಜೊತೆ ಅಭಿನಯಿಸಿದ್ದಾರೆ. ಕನ್ನಡದಲ್ಲೂ ದಿವಂಗತ ನಟ ಪುನೀತ್​ ರಾಜ್​ಕುಮಾರ್​ ಅಭಿನಯದ ಪವರ್​ಸ್ಟಾರ್​ ಸಿನಿಮಾದಲ್ಲಿ ನಾಯಕಿಯಾಗುವ ಮೂಲಕ ಕನ್ನಡಿಗರಿಗೂ ಪರಿಚಿತರಾಗಿದ್ದಾರೆ.

ಇನ್ನು ವಿಜಯ್​ ಮತ್ತೆ ತ್ರಿಷಾ ಸಾಕಷ್ಟು ಸಿನಿಮಾಗಳಲ್ಲಿ ಒಟ್ಟಿಗೆ ನಟಿಸಿದ್ದಾರೆ. ಇಬ್ಬರು ಆಗಾಗ ಒಟ್ಟಿಗೆ ಕಾಣಿಸಿಕೊಳ್ಳುವುದಿರಿಂದ ಇಬ್ಬರ ನಡುವೆ ಏನೋ ನಡೆಯುತ್ತಿದೆ ಎಂದು ಗುಸು ಗುಸು ಕೂಡ ಸಿನಿಮಾ ರಂಗದಲ್ಲಿ ಹರಿದಾಡುತ್ತಿದೆ. ಇದೀಗ ಕೀರ್ತಿ ಸುರೇಶ್​ ಮದುವೆಗೆ ಇಬ್ಬರು ಒಟ್ಟಿಗೆ ಪ್ರಯಾಣಿಸಿದ್ದಾರೆ ಎನ್ನಲಾದ ಸುದ್ದಿ ಭಾರಿ ಚರ್ಚೆಯನ್ನು ಹುಟ್ಟುಹಾಕಿದೆ.

ಗೋವಾದಲ್ಲಿ ನಡೆದ ಕೀರ್ತಿ ಸುರೇಶ್ ಅವರ ಮದುವೆಗೆ ಪಾಲ್ಗೊಳ್ಳಲು ಇಬ್ಬರು ಖಾಸಗಿ ಜೆಟ್‌ನಲ್ಲಿ ಪ್ರಯಾಣಿಸಿದ್ದಾರೆ. ಅವರ ಪ್ರಯಾಣದ ವಿವರಗಳನ್ನು ಸಹ ಬಿಡುಗಡೆ ಮಾಡಲಾಗಿದೆ. ಅಲ್ಲದೆ, ಜೊತೆಯಾಗಿ ಪ್ರಯಾಣ ಮಾಡುತ್ತಿರುವ ದೃಶ್ಯಾವಳಿ ಕೂಡ ಬಿಡುಗಡೆಯಾಗಿದೆ. ಹೀಗಾಗಿ ವಿಜಯ್ ಅವರನ್ನು ಗುರಿಯಾಗಿಸಿಕೊಂಡು ಸೈಬರ್ ದಾಳಿ ನಡೆಯುತ್ತಿದೆ. ವಿಜಯ್ ಅವರು ತನ್ನ ಹೆಂಡತಿಯಿಂದ ದೂರವಾಗಿದ್ದಾರೆ. ಹೀಗಾಗಿ ತ್ರಿಷಾ ಅವರು ವಿಜಯ್​ಗೆ ಹತ್ತಿರವಾಗಿದ್ದಾರೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆ ನಡೆಯುತ್ತಿದೆ.

ವಿಜಯ್​ ಮತ್ತು ತ್ರಿಷಾ ವಿಮಾನ ನಿಲ್ದಾಣದಿಂದ ಒಟ್ಟಿಗೆ ವಿಮಾನದಿಂದ ಇಳಿದು ಕಾರಿನಲ್ಲಿ ಹೊರಟಿರುವ ಫೋಟೋಗಳು ಜಾಲತಾಣದಲ್ಲಿ ವೈರಲ್ ಆಗುತ್ತಿವೆ. ವಿಜಯ್ ನೀಲಿ ಬಣ್ಣದ ಶರ್ಟ್ ಧರಿಸಿದ್ದರೆ, ತ್ರಿಶಾ ಬಿಳಿ ಟೀ ಶರ್ಟ್ ಧರಿಸಿದ್ದರು. ಚೆನ್ನೈ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಗೋವಾದ ಮನೋಹರ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿಳಿದ ಆರು ಮಂದಿ ಪ್ರಯಾಣಿಕರ ವಿವರ ಬಹಿರಂಗವಾಗಿದೆ. ಅವರಲ್ಲಿ ಮೊದಲಿಬ್ಬರು ವಿಜಯ್ ಮತ್ತು ತ್ರಿಷಾ. ಇವರಲ್ಲದೆ ಈ ಪ್ರಯಾಣಿಕರ ಪಟ್ಟಿಯಲ್ಲಿ ಇನ್ನೂ ನಾಲ್ವರು ಇದ್ದಾರೆ.

Vijay and Trisha 1

ಇನ್ನು ಸೈಬರ್ ದಾಳಿ ನಡೆಸುವವರ ವಿರುದ್ಧವೂ ತೀವ್ರ ಟೀಕೆ ವ್ಯಕ್ತವಾಗಿದೆ. ವಿಜಯ್​ ಮತ್ತು ತ್ರಿಷಾ ಆತ್ಮೀಯ ಗೆಳೆಯರಾಗಿದ್ದು, ಈ ರೀತಿ ಕಾಮೆಂಟ್​ಗಳನ್ನು ಮಾಡುವುದರ ಮೂಲಕ ಸ್ನೇಹವನ್ನು ಕೆಡಿಸುವ ಪ್ರಯತ್ನ ಮಾಡಬಾರದು ಎಂದು ವಿಜಯ್​ ಅಭಿಮಾನಿಗಳು ವಿರೋಧಿಗಳನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net