More

    ಉದ್ಯೋಗ ಹುಡುಕುವಾಗ ಹುಷಾರು..

    ಉದ್ಯೋಗ ಹುಡುಕುವಾಗ ಹುಷಾರು..ಪವನ್​ಕುಮಾರ್ ಇಂಜಿನಿಯರಿಂಗ್ ಪದವಿ ಪಡೆದು ಎರಡು ವರ್ಷಗಳಾದರೂ ಸೂಕ್ತ ನೌಕರಿ ದೊರೆತಿರಲಿಲ್ಲ. ಹಲವು ಹತ್ತು ಕಡೆ ಅರ್ಜಿ ಹಾಕಿ ಬೇಸತ್ತಿದ್ದ. ಕೆಲವು ತಿಂಗಳು ಡೆಲಿವರಿ ಬಾಯ್ ಆಗಿ ಕೆಲಸ ಮಾಡಿದ, ಇನ್ನು ಕೆಲವು ತಿಂಗಳು ಕ್ಯಾಬ್ ಚಾಲಕನಾಗಿದ್ದ. ಒಂದು ದಿನ ಆತನಿಗೆ ಅಪರಿಚಿತ ಯುವತಿಯೊಬ್ಬಳು ಕರೆ ಮಾಡಿ ತಾವು ತಿಳಿಸಿದ ಯೂಟ್ಯೂಬ್ ವಿಡಿಯೋಗಳಿಗೆ ಸಬ್ಸ್ರೈಬ್ ಮಾಡಿಸಿ ಲೈಕ್ ಕೊಡಿಸಿದರೆ ತಿಂಗಳಿಗೆ ಒಂದು ಲಕ್ಷ ರೂಪಾಯಿವರೆಗೆ ಆದಾಯ ಗಳಿಸಬಹುದಾಗಿ ತಿಳಿಸಿದಳು. ಖುಷಿಯಿಂದಲೇ ಪವನ್ ಒಪ್ಪಿದಾಗ ಅವನನ್ನು ಟೆಲಿಗ್ರಾಂ ಗ್ರೂಪೊಂದಕ್ಕೆ ಸೇರಲು ಆಕೆ ತಿಳಿಸಿ, ನಿನಗೆ ತರಬೇತಿ ನೀಡಲಾಗುತ್ತದೆ ಎಂದಳು. ಆ ಗುಂಪಿಗೆ ಸೇರಿದ ಕೆಲವು ದಿನಗಳ ನಂತರ ಆ ಕಂಪನಿಯು ಪಾರ್ಟ್ ಟೈಂ ನೌಕರಿ ನೀಡುವ ಮುನ್ನ ಎರಡು ಕಂತುಗಳಲ್ಲಿ ತಲಾ 29,910 ರೂ.ಗಳನ್ನು ಕಂಪನಿಗೆ ತುಂಬಬೇಕು ಎಂಬ ಷರತ್ತನ್ನು ಹಾಕಿತು. ಒಪ್ಪಿದ ಪವನ್ ಹಣ ತುಂಬಿದ. ನಂತರ ಅವನಿಗೆ ಯಾವ ಯೂಟ್ಯೂಬ್ ಚಾನಲನ್ನು ನೋಡಬೇಕೆಂಬ ಸೂಚನೆ ಬರತೊಡಗಿತು. ಒಂದು ತಿಂಗಳಾದ ನಂತರ ಅವನಿಗೆ ಸಂಬಳವೆಂದು 20,000 ರೂಗಳನ್ನು ನೀಡಲಾಯಿತು.

    ಮುಂದೊಂದು ದಿನ, ಸಂಸ್ಥೆಯಲ್ಲಿ ಹಣ ಹೂಡಿದರೆ ಒಂದು ತಿಂಗಳಲ್ಲಿ ದ್ವಿಗುಣ ಮಾಡಲಾಗುತ್ತದೆ ಎಂದು ಪವನ್​ಗೆ ತಿಳಿಸಿತು. ಪವನ್ ತನಗೆ ಬಂದಿದ್ದ ಸಂಬಳವನ್ನೇ ಆ ಸ್ಕೀಂನಲ್ಲಿ ತೊಡಗಿಸಿದ. ಮುಂದಿನ ತಿಂಗಳು ಅದನ್ನು ದ್ವಿಗುಣಗೊಳಿಸಿ ಅವನ ಬ್ಯಾಂಕ್ ಅಕೌಂಟಿಗೆ ಹಾಕಲಾಯಿತು. ಖುಷಿಯಾದ ಪವನ್ ತನ್ನ ಸ್ನೇಹಿತರು ಮತ್ತು ಕುಟುಂಬದವರಿಗೆ ದುಂಬಾಲು ಬಿದ್ದು ಒಟ್ಟು ಹತ್ತು ಲಕ್ಷ ರೂ.ಗಳನ್ನು ಕಂಪನಿಯ ಅಕೌಂಟಿಗೆ ತುಂಬಿದ. ಅದಾದ ಒಂದೇ ವಾರದ ನಂತರ ಆ ಕಂಪನಿ, ನಿಗದಿತ ಕೆಲಸಗಳನ್ನು ಮಾಡಿಲ್ಲವೆಂದು ಹೇಳಿ ಅವನನ್ನು ಕೆಲಸದಿಂದ ವಜಾ ಮಾಡಿರುವುದಾಗಿ ತಿಳಿಸಿತು. ತಾನು ಹೂಡಿಸಿದ ಹಣವನ್ನು ಮರಳಿಸಲು ಕಂಪನಿ ಕೊಟ್ಟಿದ್ದ ಫೋನ್ ನಂಬರಿಗೆ ಪವನ್ ಫೋನ್ ಮಾಡಿದಾಗ ಹಾರಿಕೆಯ ಉತ್ತರ ಬಂತು. ಆನಂತರ ಆ ಕಂಪನಿಯ ಫೋನುಗಳು ನಿಷ್ಕಿ›ಯವಾದವು. ಪವನ್ ಸೈಬರ್ ಠಾಣೆಗೆ ದೂರನ್ನಿತ್ತ.

    ಅಮೆಜಾನ್ ಕಂಪನಿಯಲ್ಲಿ ಸಾಫ್ಟ್್ಟೇರ್ ಡೆವಲಪರ್ ಆಗಿದ್ದ ಸವಿತಾಗೆ ಸಂಸ್ಥೆ ಇಮೇಲ್ ಕಳಿಸಿ ‘ಸೋಮವಾರದಿಂದ ನೀವು ಕೆಲಸಕ್ಕೆ ಬರುವ ಅವಶ್ಯಕತೆಯಿಲ್ಲ, ನೋಟೀಸ್ ಅವಧಿಯ ಹಣವನ್ನು ನಿಮ್ಮ ಖಾತೆಗೆ ಜಮೆ ಮಾಡಲಾಗಿದೆ’ ಎಂದು ತಿಳಿಸಿತು. ಸವಿತಾ ಹೊಸ ಕೆಲಸ ಹುಡುಕತೊಡಗಿದಳು. ಅದೇ ಸಮಯದಲ್ಲಿ ಹಲವಾರು ಐಟಿ ಕಂಪನಿಗಳು ಉದ್ಯೋಗಿಗಳನ್ನು ವಜಾ ಮಾಡಿದ್ದರಿಂದ ನೌಕರಿಯ ಮಾರ್ಕೆಟ್ ಟೈಟ್ ಆಗಿತ್ತು. ಧೃತಿಗೆಡದ ಸವಿತಾ ಉದ್ಯೋಗ ಕೊಡಿಸುವ ವೆಬ್​ಸೈಟುಗಳಲ್ಲಿ ತನ್ನ ಸ್ವವಿವರಗಳನ್ನು ಅಪ್​ಲೋಡ್ ಮಾಡಿದಳಲ್ಲದೆ, ತಾನು ಕೆಲಸ ಹುಡುಕುತ್ತಿರುವುದಾಗಿ ಫೇಸ್​ಬುಕ್​ನಲ್ಲಿಯೂ ಸ್ಟೇಟಸ್ ಹಾಕಿದಳು. ಇದನ್ನು ಹಾಕಿದ ಕೆಲವೇ ಗಂಟೆಗಳಲ್ಲಿ ಸಾಫ್ಟ್​ವೇರ್ ಕಂಪನಿಯೊಂದು ತನ್ನನ್ನು ಸಂರ್ಪಸುವಂತೆ ಅವಳಿಗೆ ಮೊಬೈಲ್ ನಂಬರೊಂದನ್ನು ನೀಡಿತು. ಸವಿತಾ ಆ ನಂಬರನ್ನು ಸಂರ್ಪಸಿ ಕಂಪನಿಯ ಮಾಹಿತಿಯನ್ನು ಪಡೆದು ಸ್ವವಿವರವನ್ನು ಕಳುಹಿಸಿದಳು.

    ಎರಡೇ ದಿನಗಳಲ್ಲಿ ಆ ಸಂಸ್ಥೆಯಿಂದ ‘ನಿಮ್ಮ ಸಿ.ವಿ. ಸೊಗಸಾಗಿದೆ. ನಿಮ್ಮನ್ನು ನಮ್ಮ ಸಂಸ್ಥೆಯ ಹಿರಿಯ ಅಧಿಕಾರಿಗಳು ಜೂಮ್ ಮೂಲಕ ಸಂದರ್ಶನ ಮಾಡುತ್ತಾರೆ ’ ಎಂದು ಹೇಳಿ ಸಂದರ್ಶನದ ದಿನಾಂಕ ಮತ್ತು ಸಮಯವನ್ನು ತಿಳಿಸಿದರು. ನಿಗದಿತ ದಿನಾಂಕದಂದು ಸಂದರ್ಶನ ನಡೆಯಿತು. ಆದರೆ, ಸಂದರ್ಶನಕಾರರು ಆಕೆಯ ನೌಕರಿಯ ಬಗ್ಗೆ ಪ್ರಶ್ನೆಗಳನ್ನು ಕೇಳದೇ ಕೇವಲ ವೈಯಕ್ತಿಕ ಪ್ರಶ್ನೆಗಳನ್ನು ಹಾಕಿದ್ದು ಸವಿತಾಗೆ ಆಶ್ಚರ್ಯ ತಂದಿತು. ಮಾರನೆಯ ದಿನವೇ ಆ ಕಂಪನಿಯ ಅಧಿಕಾರಿಯೆಂದು ಹೇಳಿಕೊಂಡವನೊಬ್ಬ ಆಕೆ ನೌಕರಿಗೆ ಆಯ್ಕೆಗೊಂಡಿರುವುದಾಗಿ ತಿಳಿಸಿದ. ನಂತರ ಆಕೆಗೆ ನೌಕರಿಯ ಆದೇಶ ಇಮೇಲ್ ಮೂಲಕ ಬಂದಿತು. ತಿಂಗಳ ಸಂಬಳ ಒಂದು ಲಕ್ಷ ರೂ.ಗಳೆಂದು ತಿಳಿಸಿದ್ದರು. ಆಕೆ ಕೆಲಸಕ್ಕೆ ಹೋಗಬೇಕಾಗಿದ್ದ ಕಚೇರಿಯ ವಿವರಗಳನ್ನು ನಂತರ ತಿಳಿಸುವುದಾಗಿ ಬರೆದಿತ್ತು. ಸವಿತಾ ಸಂತಸಗೊಂಡಳು. ಮಾರನೆಯ ದಿನ ಅವಳಿಗೆ ಅದೇ ಕಂಪನಿಯಿಂದ ಇನ್ನೊಂದು ಇಮೇಲ್ ಬಂದು ಅವಳನ್ನು ಅಮೆರಿಕ ಮತ್ತು ಯೂರೋಪ್ ದೇಶಗಳಿಗೆ ಕಳಿಸಲಾಗುವ ಕಾರಣ ವೀಸಾ ಪ್ರೊಸೆಸಿಂಗ್ ಫೀ ಎಂದು ಎರಡು ಲಕ್ಷ ರೂಗಳನ್ನು ಕೊಡಬೇಕಾಗಿದೆ. ಆ ಕಾರಣ ಆ ಹಣವನ್ನು ನಿಗದಿತ ಬ್ಯಾಂಕ್ ಅಕೌಂಟಿಗೆ ತುಂಬಬೇಕೆಂದು ಸೂಚಿಸಲಾಯಿತು. ಆಕೆ ಹಣ ತುಂಬಿದ ಬಳಿಕ ಇನ್ನೊಂದು ಇಮೇಲ್ ಬಂದು, ನೌಕರಿಗೆ ಸೇರುವ ಮುನ್ನ 10 ಲಕ್ಷ ರೂಪಾಯಿಗಳ ಸೆಕ್ಯೂರಿಟಿ ಡಿಪಾಸಿಟ್ ತುಂಬಲು ಸೂಚಿಸಿ ಈ ಹಣವನ್ನು ಆಕೆ ನೌಕರಿ ಬಿಡುವ ಸಮಯದಲ್ಲಿ ಬಡ್ಡಿಸಹಿತ ಮರಳಿಸಲಾಗುವುದೆಂದು ಸೂಚಿಸಲಾಗಿತ್ತು. ಈ ಷರತ್ತಿ್ತಗೂ ಒಪ್ಪಿದ ಸವಿತಾ ಹಣವನ್ನು ಟ್ರಾನ್ಸ್​ಫರ್ ಮಾಡಿದಳು.

    ಇದಾದ ನಂತರ ಆಕೆ ಉದ್ಯೋಗದ ಆದೇಶಕ್ಕೆ ಕಾಯತೊಡಗಿದಳು. ಎರಡು ಮೂರು ತಿಂಗಳಾದರೂ ಆದೇಶ ಬರಲಿಲ್ಲ. ಆಗ ಅವಳಿಗೆ ತಾನು ಮೋಸ ಹೋದದ್ದರ ಅರಿವಾಯಿತು. ಸೈಬರ್ ಪೊಲೀಸ್ ಠಾಣೆಗೆ ಆಕೆ ದೂರನ್ನು ಕೊಟ್ಟಳು.

    ರಮೇಶ್ ಕಿರು ಜಾಹೀರಾತು ಚಿತ್ರಗಳ ನಿರ್ದೇಶಕನಾಗಿದ್ದ. ಅವನಿಗೆ ವರ್ಷಕ್ಕೆ ಅಂದಾಜು 6 ತಿಂಗಳು ಕೆಲಸವಿರುತ್ತಿತ್ತು. ಉಳಿದ 6 ತಿಂಗಳು ಖಾಲಿ ಇರುತ್ತಿದ್ದ. ಒಂದು ದಿನ ಆತನ ಮೊಬೈಲ್ ಫೋನಿಗೆ ಪಾರ್ಟ್ ಟೈಂ ಕೆಲಸ ಖಾಲಿಯಿದೆ, ನಿಮಗೆ ಆಸಕ್ತಿಯಿದ್ದರೆ ಅರ್ಜಿ ಸಲ್ಲಿಸಿ, ಎಂಬ ಸಂದೇಶ ಬಂದಿತು. ಅದರಲ್ಲಿದ್ದ ಟೆಲಿಫೋನ್ ನಂಬರನ್ನು ಆತ ಸಂರ್ಪಸಿದ. ‘ನಿಮ್ಮ ಬಿಡುವಿನ ಸಮಯದಲ್ಲಿ ನಾವು ಹೇಳುವ ಸಿನಿಮಾಗಳನ್ನು ನೋಡಬೇಕು, ಪ್ರತಿ ತಿಂಗಳೂ ಸಿನಿಮಾಗಳನ್ನು ನೋಡಿ ಅದರ ರೇಟಿಂಗ್ ಮಾಡಿ ಕಳುಹಿಸಬೇಕು. ಪ್ರತಿ ರೇಟಿಂಗ್​ಗೆ 500 ರೂಪಾಯಿಗಳಂತೆ ನಿಮಗೆ ಹಣ ಸಂದಾಯ ಮಾಡಲಾಗುವುದು’ ಎಂದು ಹೇಳಿದಳು ಆ ಕಂಪನಿಯ ಅಧಿಕಾರಿಣಿ. ಈ ಪ್ರಸ್ತಾವನೆಗೆ ರಮೇಶ್ ಒಪ್ಪಿದ.

    ಆತ ಮುಂದಿನ ತಿಂಗಳು 30 ಸಿನಿಮಾಗಳನ್ನು ಕಂಪ್ಯೂಟರಿನಲ್ಲಿ ನೋಡಿ ತನ್ನ ಅಭಿಪ್ರಾಯವನ್ನು ಬರೆದ. 15 ದಿನಗಳ ನಂತರ ಅವನ ಬ್ಯಾಂಕ್ ಅಕೌಂಟ್​ಗೆ 15 ಸಾವಿರ ರೂಪಾಯಿ ಜಮಾ ಆಯಿತು. ರಮೇಶ್ ಬಹಳ ಖುಷಿಗೊಂಡ. ಸಿನಿಮಾ ನೋಡಿ ಹಣ ಗಳಿಸುವುದಕ್ಕಿಂತ ಸುಖವಾದ ಕೆಲಸ ಯಾವುದಿದೆ ಎಂದು ಅವನಿಗನಿಸಿತು. ಇದಾದ ಒಂದು ವಾರದ ನಂತರ ಅದೇ ಕಂಪನಿಯವನೊಬ್ಬ ಅವನಿಗೆ ಕರೆ ಮಾಡಿ, ನಮ್ಮ ಕಂಪನಿಯ ನೀತಿಯ ಅನ್ವಯ ನೀವು ಒಂದು ಲಕ್ಷ ರೂಗಳನ್ನು ನಮ್ಮ ಕಂಪನಿಯಲ್ಲಿ ಫಿಕ್ಸೆಡ್ ಡಿಪಾಸಿಟ್ ಎಂದು ಇಡಬೇಕಾಗುತ್ತದೆ. ಒಂದು ವರ್ಷದ ನಂತರ ಶೇ. 12ರಷ್ಟು ಬಡ್ಡಿಸಮೇತ ಹಿಂದಿರುಗಿಸಲಾಗುತ್ತದೆ ಎಂದ. ಇದಕ್ಕೊಪ್ಪಿದ ರಮೇಶ್ ಹಣವನ್ನು ಸಂದಾಯ ಮಾಡಿದ. ಫಿಕ್ಸೆಡ್ ಡಿಪಾಸಿಟ್ ರಸೀತಿಯ ಪಿಡಿಎಫ್ ಅನ್ನು ಅವನಿಗೆ ಕಳುಹಿಸಲಾಯಿತು. ಒಂದು ತಿಂಗಳ ನಂತರ ಅದೇ ವ್ಯಕ್ತಿ ಮತ್ತೊಮ್ಮೆ ಫೋನ್ ಮಾಡಿ, ನಮ್ಮದೊಂದು ಹೊಸ ಸ್ಕೀಂ ಬಂದಿದೆ, ನೀವು 25 ಲಕ್ಷ ರೂ ತೊಡಗಿಸಿದರೆ, ನಿಮಗೆ ಪ್ರತಿ ತಿಂಗಳೂ ಬಡ್ಡಿಯ ರೂಪದಲ್ಲಿ 2 ಲಕ್ಷ ರೂ ಕೊಡಲಾಗುವುದು ಎಂದ. ಇದಕ್ಕೂ ಒಪ್ಪಿದ ರಮೇಶ್ 20 ಲಕ್ಷ ರೂ.ಗಳನ್ನು ತೊಡಗಿಸಿದ. ಮುಂದಿನ ತಿಂಗಳು ಅವನಿಗೆ 2 ಲಕ್ಷ ರೂ. ಬಡ್ಡಿಯ ಹಣವಾಗಿ ಬಂದಾಗ ಖುಷಿಗೊಂಡ ಆತ ಇನ್ನೂ 40 ಲಕ್ಷ ರೂ.ಗಳನ್ನು ಅಲ್ಲಿ ತೊಡಗಿಸಿದ. ಒಂದು ತಿಂಗಳ ನಂತರ ಅವನಿಗೆ ಬಡ್ಡಿ ಬರುವುದು ನಿಂತುಹೋಯಿತು. ರೇಟಿಂಗ್ ಮಾಡಿದ ಸಿನಿಮಾಗಳಿಗಾಗಿ ಸಂದಾಯವಾಗಬೇಕಾದ ಹಣ ಕೂಡಾ ಬರಲಿಲ್ಲ. ಗಾಬರಿಯಾದ ರಮೇಶ್ ಆ ಕಂಪನಿಯನ್ನು ಸಂರ್ಪಸಲು ಪ್ರಯತ್ನಿಸಿದಾಗ ಅದರ ಮೊಬೈಲ್ ನಂಬರ್ ಸ್ವಿಚ್ ಆಫ್ ಆಗಿತ್ತು.

    ಉದ್ಯೋಗ ಕೊಡುವುದಾಗಿ ಹೇಳಿ ಹಣ ದೋಚುತ್ತಿರುವ ಪ್ರಕರಣಗಳು ತೀವ್ರವಾಗಿ ಏರುತ್ತಿದ್ದು ದೊಡ್ಡ ಸವಾಲಾಗಿವೆ. ಸಾಮಾನ್ಯವಾಗಿ ಇಂತಹ ಪ್ರಕರಣಗಳ ಆರೋಪಿಗಳು ಉತ್ತರ ಮತ್ತು ಪಶ್ಚಿಮ ಭಾರತದಲ್ಲಿರುವವರು. ಇವರು ನಕಲಿ ದಾಖಲೆಗಳನ್ನು ನೀಡಿ ಹಲವಾರು ಸಿಮ್ ಕಾರ್ಡಗಳನ್ನು ಖರೀದಿಸಿ ಅದರ ಮೂಲಕ ಉದ್ಯೋಗಾಕಾಂಕ್ಷಿಗಳನ್ನು ಸಂರ್ಪಸುತ್ತಾರೆ. ಕೂಲಿ ಕಾರ್ವಿುಕರು, ಮನೆ ಕೆಲಸದ ಹೆಣ್ಣುಮಕ್ಕಳು ಇಂತಹವರಿಗೆ ಕಮಿಷನ್​ನ ಆಮಿಷವೊಡ್ಡಿ ಅವರಿಂದ ಬ್ಯಾಂಕ್ ಅಕೌಂಟ್​ಗಳನ್ನು ತೆರೆಸುತ್ತಾರೆ. ಇದೇ ಅಕೌಂಟಿಗೆ ಹಣ ಹಾಕಲು ಅವರು ಉದ್ಯೋಗಾಕಾಂಕ್ಷಿಗಳಿಗೆ ತಿಳಿಸುತ್ತಾರೆ. ಒಮ್ಮೆ ಹಣ ಬಂದ ಕೂಡಲೇ ಆ ಹಣವನ್ನು ವಿತ್​ಡ್ರಾ ಮಾಡಿಕೊಂಡು ಅಕೌಂಟ್ ಧಾರಕರಿಗೆ ಕಮಿಷನ್ ಕೊಡುತ್ತಾರೆ. ಅಕೌಂಟ್ ಧಾರಕರು ಪತ್ತೆಯಾದರೂ, ಮೋಸಗಾರ ನಾಪತ್ತೆಯಾಗಿರುತ್ತಾನೆ. ಹೀಗಾಗಿ ಕಳೆದ ಹಣವನ್ನು ಮರಳಿ ಪಡೆಯುವುದು ದುಸ್ತರ. ಹಲವಾರು ಪ್ರತಿಷ್ಠಿತ ಎಚ್.ಆರ್ ಜಾಲತಾಣಗಳಾದ ನೌಕರಿ.ಕಾಮ್ ಮುಂತಾದವುಗಳ ಯುಆರ್​ಎಲ್ ನಕಲು ಮಾಡಿ ಅರ್ಜಿ ಹಾಕಿದ ಅಭ್ಯರ್ಥಿಗಳನ್ನು ಸಂರ್ಪಸಿ ಮೋಸಗೊಳಿಸುತ್ತಿದ್ದಾರೆ.

    ಇಂತಹ ಜಾಲತಾಣಗಳನ್ನು ಸಂರ್ಪಸುವ ಮೊದಲು ಅವುಗಳ ವಿಳಾಸವನ್ನು ಪರೀಕ್ಷಿಸಿ. ಫೇಸ್​ಬುಕ್, ವಾಟ್ಸಪ್, ಮತ್ತು ಮೊಬೈಲ್ ಮೂಲಕ ಬರುವ ಯಾವುದೇ ನೌಕರಿಯ ಆಫರ್ ತಿರಸ್ಕರಿಸಿ. ಇಮೇಲ್ ಮೂಲಕ ಬಂದ ಆಫರ್​ಗಳಾದರೆ ಸಂಸ್ಥೆಯ ಬಗ್ಗೆ ಹೆಚ್ಚಿನ ಮಾಹಿತಿ ಸಂಗ್ರಹಿಸಿ. ಯಾವುದೇ ಸಂಸ್ಥೆಯು ತತ್​ಕ್ಷಣ ನೌಕರಿಯನ್ನು ನೀಡಿದರೆ ಎಚ್ಚರದಿಂದಿರಿ. ಜಿಮೇಲ್, ಯಾಹೂ ಮೇಲ್ ಮುಂತಾದ ವಿಳಾಸಗಳನ್ನು ಹೊಂದಿರುವ ಕಂಪನಿಗಳನ್ನು ಖಂಡಿತಾ ನಂಬದಿರಿ. ನೌಕರಿಗೆ ಸೇರುವ ಮುನ್ನ ಅಥವಾ ಸೇರಿದ ನಂತರ ಹಣವನ್ನು ಆ ಸಂಸ್ಥೆಗೆ ವರ್ಗಾಯಿಸದಿರಿ. ವಿವೇಚನೆಯಿಂದ ಮಾತ್ರ ರಕ್ಷಣೆ ಸಾಧ್ಯ. ‘ಆಶೆ ಮಂಥರೆ, ನರವಿವೇಚನೆಯೆ ಕೈಕೇಯಿ, ಬೀಸೆ ಮನದುಸಿರು ಮತಿದೀಪವಲೆಯುವುದು, ವಾಸನೆಗಳನುಕೂಲ ಸತ್ಯತರ್ಕಕೆ ಶೂಲ, ಶೋಷಿಸಾ ವಾಸನೆಯ ಮಂಕುತಿಮ್ಮ’ ಎನ್ನುವ ಸಾಲುಗಳು ನೆನಪಿನಲ್ಲಿರಲಿ.

    (ಲೇಖಕರು ನಿವೃತ್ತ ಪೊಲೀಸ್ ಅಧಿಕಾರಿ)

    ಅಂದು ‘ತಪ್ಪಾಯ್ತು ಕ್ಷಮಿಸಿ’ ಎಂದು ಕೈಮುಗಿದು ಕೇಳಿ ಇಂದು ಮತ್ತದೇ ತಪ್ಪು ಮಾಡಿದ ಜಮೀರ್​ ಅಹಮದ್​!

    ನಿರುದ್ಯೋಗಿಗಳಿಗೆ ಯುವನಿಧಿ: ಆದೇಶ ಮಾಡೇಬಿಟ್ಟ ಸರ್ಕಾರ; ಈ ಗ್ಯಾರಂಟಿಗೆ ಷರತ್ತುಗಳೇನು?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts