

ನವದೆಹಲಿ: ಕಳೆದ ವಾರ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ ಎಂಎಸ್ ಧೋನಿಗೆ ನಿವೃತ್ತಿ ಪಂದ್ಯವಾಡಿಸಲು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಸಿದ್ಧವಿದೆ ಎನ್ನಲಾಗಿದೆ. ಸೆಪ್ಟೆಂಬರ್ 19 ರಿಂದ ಯುಎಇಯಲ್ಲಿ ಆರಂಭವಾಗಲಿರುವ 13ನೇ ಐಪಿಎಲ್ ಟೂರ್ನಿ ವೇಳೆ ಧೋನಿ ಜತೆಗೆ ಈ ಕುರಿತು ಚರ್ಚಿಸಲಾಗುವುದು. ಸದ್ಯ ಭಾರತದಲ್ಲಿ ಯಾವುದೇ ಅಂತಾರಾಷ್ಟ್ರೀಯ ಸರಣಿಗಳಿಲ್ಲ. ಐಪಿಎಲ್ ಮುಕ್ತಾಯದ ಬಳಿಕ ಪಂದ್ಯ ಆಯೋಜನೆ ಕುರಿತಂತೆ ಚರ್ಚೆ ನಡೆಸಲಾಗುವುದು ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ವಿದಾಯದ ಪಂದ್ಯಕ್ಕೆ ಧೋನಿ ಆರ್ಹರು, ಕ್ರಿಕೆಟ್‌ಗೆ ಅವರ ಕೊಡುಗೆ ಅಪಾರ. ಬಿಸಿಸಿಐ ಕೂಡ ಅವರಿಗೆ ವಿದಾಯದ ಪಂದ್ಯ ಹೇಳಲು ಆಸಕ್ತಿ ತೋರಿದೆ’ ಎಂದು ಹೇಳಿದ್ದಾರೆ. ಕೇವಲ ಪಂದ್ಯವಷ್ಟೇ ಅಥವಾ ಸರಣಿ ಆಯೋಜಿಸುವ ಬಗ್ಗೆ ಧೋನಿ ಜತೆಗೆ ಮಾತುಕತೆ ನಡೆಸಬೇಕು. ಸನ್ಮಾನ ಸಮಾರಂಭ ಆಯೋಜಿಸುವ ಕುರಿತು ಅವರೊಂದಿಗೆ ಚರ್ಚೆ ನಡೆಸಬೇಕಿದೆ ಎಂದಿದ್ದಾರೆ. ಮಾಜಿ ಕ್ರಿಕೆಟಿಗ ಮದನ್ ಲಾಲ್ ಕೂಡ ಧೋನಿಗೆ ವಿದಾಯದ ಪಂದ್ಯ ಅಗತ್ಯವಿದೆ. ಬಿಸಿಸಿಐ ವಿದಾಯದ ಪಂದ್ಯ ಆಯೋಜಿಸಿದರೆ ನಾನು ತುಂಬಾ ಖುಷಿ ಪಡುವೆ ಎಂದು ಮದನ್ ಲಾಲ್ ಹೇಳಿದ್ದಾರೆ.
ಧೋನಿ ನಿವೃತ್ತಿ ಘೋಷಿಸಿದ ಮರು ದಿನವೇ ಜಾರ್ಖಂಡ್ ಮುಖ್ಯಮಂತ್ರಿ ಹೇಮಂತ್ ಸೋರೆನ್ ಧೋನಿಗಾಗಿ ಜಾರ್ಖಂಡ್ ರಾಜಧಾನಿ ರಾಂಚಿಯಲ್ಲೇ ವಿದಾಯದ ಪಂದ್ಯ ಆಯೋಜಿಸಲಿ ಎಂದು ಬಿಸಿಸಿಐಗೆ ಆಗ್ರಹಿಸಿದ್ದರು. ಎಂಎಸ್ ಧೋನಿ 3 ಐಸಿಸಿ (2007ರ ಟಿ20, 2011ರ ಏಕದಿನ, 2013 ಚಾಂಪಿಯನ್ಸ್ ಟ್ರೋಫಿ) ಗೆದ್ದಿರುವ ವಿಶ್ವದ ಏಕೈಕ ನಾಯಕ ಧೋನಿ ಎನಿಸಿದ್ದಾರೆ. 2019ರ ಏಕದಿನ ವಿಶ್ವಕಪ್ ಸೆಮಿಫೈನಲ್ ನಲ್ಲಿ ನ್ಯೂಜಿಲೆಂಡ್ ಎದುರು ಸೋತ ಬಳಿಕ ಧೋನಿ ಕ್ರಿಕೆಟ್‌ನಿಂದ ದೂರ ಉಳಿದಿದ್ದರು. ಸದ್ಯ ಚೆನ್ನೈನಲ್ಲಿ ಸಿಎಸ್‌ಕೆ ತಂಡದೊಂದಿಗೆ ತರಬೇತಿ ಶಿಬಿರದಲ್ಲಿದ್ದು, ತಂಡದೊಂದಿಗೆ ಆ.22 ರಂದು ಯುಎಇಗೆ ಪ್ರಯಾಣ ಬೆಳೆಸಲಿದ್ದಾರೆ.