ಐಪಿಎಲ್​ ಪ್ರಾಯೋಜಕತ್ವದಿಂದ ಟಾಟಾ ಗ್ರೂಪ್​ ಹಿಂದೆ ಸರಿದಿದ್ದು ಯಾಕೆ ಗೊತ್ತೇ?

ipl-tata
Published on

ನವದೆಹಲಿ: ದೇಶದ ಪ್ರತಿಷ್ಠಿತ ಟಾಟಾ ಗ್ರೂಪ್​ ಸೋಮವಾರದವರೆಗೆ ಐಪಿಎಲ್​ 13ನೇ ಆವೃತ್ತಿಯ ಶೀರ್ಷಿಕೆ ಪ್ರಾಯೋಜಕತ್ವ ರೇಸ್​ನಲ್ಲಿ ಮುಂಚೂಣಿಯಲ್ಲಿತ್ತು. ಆದರೆ ಮಂಗಳವಾರ ನಡೆದ ಅಂತಿಮ ಹಂತದ ಬಿಡ್ಡಿಂಗ್​ ಪ್ರಕ್ರಿಯೆಯ ವೇಳೆ ಟಾಟಾ ಗ್ರೂಪ್​ ರೇಸ್​ನಿಂದ ಸಂಪೂರ್ಣವಾಗಿ ಹೊರ ನಡೆಯಿತು. ಇದರ ಹಿಂದಿನ ಕಾರಣವೇನೆಂದು ಗೊತ್ತೇ?

ಶೀರ್ಷಿಕೆ ಪ್ರಾಯೋಜಕತ್ವಕ್ಕೆ ಸಂಬಂಧಿಸಿ ಟಾಟಾ ಗ್ರೂಪ್​ ಇಟ್ಟಿದ್ದ ಬೇಡಿಕೆಗೆ ಬಿಸಿಸಿಐ ಸಮ್ಮತಿಸದ ಕಾರಣ ಅದು ಹಿಂದೆ ಸರಿಯಬೇಕಾಯಿತು. ಟಾಟಾ ಗ್ರೂಪ್​ ಪ್ರಾಯೋಜಕತ್ವದಲ್ಲಿ ತನ್ನ ಒಟ್ಟು 3 ಬ್ರಾಂಡ್​ಗಳ ಪ್ರಚಾರವನ್ನು ಬಯಸಿತ್ತು. ಅದು ಟಾಟಾ ಟೀ, ಟಾಟಾ ಮೋಟಾರ್ಸ್ ಮತ್ತು ಟೈಟಾನ್​ ಸಂಸ್ಥೆಗಳ ಬ್ರಾಂಡ್​ಅನ್ನು ಶೀರ್ಷಿಕೆ ಪ್ರಾಯೋಜಕತ್ವದಲ್ಲಿ ಬಳಸಲು ಬಯಸಿತ್ತು. ಅಲ್ಲದೆ ಪಂದ್ಯದ ವೇಳೆ ಮತ್ತು ಕ್ರೀಡಾಂಗಣದೊಳಗೆ ಈ ಬ್ರಾಂಡ್​ಗಳ ಪ್ರಚಾರ ನಡೆಸಲು ಅವಕಾಶ ಕೋರಿತ್ತು. ಆದರೆ ಬಿಸಿಸಿಐ ಯಾವುದಾದರೂ ಒಂದು ಬ್ರಾಂಡ್​ಗೆ ಮಾತ್ರ ಅವಕಾಶ ನೀಡುವುದಾಗಿ ತಿಳಿಸಿತು.

'ಬಿಸಿಸಿಐ ತನ್ನದೇ ಆದ ಪಾಲಿಸಿಯಿಂದಾಗಿ ಈ ನಿರ್ಧಾರ ಕೈಗೊಂಡಿತ್ತು. ಟಾಟಾದ 3 ಬ್ರಾಂಡ್​ಗಳ ಪ್ರಚಾರಕ್ಕೆ ಅವಕಾಶ ಮಾಡಿಕೊಟ್ಟಿದ್ದೇ ಆದರೆ, ಮಾರುಕಟ್ಟೆಯಲ್ಲಿರುವ ಅದರ ಎದುರಾಳಿಗಳಾದ ಮಹೀಂದ್ರ, ಟೆಟ್ಲೆ ಅಥವಾ ಇನ್ಫೋಸಿಸ್​ ಕಂಪನಿಗಳನ್ನು ಪ್ರಾಯೋಜಕತ್ವಕ್ಕೆ ಆಹ್ವಾನಿಸುವ ಅವಕಾಶವೇ ಉಳಿಯುತ್ತಿರಲಿಲ್ಲ' ಎಂದು ಬಿಸಿಸಿಐ ಅಧಿಕಾರಿ ವಿವರಿಸಿದ್ದಾರೆ.

ಟಾಟಾ ಗ್ರೂಪ್​ನ ಈ ಬಯಕೆಯ ನಂತರ ಬಿಸಿಸಿಐ, ಬಹು-ಬ್ರಾಂಡ್​ಗಳನ್ನು ಹೊಂದಿರುವ ಕಂಪನಿಗಳಿಗೆ ಭವಿಷ್ಯದಲ್ಲಿ ಪ್ರಾಯೋಜಕತ್ವ ನೀಡುವ ಬಗ್ಗೆ ಪರಿಶೀಲನೆ ನಡೆಸಲು ಮುಂದಾಗಿದೆ. ಆದರೆ ಸದ್ಯದ ಮಟ್ಟಿಗೆ ಬಿಸಿಸಿಐ ತನ್ನ ನಿಯಮವನ್ನು ಸಡಿಲಿಸಿಲ್ಲ. ಇದರಿಂದಾಗಿ ಟಾಟಾ ಗ್ರೂಪ್​, ಕ್ರಿಕೆಟ್​ ಜತೆ ಉತ್ತಮ ನಂಟು ಬೆಳೆಸಿಕೊಳ್ಳುವುದನ್ನು ನೋಡಲು ಇನ್ನಷ್ಟು ಸಮಯ ಕಾಯಬೇಕಾಗಿದೆ. ಕಳೆದೊಂದು ದಶಕದಿಂದ ಟಾಟಾ ಗ್ರೂಪ್​ನ ಬ್ರಾಂಡ್​ಗಳ ಪ್ರಚಾರಕ್ಕೆ ಕ್ರಿಕೆಟ್​ ಅಷ್ಟಾಗಿ ಬಳಕೆಯಾಗಿಲ್ಲ. ಅದು ಈ ಬಾರಿಯೂ ಮುಂದುವರಿದಂತಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net