

ನವದೆಹಲಿ: ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಮತ್ತು ಅಂತಾರಾಷ್ಟ್ರೀಯ ಕ್ರಿಕೆಟ್ ಸಮಿತಿ (ಐಸಿಸಿ) ನಡುವೆ ಮತ್ತೊಮ್ಮೆ ಯುದ್ಧ ಶುರುವಾಗಿದೆ! ಹಿಂದೆಲ್ಲ ಹಣಕಾಸು, ಅಧಿಕಾರದ ವಿಚಾರದಲ್ಲಿ ಭಿನ್ನಾಭಿಪ್ರಾಯ ಮೂಡುತ್ತಿದ್ದರೆ, ಈ ಬಾರಿ ತೆರಿಗೆ ವಿನಾಯಿತಿಗೆ ಸಂಬಂಧಿಸಿದಂತೆ ಬಿಕ್ಕಟ್ಟು ತಲೆದೋರಿದೆ.
2021ರ ಟಿ20 ವಿಶ್ವಕಪ್ ಮತ್ತು 2023ರ ಏಕದಿನ ವಿಶ್ವಕಪ್ ಟೂರ್ನಿಗಳ ಆತಿಥ್ಯಕ್ಕೆ ಭಾರತ ಸಜ್ಜಾಗುತ್ತಿದ್ದರೆ, ಈ ಟೂರ್ನಿಗಳಿಗೆ ಕೇಂದ್ರ ಸರ್ಕಾರದಿಂದ ತೆರಿಗೆ ವಿನಾಯಿತಿ ಕೊಡಿಸಲೇಬೇಕೆಂದು ಐಸಿಸಿ ಒತ್ತಡ ಹೇರುತ್ತಿದೆ. 2016ರಲ್ಲಿ ಭಾರತದ ಆತಿಥ್ಯದಲ್ಲಿ ನಡೆದ ಟಿ20 ವಿಶ್ವಕಪ್ ಟೂರ್ನಿಯ ತೆರಿಗೆ ವಿನಾಯಿತಿ ವಿವಾದವೇ ಇನ್ನೂ ಬಗೆಹರಿದಿಲ್ಲ. ಇದರ ನಡುವೆ ಮತ್ತೆರಡು ಟೂರ್ನಿಗಳಿಗೆ ತೆರಿಗೆ ವಿನಾಯಿತಿ ಕೊಡಿಸಲೇಬೇಕೆಂದು ಐಸಿಸಿ ಒತ್ತಾಯಿಸುತ್ತಿದೆ. ಆದರೆ ಕೇಂದ್ರ ಸರ್ಕಾರದ ಕಟ್ಟುನಿಟ್ಟಿನ ನಿಯಮಗಳಿಂದಾಗಿ ತೆರಿಗೆ ವಿನಾಯಿತಿ ಕೊಡಿಸುವುದು ಬಿಸಿಸಿಐಗೆ ಕಠಿಣವೆನಿಸಿದೆ.
ಇದನ್ನೂ ಓದಿ: ರವಿಶಾಸ್ತ್ರಿ ಶ್ವಾನಗಳಿಂದಲೂ ಐಸಿಸಿ ಮಾರ್ಗಸೂಚಿ ಪಾಲನೆ!
ಐಸಿಸಿ ವಕ್ತಾರರ ಹೇಳಿಕೆಯ ಪ್ರಕಾರ, ಬಿಸಿಸಿಐ ಮತ್ತು ಐಸಿಸಿ ಈಗ ಸೌಹಾರ್ದಯುತ ಒಪ್ಪಂದಕ್ಕೆ ಬರಲು ಮಾತುಕತೆ ನಡೆಸುತ್ತಿವೆ. ‘2015ರಿಂದ ಅನ್ವಯಿಸುವ ನಿಯಮಗಳಂತೆ, ಐಸಿಸಿ ಟೂರ್ನಿಗೆ ಆತಿಥ್ಯ ವಹಿಸುವ ದೇಶ ತೆರಿಗೆ ವಿನಾಯಿತಿ ನೀಡುವುದು ಅಗತ್ಯವಾಗಿದೆ. ಹೀಗಾಗಿ 2021 ಮತ್ತು 2023ರ ಟೂರ್ನಿಗಳಿಗೆ ತೆರಿಗೆ ವಿನಾಯಿತಿ ಕೊಡಿಸುವಂತೆ ಬಿಸಿಸಿಐಗೆ ಈಗಾಗಲೆ ಹಲವು ಗಡುವುಗಳನ್ನು ನೀಡಲಾಗಿದೆ. ಈ ಬಗ್ಗೆ ಇನ್ನೂ ಒಮ್ಮತದ ನಿರ್ಧಾರ ಮೂಡಿಲ್ಲ’ ಎಂದು ಐಸಿಸಿ ವಕ್ತಾರರು ತಿಳಿಸಿದ್ದಾರೆ.
ಇದನ್ನೂ ಓದಿ: ಹೃದಯ ಗೆದ್ದ ಪಾಂಡ್ಯ-ನತಾಶಾ ಸೆಲ್ಫಿ!
ತೆರಿಗೆ ವಿನಾಯಿತಿ ಖಚಿತಪಡಿಸಿಕೊಳ್ಳಲು ಬಿಸಿಸಿಐಗೆ 2019ರ ಡಿಸೆಂಬರ್‌ವರೆಗೆ ಐಸಿಸಿ ಗಡುವು ನೀಡಿತ್ತು. ಆದರೆ ಲಾಕ್‌ಡೌನ್‌ನಿಂದಾಗಿ ಸರ್ಕಾರದ ಜತೆಗೆ ಮಾತುಕತೆ ಸಾಧ್ಯವಾಗಿಲ್ಲ. ಹೀಗಾಗಿ ಜೂನ್ 30ರವರೆಗೆ ಅಥವಾ ಲಾಕ್‌ಡೌನ್ ತೆರವಾದ ಒಂದು ತಿಂಗಳವರೆಗೆ ಗಡುವು ವಿಸ್ತರಿಸುವಂತೆ ಬಿಸಿಸಿಐ ಕೇಳಿಕೊಂಡಿದೆ. ಹೀಗಾಗಿ ಮೇ 26ರಂದು ನಡೆಯಲಿರುವ ಐಸಿಸಿ ಸಭೆ ಮಹತ್ವ ಪಡೆದುಕೊಂಡಿದೆ.
ಇದನ್ನೂ ಓದಿ: VIDEO: ಕ್ರಿಕೆಟರ್ ಜೆಮೀಮಾ ಈಗ ರಾಕ್ಸ್ಟಾರ್
ಐಸಿಸಿ ಚೇರ್ಮನ್ ಶಶಾಂಕ್ ಮನೋಹರ್ ಮತ್ತು ಸಿಇಒ ಮನು ಸಾವ್ನೆ ಈ ಸಂಬಂಧ ಈಗಾಗಲೆ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಮತ್ತು ಕಾರ್ಯದರ್ಶಿ ಜಯ್ ಷಾ ಜತೆಗೆ ನಿಕಟ ಸಂಪರ್ಕದಲ್ಲಿದ್ದಾರೆ. ಆದರೆ ಈ ನಡುವೆ, ಐಸಿಸಿಯ ಕಾನೂನು ಮುಖ್ಯಸ್ಥ ಜೊನಾಥನ್ ಹಾಲ್ ಕಳುಹಿಸುತ್ತಿರುವ ಇ-ಮೇಲ್‌ಗಳ ಖಾರವಾದ ದಾಟಿಯ ಬಗ್ಗೆ ಬಿಸಿಸಿಐ ಆಕ್ಷೇಪ ಎತ್ತಿದೆ. ‘ತೆರಿಗೆ ಸ್ವರೂಪವನ್ನು ನಿರ್ಧರಿಸುವುದು ಬಿಸಿಸಿಐ ಅಲ್ಲ, ಭಾರತದ ಸರ್ಕಾರ. ವಿನಾಯಿತಿ ನೀಡಬೇಕೇ, ಬೇಡವೇ ಎಂಬುದನ್ನೂ ನಿರ್ಧರಿಸುವುದು ಸರ್ಕಾರ. ಈ ಹಿಂದೆ ಾರ್ಮುಲಾ ಒನ್‌ಗೂ ತೆರಿಗೆ ವಿನಾಯಿತಿ ನೀಡಲಾಗಿರಲಿಲ್ಲ. ಲಾಕ್‌ಡೌನ್ ಜಾರಿಯಲ್ಲಿರುವುದರಿಂದ ನಮಗೆ ಸರ್ಕಾರಿ ಅಧಿಕಾರಿಗಳ ಜತೆಗೆ ಮಾತುಕತೆ ನಡೆಸುವುದು ಕೂಡ ಸಾಧ್ಯವಾಗುತ್ತಿಲ್ಲ’ ಎಂದು ಬಿಸಿಸಿಐ ಅಧಿಕಾರಿ ತಿಳಿಸಿದ್ದಾರೆ. 2016ರ ಟಿ20 ವಿಶ್ವಕಪ್‌ಗೆ ಮುನ್ನ ಭಾರತದಲ್ಲಿ ನಡೆದ ಐಸಿಸಿ ಟೂರ್ನಿಗಳಿಗೆ ತೆರಿಗೆ ವಿನಾಯಿತಿ ನೀಡಲಾಗಿತ್ತು.
175 ಕೋಟಿ ರೂ. ತಡೆ ಹಿಡಿದಿದೆ ಐಸಿಸಿ
2016ರ ಟಿ20 ವಿಶ್ವಕಪ್ ಆತಿಥ್ಯ ವಹಿಸಿದ್ದಕ್ಕಾಗಿ ಬಿಸಿಸಿಐಗೆ ಐಸಿಸಿಯಿಂದ 175 ಕೋಟಿ ರೂ. ಪಾವತಿಯಾಗಬೇಕಾಗಿದೆ. ಆದರೆ ತೆರಿಗೆ ವಿನಾಯಿತಿ ವಿವಾದ ಬಗೆಹರಿಯದ ಕಾರಣ ಐಸಿಸಿ ಇನ್ನೂ ಈ ಮೊತ್ತವನ್ನು ತಡೆಹಿಡಿದಿದೆ. ಇದಕ್ಕಾಗಿ ಬಿಸಿಸಿಐ ಈಗಾಗಲೆ ಕಾನೂನು ಹೋರಾಟದ ಮೊರೆ ಹೋಗಿದೆ. ಬ್ರಿಟನ್ ಕಾನೂನಿನ ಅಡಿಯಲ್ಲಿ ಐಸಿಸಿ ಬರುವುದರಿಂದಾಗಿ, ಅಲ್ಲಿನ ಪ್ರತಿಷ್ಠಿತ ಕಾನೂನು ಸಂಸ್ಥೆಯೊಂದನ್ನು ಬಿಸಿಸಿಐ ಈಗಾಗಲೆ ಸಂಪರ್ಕಿಸಿದೆ.