ಏಷ್ಯಾಕಪ್ ಟೂರ್ನಿ; ಪಾಕ್​​ ವಿರುದ್ಧ ಪಂದ್ಯದ ನಿರ್ಧಾರ ಇವರಿಗೆ ಬಿಟ್ಟಿದ್ದು ಎಂದ ಸುನಿಲ್ ಗವಾಸ್ಕರ್ | Sunil Gavaskar

Sunil Gavaskar
Published on

Sunil Gavaskar: ಸೆಪ್ಟೆಂಬರ್ 9 ರಿಂದ ಆರಂಭವಾಗಲಿರುವ ಏಷ್ಯಾಕಪ್ ಟೂರ್ನಿಗಾಗಿ ಆಟಗಾರರು ತಯಾರಿ ನಡೆಸುತ್ತಿದ್ದು, ಪಾಕ್​​ ವಿರುದ್ಧ ಪಂದ್ಯದ ಬಗ್ಗೆ ಆಟಗಾರರನ್ನು ಗುರಿಯಾಗಿಸಿಕೊಂಡು ಯಾವುದೇ ರೀತಿಯ ಹೇಳಿಕೆ ನೀಡದಂತೆ ಭಾರತದ ಮಾಜಿ ನಾಯಕ ಸುನಿಲ್ ಗವಾಸ್ಕರ್ ಅಭಿಮಾನಿಗಳು ಮತ್ತು ವಿಮರ್ಶಕರಲ್ಲಿ ಮನವಿ ಮಾಡಿದ್ದಾರೆ.

ಮಾಧ್ಯಮಗಳೊಂದಿಗೆ ಮಾತನಾಡಿದ ಗವಾಸ್ಕರ್, ಈ ರೀತಿಯ ವಿಷಯಗಳಲ್ಲಿ ಬಿಸಿಸಿಐ ಮತ್ತು ಭಾರತ ಸರ್ಕಾರದ ನಿರ್ದೇಶನಗಳನ್ನು ಅನುಸರಿಸಲಾಗುತ್ತದೆಯೇ ಹೊರುತು ಇದರಲ್ಲಿ ಆಟಗಾರರ ಪಾತ್ರ ಇರುವುದಿಲ್ಲ ಎಂದು ಸ್ಪಷ್ಟಪಡಿಸಿದರು.

ಈ ವಿಷಯದಲ್ಲಿ ಸರ್ಕಾರ ನಿರ್ಧಾರ ತೆಗೆದುಕೊಂಡಿದ್ದರೆ, ಆಟಗಾರರನ್ನು ಟೀಕಿಸುವುದು ಸರಿ ಅಲ್ಲ, ಆಟಗಾರರು ಬಿಸಿಸಿಐಗೆ ಒಪ್ಪಂದ ಮಾಡಿಕೊಂಡಿರುತ್ತಾರೆ ಮತ್ತು ಅವರು ಭಾರತ ಸರ್ಕಾರದಿಂದ ಸೂಚನೆಗಳನ್ನು ತೆಗೆದುಕೊಳ್ಳುತ್ತಾರೆ, ಆದ್ದರಿಂದ ತಂಡ ಅಥವಾ ಯಾವುದೇ ಪಂದ್ಯದ ಬಗೆಗಿನ ನಿರ್ಧಾರ ತೆಗೆದುಕೊಳ್ಳಲು ಆಟಗಾರರಿಗೆ ಸ್ವಾತಂತ್ರ ಇರುವುದಿಲ್ಲ ಎಂದರು.

ಸದ್ಯ ಆಟಗಾರರನ್ನು ಏಷ್ಯಾಕಪ್‌ನಲ್ಲಿ ಆಡಲು ಆಯ್ಕೆ ಮಾಡಲಾಗಿದ್ದು, ಸರ್ಕಾರ ನೀವು ಆಡಬೇಕು ಎಂದು ಹೇಳಿದರೆ ಅವರು ಆಡಲೇಬೇಕಾಗುತ್ತದೆ, ಸರ್ಕಾರ ನೀವು ಆಡಬೇಡಿ ಎಂದು ಹೇಳಿದರೆ, ಬಿಸಿಸಿಐ ಅದಕ್ಕೆ ತಕ್ಕಂತೆ ಕಾರ್ಯನಿರ್ವಹಿಸುತ್ತದೆ ಎಂದು ಅವರು ಹೇಳಿದರು.

ಪಾಕಿಸ್ತಾನ ವಿರುದ್ಧದ ಪಂದ್ಯದಿಂದ ಅಥವಾ ಇಡೀ ಟೂರ್ನಿಯಿಂದ ಭಾರತ ತಂಡ ಹೊರಬರಬಹುದೇ ಎಂಬ ಪ್ರಶ್ನೆಗೆ ಉತ್ತರಿಸಿದ ಗವಾಸ್ಕರ್, ಅಂತಿಮ ನಿರ್ಧಾರ ಸರ್ಕಾರಕ್ಕೆ ಬಿಟ್ಟಿದ್ದು ಎಂದರು.

ಏಷ್ಯಾಕಪ್​​ ತಂಡವನ್ನು ಶ್ಲಾಘಿಸಿದ ಗವಾಸ್ಕರ್

ಪಂದ್ಯಾವಳಿಗೆ ಆಯ್ಕೆಯಾದ ಭಾರತ ತಂಡವನ್ನು ಶ್ಲಾಘಿಸಿದ ಹಿರಿಯ ಕ್ರಿಕೆಟಿಗ, ಇತ್ತೀಚಿನ ವರ್ಷಗಳಲ್ಲಿ ಭಾರತದ ಬಲಿಷ್ಠ ತಂಡಗಳಲ್ಲಿ ಈ ತಂಡವೂ ಒಂದೆಂದು ಬಣ್ಣಿಸಿದರು. ಇದು ಅದ್ಭುತ ತಂಡ. ಬ್ಯಾಟಿಂಗ್‌ನಲ್ಲಿ ಆಳ, ಎಡ ಮತ್ತು ಬಲಗೈ ಸಂಯೋಜನೆಗಳಲ್ಲಿ ವೈವಿಧ್ಯತೆ ಮತ್ತು ಬೌಲಿಂಗ್‌ನಲ್ಲಿಯೂ ಅದ್ಭುತ ಸಮತೋಲನವನ್ನು ಹೊಂದಿದೆ ಎಂದರು.(ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net