ಕ್ರಿಕೆಟ್ ಪ್ರೇಮಿಗಳಿಗೆ ಬಿಸಿಸಿಐ ಸಿಹಿ ಸುದ್ದಿ, ಐಪಿಎಲ್‌ಗೆ ಪ್ರೇಕ್ಷಕರ ರೀ ಎಂಟ್ರಿ

ipl fans for web
Published on

ನವದೆಹಲಿ: ಐಪಿಎಲ್ 14ನೇ ಆವೃತ್ತಿಯ 2ನೇ ಭಾಗ ಆರಂಭಕ್ಕೂ ಮುನ್ನ ಕ್ರಿಕೆಟ್ ಪ್ರೇಮಿಗಳಿಗೆ ಬಿಸಿಸಿಐ ಸಿಹಿ ಸುದ್ದಿ ರವಾನಿಸಿದೆ. ಅರಬ್ ರಾಷ್ಟ್ರದಲ್ಲಿ ನಡೆಯುವ ಪಂದ್ಯಗಳನ್ನು ವೀಕ್ಷಿಸಲು ಪ್ರೇಕ್ಷಕರಿಗೆ ಸ್ಟೇಡಿಯಂಗೆ ಅವಕಾಶ ಕಲ್ಪಿಸಲಾಗುತ್ತಿದೆ ಎಂದು ಬುಧವಾರ ಬಿಸಿಸಿಐ ತಿಳಿಸಿದೆ. ಹಾಲಿ ಚಾಂಪಿಯನ್ ಮುಂಬೈ ಇಂಡಿಯನ್ಸ್ ಹಾಗೂ ಚೆನ್ನೈ ಸೂಪರ್‌ಕಿಂಗ್ಸ್ ತಂಡಗಳ ಸೆಪ್ಟೆಂಬರ್ 19ರಂದು ಟೂರ್ನಿಯ ಎರಡನೇ ಚರಣದ ಮೊದಲ ಹಣಾಹಣಿಯಲ್ಲಿ ಎದುರಾಗಲಿವೆ. ಕೋವಿಡ್‌ನಿಂದಾಗಿ ಮುನ್ನೆಚ್ಚರಿಕೆ ದೃಷ್ಟಿಯಿಂದ ಕಳೆದ ವರ್ಷ ಯುಎಇಯಲ್ಲೇ ನಡೆದ 13ನೇ ಆವೃತ್ತಿಯಲ್ಲಿ ಪ್ರೇಕ್ಷಕರಿಲ್ಲದೆ, ಖಾಲಿ ಸ್ಟೇಡಿಯಂನಲ್ಲಿ ಪಂದ್ಯಗಳನ್ನು ಆಯೋಜಿಸಲಾಗಿತ್ತು. ಈ ಬಾರಿ ಯುಎಇ ಸರ್ಕಾರದ ಮಾರ್ಗಸೂಚಿಯಂತೆ ಪ್ರೇಕ್ಷಕರಿಗೆ ಅವಕಾಶ ಕಲ್ಪಿಸಲಾಗುತ್ತಿದ್ದು, ಸ್ಥಳೀಯ ಮಾರ್ಗಸೂಚಿ ಪಾಲಿಸಲಾಗುತ್ತಿದೆ.

ಕಳೆದ ಮೇನಲ್ಲಿ ಭಾರತದಲ್ಲಿ ನಡೆದ ಟೂರ್ನಿಯ ಮೊದಲ 29 ಪಂದ್ಯಗಳ ವೇಳೆ ಬಯೋಬಬಲ್‌ನಲ್ಲೇ ಕೋವಿಡ್ ಪ್ರಕರಣಗಳು ದಾಖಲಾದ ಹಿನ್ನೆಲೆಯಲ್ಲಿ ಲೀಗ್ ಸ್ಥಗಿತಗೊಳಿಸಲಾಗಿತ್ತು. ಟೂರ್ನಿಯ ಉಳಿದ 31 ಪಂದ್ಯಗಳು ಶಾರ್ಜಾ, ದುಬೈ ಹಾಗೂ ಅಬುಧಾಬಿಯಲ್ಲಿ ನಡೆಯಲಿವೆ. ಅಕ್ಟೋಬರ್ 15ರಂದು  ಫೈನಲ್ ಪಂದ್ಯ ನಡೆಯಲಿದೆ. ‘ಐಪಿಎಲ್ ಪಂದ್ಯಗಳಿಗೆ ಪ್ರೇಕ್ಷಕರು ವಾಪಸಾಗಲಿದ್ದಾರೆ. ದುಬೈ ಶಾರ್ಜಾ ಹಾಗೂ ಅಬುಧಾಬಿ ಸ್ಟೇಡಿಯಂಗಳಲ್ಲಿ ನಿಗದಿತ ಸಂಖ್ಯೆಯಲ್ಲಿ ಪ್ರೇಕ್ಷಕರು ಪಂದ್ಯ ವೀಕ್ಷಿಸಲಿದ್ದಾರೆ’ ಎಂದು ಬಿಸಿಸಿಐ ತಿಳಿಸಿದೆ.

*ಇಂದಿನಿಂದ ಟಿಕೆಟ್ ಮಾರಾಟ

ಪಂದ್ಯಗಳಿಗೆ ಗುರುವಾರದಿಂದ ಟಿಕೆಟ್ ಮಾರಾಟ ಮಾಡಲಾಗುತ್ತಿದ್ದು, ಐಪಿಎಲ್ ವೆಬ್‌ಸೈಟ್ ಅಥವಾ ಪ್ಲಾಟಿನಮ್‌ಲಿಸ್ಟ್ ಡಾಟ್ ನೆಟ್‌ನಲ್ಲಿ ಟಿಕೆಟ್ ಪಡೆಯಬಹುದು ಎಂದು ಆಯೋಜಕರು ತಿಳಿಸಿದ್ದಾರೆ. 2019ರ ಬಳಿಕ ಮೊದಲ ಬಾರಿಗೆ ಪ್ರೇಕ್ಷಕರ ಸಮ್ಮುಖದಲ್ಲಿ ಐಪಿಎಲ್ ನಡೆಯಲಿದೆ. ಮೈದಾನಕ್ಕೆ ಎಷ್ಟು ಮಂದಿ ಪ್ರೇಕ್ಷಕರಿಗೆ ಅವಕಾಶ ನೀಡಲಾಗುತ್ತದೆ ಎಂಬುದನ್ನು ಬಿಸಿಸಿಐ ಸ್ಪಷ್ಟಪಡಿಸಿಲ್ಲ. ಇದಕ್ಕೂ ಮೊದಲು ಶೇಕಡ 50 ಪ್ರೇಕ್ಷಕರಿಗೆ ಅವಕಾಶ ನೀಡಲಾಗುತ್ತದೆ ಎಂದು ಹೇಳಲಾಗಿತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net