

ಸಿಡ್ನಿ: ಬಿಗ್ ಬ್ಯಾಷ್ ಲೀಗ್ನ ಬ್ರಿಸ್ಬೇನ್ ಹೀಟ್ ತಂಡದ ಆಲ್ರೌಂಡರ್ ಆಟಗಾರ ಲೆವಿಸ್ ಗ್ರೆಗೊರಿಯವರ ಬೌಲಿಂಗ್ ಎಸೆತ ಇದೀಗ ಭಾರಿ ಚರ್ಚೆಯ ವಿಷಯವಾಗಿದೆ. ಬ್ರಿಸ್ಬೇನ್ ಹೀಟ್ ಹಾಗೂ ಹೋಬರ್ಟ್ ಹರಿಕೇನ್ಸ್ ನಡುವಿನ ಪಂದ್ಯದಲ್ಲಿ ಇಂಗ್ಲೆಂಡ್ ಆಟಗಾರ ಗ್ರೆಗೊರಿ ಎಸೆದ ಚೆಂಡನ್ನು ವರ್ಷದ ಅತಿ ಕೆಟ್ಟ ಎಸೆತ ಎಂದು ಬಣ್ಣಿಸಲಾಗಿದೆ.
ಹರಿಕೇನ್ಸ್ ಇನ್ನಿಂಗ್ಸ್ನ 17ನೇ ಓವರ್ನಲ್ಲಿ ಗ್ರೆಗೊರಿ ಅವರು ಟೀಮ್ ಡೇವಿಡ್ ಅವರಿಗೆ ಬೌಲ್ ಮಾಡುವಾಗ ಈ ವಿನೂತನ ಪ್ರಸಂಗ ಜರುಗಿದೆ. ಅದರ ಹಿಂದಿನ ಎಸೆತಕ್ಕೆ ಡೇವಿಡ್ ಸಿಕ್ಸರ್ ಬಾರಿಸಿದಾಗ ಮುಂದಿನ ಹಾಗೂ ಓವರ್ನ ಕೊನೆಯ ಎಸೆತದಲ್ಲಿ ಮತ್ತೆ ಸಿಕ್ಸರ್ ನೀಡಬಾರದು ಎಂಬ ಉದ್ದೇಶದಿಂದ ಬಾಲ್ ಮಾಡಿದ ಗ್ರೆಗೊರಿಗೆ ನಡೆದಿದ್ದೇ ಬೇರೆ.
ಆಫ್ ಸ್ಟಂಪ್ ಹೊರಭಾಗದಲ್ಲಿ ಆಫ್ ಕಟರ್ ಔಟ್ಸೈಡ್ ಬೌಲ್ ಮಾಡಲು ಗ್ರೆಗೊರಿ ಯತ್ನಿಸಿದರು. ಆದರೆ, ಬಾಲ್ ಗ್ರೆಗೊರಿ ಕೈನಿಂದ ಜಾರಿ ಕ್ರೀಸ್ನಿಂದ ಮೀಟರ್ ದೂರ ಸರಿಯುವ ಮೂಲಕ ಅಗಲವಾದ ಎಸೆತಕ್ಕೆ ಕಾರಣವಾಯ್ತು. ಇದನ್ನು ನೋಡಿದ ಕಾಮೆಂಟೇಟರ್ಸ್ ಸಹ ನಗು ಬೀರಿದರು. ಇತ್ತ ಬಾಲ್ ಮಾಡುವಾಗಲೂ ನಿಯಂತ್ರಣ ಕಳೆದುಕೊಂಡು ಗ್ರೆಗೊರಿ ಕ್ರೀಸ್ನಲ್ಲಿ ಉರುಳಿಬಿದ್ದು, ಇದೇನಾಗೋಯ್ತು ಎಂದು ಮುಗುಳ್ನಗೆ ಬೀರುತ್ತಿದ್ದರು.
ಗ್ರೆಗೊರಿ ಎಸೆತವನ್ನು ನೋಬಾಲ್ ಎಂದು ಪರಿಗಣಿಸಲಾಯಿತು. ಪರಿಣಾಮ ಫ್ರೀಹಿಟ್ ಪಡೆದ ಡೇವಿಡ್ ಮತ್ತೆ ಸಿಕ್ಸರ್ ಬಾರಿಸಿದರು. ಅದೇ ಓವರ್ನಲ್ಲೆ ಗ್ರೆಗೊರಿ 20 ರನ್ ಬಿಟ್ಟುಕೊಟ್ಟರು. ಅಂತಿಮವಾಗಿ ಬ್ರಿಸ್ಬೇನ್ ಹೀಟ್ ತಂಡ 1 ರನ್ನಿಂದ ಪಂದ್ಯವನ್ನು ಕೈಚೆಲ್ಲಿತ್ತು.
ಇನ್ನು ಗ್ರೆಗೊರಿಯವರ ವರ್ಷದ ಕೆಟ್ಟ ಎಸೆತದ ವಿಡಿಯೋವನ್ನು ಕೆಎಫ್ಸಿ ಬಿಗ್ ಬ್ಯಾಷ್ ಲೀಗ್ ಟ್ವಿಟರ್ ಖಾತೆಯಲ್ಲಿ ಶೇರ್ ಮಾಡಿಕೊಳ್ಳಲಾಗಿದೆ. ಲೀಗ್ನ ಗಮನಾರ್ಹ ಎಸೆತವಾಗಿದೆ ಎಂದು ವಿಡಿಯೋ ಕುರಿತು ಬರೆಯಲಾಗಿದ್ದು, ವಿಡಿಯೋ ಭಾರಿ ವೈರಲ್ ಆಗಿದೆ. (ಏಜೆನ್ಸೀಸ್)