

ಬೆಂಗಳೂರು: ಕನ್ನಡದ ಬಿಗ್ ಬಾಸ್ ಸೀಸನ್ 10ರ ಸ್ಪರ್ಧಿಗಳು ಇದೀಗ ಏಳನೇ ವಾರಕ್ಕೆ ಕಾಲಿಟ್ಟಿದ್ದು, ಈ ಹಿಂದೆಯಿದ್ದ ಅಸಲಿ ಆಟದ ವೈಖರಿಯನ್ನು ಟಾಸ್ಕ್ ಮೂಲಕ ಮತ್ತೊಮ್ಮೆ ಮುನ್ನೆಲೆಗೆ ತಂದಿದ್ದಾರೆ. ತಲೆ ಬೋಳಿಸಿಕೊಳ್ಳುವ ಮುಖೇನ ಕಾರ್ತಿಕ್ ಮತ್ತು ತುಕಾಲಿ ಸಂತೋಷ್ ಸಂಪತ್ತಿಗೆ ಸವಾಲೆಸೆದರೆ ಅತ್ತ ನನ್ನಿಂದ ಕಾರ್ತಿಕ್ಗೆ ಹೀಗಾಯಿತು ಎಂದು ಸಂಗೀತಾ ಕಣ್ಣೀರಿಟ್ಟಿದ್ದಾರೆ.
ಆಪ್ತ ಸ್ನೇಹಿತರಾಗಿದ್ದ ಸಂಗೀತಾ-ಕಾರ್ತಿಕ್ ನಡುವೆ ಇದೀಗ ಭಾರೀ ವೈಮನಸ್ಸು ಮೂಡಿದ್ದು, ಒಬ್ಬರನೊಬ್ಬರು ಪರಸ್ಪರ ಮುಖ ನೋಡಿ ಮಾತಾಡುವುದಕ್ಕೂ ಇಚ್ಚಿಸುತ್ತಿಲ್ಲ ಎಂಬ ಸಂಗತಿ ಮನೆಯ ಸದಸ್ಯರಿಗೆ ಎಷ್ಟು ಅಚ್ಚರಿ ತಂದಿದೆಯೋ ಅಷ್ಟೇ ಶಾಕಿಂಗ್ನಲ್ಲಿ ವೀಕ್ಷಕರು ಕೂಡ ಇದ್ದಾರೆ.
ಈ ಮಧ್ಯೆ ಕಾರ್ತಿಕ್ ನಡೆಗೆ ಬೇಸರಗೊಂಡ ಸಂಗೀತಾ ಬಿಕ್ಕಿ ಬಿಕ್ಕಿ ಅತ್ತಿದ್ದು, ತಾನು ಬಿಗ್ ಬಾಸ್ ಮನೆಯಿಂದ ಹೊರಹೋಗಲು ಬಯಸುತ್ತೇನೆ ಎಂದು ಕೆಲ ಸಮಯ ಮನವಿ ಮಾಡಿದರು. ಸಂಗೀತಾ ಪರ ನಿಂತ ನಮ್ರತಾ, ವಿನಯ್, ಪ್ರತಾಪ್ ಸಮಾಧಾನ ಪಡಿಸಿ, ಊಟ ಮಾಡಿಸಿದ್ದಾರೆ.
ಆದ್ರೆ, ಈ ವಿಷಯಕ್ಕೆ ಮೊದಲು ಮಾತನಾಡಿದ ಕಾರ್ತಿಕ್, ತದನಂತರ ಹೆಚ್ಚು ಸ್ಪಂದಿಸದೆ ಸುಮ್ಮನಾಗಿದ್ದಾರೆ. ಇದೆಲ್ಲದಕ್ಕೂ ಮುನ್ನ ಮನೆಯ ಹೊರಗಡೆ ಕುಳಿತು ತುಕಾಲಿ ಸಂತೋಷ್, ವರ್ತೂರ್ ಸಂತೋಷ್ ಮತ್ತು ಕಾರ್ತಿಕ್ ಕಾಗೆ-ಕೋಗಿಲೆ ಬಗ್ಗೆ ಮಾತನಾಡಿಕೊಂಡಿದ್ದಾರೆ.
ವರ್ತೂರ್ ಸುದೀರ್ಘವಾಗಿ ಹೇಳಿದ ಕಾಗೆ ಮತ್ತು ಕೋಗಿಲೆ ಕಥೆಗೆ ತಲೆಯಾಡಿಸಿದ ಕಾರ್ತಿಕ್, ತುಕಾಲಿ ಕಡೆಯದಾಗಿ ನಸುನಕ್ಕು ಇಲ್ಲಿ ಕಾಗೆ ಯಾರು? ಕೋಗಿಲೆ ಯಾರು? ಎಂದು ಕೇಳಿದ್ದಾರೆ. ಅಸಲಿಗೆ ಮನೆಯೊಳಗಿನ ಕಾಗೆ ಮತ್ತು ಕೋಗಿಲೆ ಯಾರಾಗಿರಬಹುದು ಎಂಬ ಕುತೂಹಲ ವೀಕ್ಷಕರಲ್ಲಿ ಮೂಡಿದ್ದು, ಈ ವಿಷಯ ಕುರಿತು ವಾರಂತ್ಯದಲ್ಲಿ ಸುದೀಪ್ ಪ್ರಶ್ನಿಸಲಿದ್ದಾರಾ ಎಂಬುದನ್ನು ತಿಳಿಯಲು ಶನಿವಾರದ ಸಂಚಿಕೆಗೆ ಕಾಯಬೇಕಿದೆ.
ದಿನದ 24 ಗಂಟೆಗಳ ಲೈವ್ ಸ್ಟ್ರೀಮಿಂಗ್ ಜಿಯೋ ಸಿನಿಮಾದಲ್ಲಿ ಪ್ರಸಾರವಾಗುತ್ತಿದೆ.