

ಬೆಂಗಳೂರು: ಭರಪೂರ ಭಾವುಕತೆಯಲ್ಲಿಯೇ ಈ ವಾರ ಕಳೆದಿದೆ. ಬಿಗ್‌ಬಾಸ್ ಮನೆಯೊಳಗೆ ಪ್ರವೇಶಿಸಿದ ಎಲ್ಲ ಸದಸ್ಯರ ಕುಟುಂಬದವರು, ಪ್ರತಿ ಸದಸ್ಯರಿಗೂ ಕಿವಿಮಾತು ಹೇಳಿ ಹೋಗಿದ್ದಾರೆ. ಬಿಗ್‌ಬಾಸ್ ಕುಟುಂಬದ ಬಂಧವನ್ನು ಇನ್ನಷ್ಟು ಗಟ್ಟಿ ಮಾಡಿದ್ದಾರೆ. ವಾರವಿಡೀ ಹಲವು ಹೃದಯಸ್ಪರ್ಶಿ ಸನ್ನಿವೇಶಗಳಿಗೆ ಸಾಕ್ಷಿಯಾಗಿದ್ದ ಮನೆ ಇದೀಗ ವಾರಾಂತ್ಯದಲ್ಲಿ ಮತ್ತೆ ಮೊದಲಿನ ಹಳಿಗೆ ಮರಳುತ್ತಿದೆ.
‘ಕ್ಯಾಪ್ಟನ್ ಯಾರು?’ ಈ ಪ್ರಶ್ನೆ ಈಗ ಎಲ್ಲರನ್ನೂ ಕಾಡುತ್ತಿದೆ. ಈ ಪ್ರಶ್ನೆಗೆ ಉತ್ತರದ ಜತೆಗೆ ಕಿಚ್ಚನ ವಾರಾಂತ್ಯದ ಎಪಿಸೋಡ್‌ಗಳಲ್ಲಿ ಭಾಗಿಯಾಗಲು ಸ್ಪರ್ಧಿಗಳು ಕಾಯುತ್ತಿದ್ದಾರೆ. ಈ ವಾರ ಮನೆಯೊಳಗೆ ಬಂದ ಸ್ಪರ್ಧಿಗಳ ಕುಟುಂಬದವರಿಗೆ ಒಂದು ಪ್ರಶ್ನೆ ಕೇಳಲಾಗಿತ್ತು. ಅವರ ಕುಟುಂಬದ ಸದಸ್ಯರನ್ನು ಹೊರತುಪಡಿಸಿ ಬೇರೆ ಯಾರು ಈ ಮನೆಯ ಕ್ಯಾಪ್ಟನ್ ಆಗಬೇಕು ಎಂದು ಬಯಸುತ್ತೀರಿ? ಎಂಬ ಪ್ರಶ್ನೆಗೆ ಎಲ್ಲರೂ ತಮ್ಮ ಅಭಿಪ್ರಾಯ ಸೂಚಿಸಿದ್ದರು.
ಅದರ ಅನುಸಾರ ಸಂಗೀತಾ, ತನಿಷಾ ಮತ್ತು ಪ್ರತಾಪ್ ಹೆಸರು ಅತಿ ಹೆಚ್ಚು ಸಲ ಕೇಳಿಬಂದಿತ್ತು. ಹಾಗಾಗಿ ಈ ಮೂವರು ಕ್ಯಾಪ್ಟನ್ಸಿ ಟಾಸ್ಕ್‌ನಲ್ಲಿ ಆಡಲು ಸಜ್ಜಾಗಿದ್ದರು. ಈ ನಡುವೆ ಬಿಗ್‌ಬಾಸ್ ಇನ್ನೊಂದು ಶಾಕ್ ಕೊಟ್ಟಿದ್ದಾರೆ. ಮನೆಯ ಸದಸ್ಯರಿಗೆ ಈ ಮೂವರ ಪೈಕಿ ಕ್ಯಾಪ್ಟನ್ಸಿ ಟಾಸ್ಕ್‌ನಲ್ಲಿ ಯಾರು ಆಡುವುದು ಬೇಡ ಎಂಬುದನ್ನು ಸೂಚಿಸಲು ತಿಳಿಸಿದ್ದಾರೆ.
ಆಗ ಎಲ್ಲರೂ ಸೂಚಿಸಿದ್ದು ಪ್ರತಾಪ್ ಹೆಸರನ್ನು ಮಾತ್ರ! ‘ಪ್ರತಾಪ್ ಅಧಿಕಾರ ಸಿಕ್ಕ ಕೂಡಲೇ ಸ್ಟ್ರಿಕ್ಟ್ ಆಗಿಬಿಡ್ತಾರೆ’, ‘ಅವರು ಮೂಡಿ’, ‘ಪದೇ ಪದೇ ಮೂಡ್‌ಸ್ವಿಂಗ್ ಆಗುತ್ತಿರುತ್ತದೆ’ ಹೀಗೆಲ್ಲ ಹಲವು ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ್ದಾರೆ. ಇದರಿಂದ ಪ್ರತಾಪ್ ಮನಸ್ಸಿಗೆ ಬೇಸರವಾಗಿದ್ದು, ಕೆಲವರೊಂದಿಗೆ ಅವರ ಹೇಳಿಕೆಯನ್ನು ಪ್ರಶ್ನಿಸಿ ಮಾತನಾಡಿದ್ದಾರೆ.
ಬಹುಶಃ ಈ ವಾರ ಮನೆಯ ಸದಸ್ಯರ ಅಭಿಪ್ರಾಯದ ಮೇರೆಗೆ ಪ್ರತಾಪ್ ಕ್ಯಾಪ್ಟನ್ಸಿ ಟಾಸ್ಕ್‌ನಿಂದ ಹೊರಗೆ ಉಳಿಯಬಹುದು. ಸಂಗೀತಾ ಮತ್ತು ತನಿಷಾ ಕ್ಯಾಪ್ಟನ್ಸಿ ಟಾಸ್ಕ್ ಆಡಬಹುದು ಎಂಬುದು ಸದ್ಯದ ಲೆಕ್ಕಾಚಾರ! ಈ ಇಬ್ಬರಲ್ಲಿ ಯಾರು ಈ ವಾರದ ಕ್ಯಾಪ್ಟನ್ ಆಗಲಿದ್ದಾರೆ ಎಂಬುದನ್ನು ಇಂದಿನ ಸಂಚಿಕೆಯಲ್ಲಿ ಕಾದು ನೋಡಬೇಕಿದೆ.
ದಿನದ 24 ಗಂಟೆಗಳ ಲೈವ್ ಸ್ಟ್ರೀಮಿಂಗ್ ಜಿಯೋ ಸಿನಿಮಾದಲ್ಲಿ ಪ್ರಸಾರವಾಗುತ್ತಿದೆ.