BBKS10: ಬಿಗ್ ಬಾಸ್ ಮನೆಯಲ್ಲಿ ಹರಿಯಿತು ಕಣ್ಣೀರ ಕೋಡಿ!

Untitled design - 2023-10-25T095043.408
Published on

ಬೆಂಗಳೂರು: ಬಿಗ್​ ಬಾಸ್​ ಕನ್ನಡ ಸೀಸನ್​ 10 ಶುರುವಾದ ಮೊದಲ ದಿನದಿಂದಲೂ ಹಲವು ರೋಚಕ ತಿರುವುಗಳನ್ನು ಪಡೆದುಕೊಳ್ಳುತ್ತಿದ್ದು, ಮನೆಯ ಸದಸ್ಯರ ನಡುವೆ ವಾದ-ವಿವಾದಗಳಿಗಿಂತ ತರ್ಲೆ, ತಮಾಷೆ ಹೆಚ್ಚಿದೆ. ದಸರಾ ಹಬ್ಬವನ್ನು ಸಿಹಿ ತಿಂದು ಖುಷಿಯಿಂದ ಸಂಭ್ರಮಿಸಿದ ಎಲ್ಲಾ ಸ್ಪರ್ಧಿಗಳು ಇದೀಗ ಮನೆಯ ಹೊರಗಡೆ ತಮ್ಮ ನೆನಪುಗಳನ್ನು ಮೆಲುಕು ಹಾಕುತ್ತ ಕಣ್ಣೀರಿಟ್ಟಿದ್ದಾರೆ.

ಬಿಗ್ ಬಾಸ್ ಮನೆಯಲ್ಲಿ ತಣ್ಣನೆಯ ರಾತ್ರಿ. ಆದರೆ ಎಲ್ಲರ ಕಣ್ಣಲ್ಲೂ ಕೋಡಿಯಾಗಿ ಹರಿಯುತ್ತಿದೆ ಬಿಸಿಯಾದ ಕಂಬನಿ. ಎದುರಲ್ಲಿ ಕ್ಯಾಂಪ್​ ಫೈರ್​ನೊಳಗೆ ಧಗಧಗನೆ ಬೆಂಕಿ ಉರಿಯುತ್ತಿದ್ದರೆ, ಸ್ಪರ್ಧಿಗಳೆಲ್ಲ ಕುಟುಂಬದವರ ನೆನಪಲ್ಲಿ ಕರಗಿ ಕಣ್ಣೀರಾಗಿ ಹರಿಯುತ್ತಿದ್ದಾರೆ.

ಅಪ್ಪ-ಅಮ್ಮನಿಗೆ ಕೊಟ್ಟ ಮಾತು, ಸಂಗಾತಿಯ ನೆನಪು, ಈಡೇರದೇ ಉಳಿದುಬಿಟ್ಟ ಭಾಷೆ, ಕೊನೆಗೂ ಒಪ್ಪಿಕೊಳ್ಳದೇ ತಮ್ಮೊಳಗೆ ಒಂದಾಗಿಸಿಕೊಂಡು ಅಪ್ಪಿಕೊಳ್ಳದೇ ಹೋದ ಕುಟುಂಬ, ಹೆತ್ತವರ ಬೆಂಬಲಕ್ಕೆ ಪ್ರತಿಫಲ ನೀಡಲಾಗದ ಅಸಹಾಯಕತೆ. ಒಬ್ಬೊಬ್ಬರ ಹೃದಯದಲ್ಲಿಯೂ ಹೇಳಿಕೊಳ್ಳದೇ ಉಳಿದಿರುವ ಅದೆಷ್ಟೋ ಕಥೆಗಳು ಇದೀಗ ಹೊರಬಂದಿವೆ.

ಮನುಷ್ಯ ಮನುಷ್ಯರ ನಡುವಿನ ಗೋಡೆ ಒಡೆಯಲು ನೋವಿಗಿಂತ ಬೇರೆ ಆಯುಧ ಬೇಕೆ? ಅಗ್ಗಷ್ಟಿಕೆಯ ಬೆಳಕಲ್ಲಿ, ನೆನಪುಗಳ ಕಾವಿನಲ್ಲಿ ನೋವಿನ ನೆಪದಲ್ಲಿ ಮನೆಯ ಸ್ಪರ್ಧಿಗಳೆಲ್ಲ ಒಂದಾಗಿದ್ದಾರೆ. ಒಬ್ಬರ ಕಣ್ಣೀರಿಗೆ ಇನ್ನೊಬ್ಬರು ಹೆಗಲೊಡ್ಡಿದ್ದಾರೆ. ಒಬ್ಬರಿಗೊಬ್ಬರು ಒದಗಿಬರುತ್ತ ಎಲ್ಲರೂ ಒಂದೇ ಆಗಿದ್ದಾರೆ. ಬಿಗ್ ಬಾಸ್ ಮನೆಯೊಳಗಿನ ಪ್ರತಿ ಗಳಿಗೆಯೂ ವ್ಯಕ್ತಿತ್ವ ಪರೀಕ್ಷೆಯ ಅಗ್ನಿದಿವ್ಯವೇ, ಈ ಆಟದಲ್ಲಿ ಒಂದಾಗಿರುವವರು ಮತ್ತೆ ಬೇರಾಗುತ್ತಾರಾ? ಪರಸ್ಪರ ಹೆಗಲುಕೊಟ್ಟವರು ತೊಡೆ ತಟ್ಟಿ ನಿಲ್ಲುತ್ತಾರಾ? ಎಂಬುದನ್ನು ಕಾದುನೋಡಬೇಕಿದೆ.

ದಿನದ 24 ಗಂಟೆಗಳ ನೇರ ಪ್ರಸಾರವನ್ನು ಜಿಯೋ ಸಿನಿಮಾದಲ್ಲಿ ವೀಕ್ಷಿಸಬಹುದು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net