

ವಿಜಯಪುರ: ಮುಖ್ಯಮಂತ್ರಿ ಬದಲಾವಣೆ ಬಗ್ಗೆ ಪ್ರಸ್ತಾಪಿಸಿ ಸ್ವಪಕ್ಷೀಯರಿಂದಲೇ ತೀವ್ರ ಟೀಕೆಗೆ ಗುರಿಯಾಗಿದ್ದ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಇದೀಗ ಟ್ವೀಟ್ ಮೂಲಕ ಮತ್ತೊಮ್ಮೆ ಗುಡುಗಿದ್ದಾರೆ.
ಮಂಗಳವಾರ ರಾತ್ರಿ 11.30ಕ್ಕೆ ಟ್ವೀಟ್ ಮಾಡಿರುವ ಪಾಟೀಲ್, ಕರ್ನಾಟಕದ ಅಭಿವೃದ್ಧಿ ಹಾಗೂ ಜನರ ಧ್ವನಿಯಾಗಿ, ಆತ್ಮಸಾಕ್ಷಿಯಾಗಿ, ಜನಪ್ರತಿನಿಧಿಯಾಗಿ ಕೆಲಸ ಮಾಡುತ್ತಿದ್ದೇನೆ ಹೊರತು, ಸಚಿವನಾಗುವುದಕ್ಕೆ ಯಾರದೋ ಕಾಲು ಹಿಡಿದು, ತಲೆ ಹಿಡಿಯುವ ಕೆಲಸ ಮಾಡಿಲ್ಲ. ಅದು ನನ್ನ ಜಾಯಮಾನವೂ ಅಲ್ಲ ಎಂದು ಆಕ್ರೋಶ ಹೊರಹಾಕಿದ್ದಾರೆ.
ಬಿ.ಎಸ್. ಯಡಿಯೂರಪ್ಪ ಸಿಎಂ ಆಗಿ ಬಹಳ ದಿನ ಉಳಿಯಲ್ಲವೆಂದು ನಿನ್ನೆಯಷ್ಟೇ ಯತ್ನಾಳ್ ಹೇಳಿಕೆ ನೀಡಿದ್ದರು. ಈ ವಿಚಾರ ಬಿಜೆಪಿಯಲ್ಲಿ ಸಾಕಷ್ಟು ಚರ್ಚೆಗೆ ಗ್ರಾಸವಾಗಿತ್ತು. ಸಿಎಂ ಬಿಎಸ್ವೈಗೂ ಇರಿಸು-ಮುರಿಸು ತಂದಿತ್ತು. ಯತ್ನಾಳ್ ಅವರನ್ನ ಕರೆಸಿ ಮಾತಾಡ್ತಿನಿ ಎಂದು ಸಿಎಂ ಬಿಎಸ್ವೈ ಹೇಳಿದ್ದರು. ನಿನ್ನೆ ಸಿಎಂ ರಾಜಕೀಯ ಕಾರ್ಯದರ್ಶಿ ಯತ್ನಾಳರನ್ನು ಭೇಟಿ ಮಾಡಿ ಮಾತನಾಡಿದ್ದರು.