More

    ಜಡ್ಜ್​ಗೆ ಬೆದರಿಕೆ ಪತ್ರ: ಷಡ್ಡಕನ ಸಿಕ್ಕಿಸಲು ಹೋಗಿ ಸಿಕ್ಕಿಬಿದ್ದ, ಆಸ್ತಿಗಾಗಿ ನಾದಿನಿ ಮೇಲೆ ಕಣ್ಣು

    ಬೆಂಗಳೂರು: ಡ್ರಗ್ಸ್ ಪ್ರಕರಣದಲ್ಲಿ ಬಂಧಿತರಾಗಿರುವ ನಟಿ ಸಂಜನಾ ಗಲ್ರಾನಿ ಹಾಗೂ ರಾಗಿಣಿ ದ್ವಿವೇದಿಗೆ ಜಾಮೀನು ನೀಡದಿದ್ದರೆ ಕಾರಿಗೆ ಬಾಂಬ್ ಇಟ್ಟು ಸ್ಪೋಟಿಸುವುದಾಗಿ ಎನ್​ಡಿಪಿಎಸ್ ಕೋರ್ಟ್ ನ್ಯಾಯಾಧೀಶರಿಗೆ ಬೆದರಿಕೆ ಪತ್ರ ಬರೆದಿದ್ದ ಆರೋಪಿ ಕೇಂದ್ರ ವಿಭಾಗದ ಪೊಲೀಸರ ಅತಿಥಿಯಾಗಿದ್ದಾನೆ. ಆಸ್ತಿ ವಿಚಾರದ ಗಲಾಟೆ ಸಂಬಂಧ ಷಡ್ಡಕನ ಸಿಕ್ಕಿಸಲು ಹೋಗಿ ತಾನೇ ಸಿಕ್ಕಿಬಿದ್ದಿದ್ದಾನೆ.

    ತಿಪಟೂರಿನ ಲಿಂಗದಹಳ್ಳಿ ರಾಜಶೇಖರ್ (45) ಬಂಧಿತ. ಆಸ್ತಿ ವಿಚಾರವಾಗಿ ಷಡ್ಡಕನ ಮೇಲೆ ದ್ವೇಷ ಇಟ್ಟುಕೊಂಡಿದ್ದ ಆರೋಪಿ, ಆತನನ್ನು ಅಪರಾಧ ಪ್ರಕರಣದಲ್ಲಿ ಸಿಲುಕಿಸಬೇಕೆಂಬ ಉದ್ದೇಶದಿಂದ ಕೃತ್ಯ ಎಸಗಿರುವುದು ತನಿಖೆಯಿಂದ ಗೊತ್ತಾಗಿದೆ. ರಾಜಶೇಖರ್​ನ ಕೃತ್ಯಕ್ಕೆ ಸಹಕರಿಸಿದ್ದ ಓರ್ವನನ್ನು ವಶಕ್ಕೆ ಪಡೆಯಲಾಗಿದೆ. ಆತನ ಪಾತ್ರದ ಬಗ್ಗೆ ವಿಚಾರಣೆ ನಡೆಸಲಾಗುತ್ತಿದೆ ಎಂದು ಕೇಂದ್ರ ವಿಭಾಗದ ಡಿಸಿಪಿ ಎಂ.ಎನ್. ಅನುಚೇತ್ ತಿಳಿಸಿದ್ದಾರೆ.

    ನಟಿ ಸಂಜನಾ ಗಲ್ರಾನಿ ಮತ್ತು ರಾಗಿಣಿ ದ್ವಿವೇದಿಗೆ ಜಾಮೀನು ನೀಡಬೇಕು. ಯಾವುದೇ ರೀತಿಯ ಕೊಲೆ, ಸುಲಿಗೆ, ದರೋಡೆ ಪ್ರಕರಣಗಳಲ್ಲಿ ಬಂಧಿತರಾಗುವ ಆರೋಪಿಗಳನ್ನು ಬಿಟ್ಟು ಕಳುಹಿಸಬೇಕು. ಇಲ್ಲವಾದರೆ ಕಾರಿನ ಇಂಜಿನ್​ನಲ್ಲಿ ಬಾಂಬ್ ಇಟ್ಟು ಸ್ಪೋಟಿಸುತ್ತೇನೆ ಎಂದು ಚೇಳೂರಿನ ರಮೇಶ್ ಮತ್ತು ಆತನ ಸಹೋದರನ ಹೆಸರಿನಲ್ಲಿ ರಾಜಶೇಖರ್ 33ನೇ ಸಿಸಿಎಚ್ ನ್ಯಾಯಾಧೀಶರಿಗೆ ಪತ್ರ ಬರೆದಿದ್ದ. ಪತ್ರದ ಜೊತೆಗೆ ಕೆಲ ಸ್ಪೋಟಕ ರೀತಿಯ ವಸ್ತುಗಳನ್ನು ಕಳುಹಿಸಿದ್ದ. ಈ ಕುರಿತು ಹಲಸೂರು ಗೇಟ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ಎಸಿಪಿ ನಜ್ಮಾ ಫಾರೂಕ್ ನೇತೃತ್ವದ ಪೊಲೀಸರ ವಿಶೇಷ ತಂಡ ಕಾರ್ಯಾಚರಣೆ ಕೈಗೊಂಡಿತ್ತು.

    ತಿಪಟೂರಿನಲ್ಲಿ ರಮೇಶ್ ಮತ್ತು ಆತನ ಸಹೋದರನನ್ನು ಪತ್ರದ ಕುರಿತು ವಿಚಾರಿಸಲಾಗಿತ್ತು. ತಮಗೂ ಪತ್ರಕ್ಕೂ ಯಾವುದೇ ಸಂಬಂಧವಿಲ್ಲವೆಂದ್ದಿದ್ದ ರಮೇಶ್, ಷಡ್ಡಕನ ಕೃತ್ಯವಿರಬಹುದೆಂದು ಹೇಳಿದ್ದ. ರಾಜಶೇಖರ್​ನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಕೃತ್ಯ ಒಪ್ಪಿಕೊಂಡಿದ್ದಾನೆ ಎಂದು ಡಿಸಿಪಿ ಮಾಹಿತಿ ನೀಡಿದ್ದಾರೆ.

    ಆಸ್ತಿಗಾಗಿ ನಾದಿನಿ ಮೇಲೆ ಕಣ್ಣು

    ಆರೋಪಿ ರಾಜಶೇಖರ್ ತಿಪಟೂರಿನ ಲಿಂಗದಹಳ್ಳಿಯಲ್ಲಿ ಕೃಷಿ ಮಾಡಿಕೊಂಡಿದ್ದಾನೆ. 10 ವರ್ಷಗಳ ಹಿಂದೆ ಗುಬ್ಬಿ ತಾಲೂಕಿನ ಕುರೆಹಳ್ಳಿಯ ನಿವಾಸಿಯೊಬ್ಬರ ಹಿರಿಯ ಪುತ್ರಿಯನ್ನು ವಿವಾಹವಾಗಿದ್ದ. ಆಕೆಗೆ ತಂಗಿ ಇದ್ದು ಸಹೋದರರು ಇರಲಿಲ್ಲ. ಅಕ್ಕ, ತಂಗಿ ಹಾಗೂ ಅವರ ತಂದೆ ಹೆಸರಿನಲ್ಲಿ ಕೋಟ್ಯಂತರ ರೂಪಾಯಿ ಆಸ್ತಿ ಇತ್ತು. ಅದನ್ನು ಕಬಳಿಸಲು ಸಂಚು ರೂಪಿಸಿದ್ದ ರಾಜಶೇಖರ್, ನಾದಿನಿ ಮೇಲೆ ಕಣ್ಣು ಹಾಕಿದ್ದ. ಆಕೆಯನ್ನೂ ಮದುವೆಯಾದರೆ ಎಲ್ಲ ಆಸ್ತಿ ತನಗೆ ಸಿಗುತ್ತದೆ ಎಂದು ಯೋಚಿಸಿದ್ದ. ಮದುವೆಯಾಗಲು ಹಲವು ಬಾರಿ ಪ್ರಯತ್ನಿಸಿದ್ದನಾದರೂ ಸಾಧ್ಯವಾಗಿರಲಿಲ್ಲ. ಕೆಲ ತಿಂಗಳ ಹಿಂದೆ ರಮೇಶ್​ನನ್ನು ನಾದಿನಿ ಮದುವೆಯಾಗಿದ್ದಳು. ಆಸ್ತಿ ಕೈ ತಪ್ಪಿತು ಎಂದು ರಾಜಶೇಖರ್ ಕುಪಿತನಾಗಿದ್ದ. ಮಾವ ಮತ್ತು ಷಡ್ಡಕ ರಮೇಶ್ ಮೇಲೆ ಸಿಟ್ಟಾಗಿದ್ದ. ಆಸ್ತಿ ವಿಚಾರವಾಗಿ ಹಲವು ಬಾರಿ ಗಲಾಟೆ ಮಾಡಿಕೊಂಡಿದ್ದರೂ ಆಸ್ತಿ ಸಿಕ್ಕಿರಲಿಲ್ಲ. ಷಡ್ಡಕನನ್ನು ಅಪರಾಧ ಪ್ರಕರಣದಲ್ಲಿ ಸಿಲುಕಿಸಿ ಜೈಲಿಗೆ ಕಳುಹಿಸಿದರೆ ಆಸ್ತಿ ದಕ್ಕಬಹುದೆಂದು ಯೋಚಿಸಿದ್ದ. ನ್ಯಾಯಾಧೀಶರಿಗೆ ಬೆದರಿಕೆ ಪತ್ರ ಬರೆದು, ಅದಕ್ಕೆ ರಮೇಶ್​ನ ಚುನಾವಣಾ ಗುರುತಿನ ಚೀಟಿ ಅಂಟಿಸಿ ಕಳುಹಿಸಿದ್ದ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

    20 ವರ್ಷಗಳಿಂದ ಅಪರಾಧ ಕೃತ್ಯ

    ಆರೋಪಿ ರಾಜಶೇಖರ್ ಕಳೆದ 20 ವರ್ಷಗಳಿಂದ ಹಲವು ಅಪರಾಧ ಕೃತ್ಯ ಎಸಗುತ್ತಿದ್ದ. 1999ರಲ್ಲಿ ತಿಪಟೂರಿನಲ್ಲಿ ತಾಮ್ರದ ತಂತಿ ಕಳವು ಮಾಡಿದ್ದ. ಜಮೀನು ದಾಖಲಾತಿಗಳನ್ನು ನಕಲು ಮಾಡಿದ್ದು, ಈ ಕುರಿತು ತಿಪಟೂರು ಗ್ರಾಮಾಂತರ ಠಾಣೆಯಲ್ಲಿ ಎಫ್​ಐಆರ್ ದಾಖಲಾಗಿದೆ. ನೀರಿನ ವಿಚಾರಕ್ಕೆ ಗ್ರಾಪಂ ಸಿಬ್ಬಂದಿ ಮೇಲೆ ಹಲ್ಲೆ ನಡೆಸಿದ್ದು, ಎಸ್​ಸಿ-ಎಸ್​ಟಿ ದೌರ್ಜನ್ಯ ತಡೆ ಕಾಯ್ದೆ ಅಡಿ ಪ್ರಕರಣ ದಾಖಲಾಗಿದೆ. 2013ರಲ್ಲಿ ಜಮೀನು ವಿವಾದಕ್ಕೆ ಚರ್ಚ್​ಗೆ ಬೆಂಕಿ ಹಚ್ಚಿದ್ದ. ನಾದಿನಿಗೆ ಲೈಂಗಿಕ ಕಿರುಕುಳ ಎಸಗಿದ್ದ ಆರೋಪದ ಮೇಲೆ ಪೋಕ್ಸೋ ಕಾಯ್ದೆಯಡಿ ಎಫ್​ಐಆರ್ ದಾಖಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

    ಕೋರ್ಟ್​ನಲ್ಲಿ ಭದ್ರತೆ

    ಬೆದರಿಕೆ ಪತ್ರವನ್ನು ನಗರ ಪೊಲೀಸರು ಗಂಭೀರವಾಗಿ ಪರಿಗಣಿಸಿದ್ದರು. ಸಿಟಿ ಕೋರ್ಟ್, ಹೈಕೋರ್ಟ್, ಕಮಿಷನರ್ ಕಚೇರಿಯಲ್ಲಿ ಮಂಗಳವಾರ ಬಿಗಿ ಬಂದೋಬಸ್ತ್ ಏರ್ಪಡಿಸಲಾಗಿತ್ತು. ಶ್ವಾನದಳ ಹಾಗೂ ಬಾಂಬ್ ನಿಷ್ಕ್ರಿಯ ದಳ ತಪಾಸಣೆ ನಡೆಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts