ಡಿಕೆಶಿಗೆ ಸವಾಲ್ ಹಾಕುತ್ತೇನೆ… ಲಿಂಗಾಯತ ಡ್ಯಾಂನಿಂದ ಒಂದು ಚಿಪ್ಪು ಕಲ್ಲನ್ನೂ ತೆಗೆಯಲು ಸಾಧ್ಯವಿಲ್ಲ; ಯತ್ನಾಳ್

Basangouda Patil Yatnal
Published on

ವಿಜಯಪುರ: ಲಿಂಗಾಯತ ಡ್ಯಾಂ ಒಡೆಯಲು ಜಗತ್ತಿನ ಯಾವ ಶಕ್ತಿಯಿಂದಲೂ ಸಾಧ್ಯವಿಲ್ಲ. ಲಿಂಗಾಯತ ಡ್ಯಾಂನಿಂದ ಒಂದೇ ಒಂದು ಚಿಪ್ಪು ಕಲ್ಲು ತೆಗೆಯಲು ಯಾರಿಂದಲೂ ಸಾಧ್ಯವಿಲ್ಲ ಎಂದು ಹೇಳುವ ಮೂಲಕ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್​ ವಿರುದ್ಧ ಗುಡುಗಿದ್ದಾರೆ. ಡಿಕೆಶಿ ಮಾತನಾಡುತ್ತಾ, ಲಿಂಗಾಯತ ಡ್ಯಾಂ ಒಡೆಯುತ್ತೇವೆ ಎಂದು ಹೇಳಿದ್ದರು.

ಲಿಂಗಾಯತ ಸಿಎಂ ಭ್ರಷ್ಟರು ಎಂಬುದು ಎಷ್ಟು ಸರಿ?

ವಿಜಯಪುರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡುತ್ತಾ, ಲಿಂಗಾಯತರೆಲ್ಲರೂ ಭ್ರಷ್ಟರು ಎಂದು ಸಿದ್ದರಾಮಯ್ಯ ಹೇಳಿದ್ದಾರೆ. ಇವರ ದ್ವೇಷ ಇದ್ದರೆ ವ್ಯಕ್ತಿಗತವಾಗಿ, ವೈಯಕ್ತಿಕವಾಗಿ ಮಾತಾಡಬೇಕು. ಅದು ಬಿಟ್ಟು ಎಲ್ಲಾ ಲಿಂಗಾಯತ ಸಿಎಂ ಭ್ರಷ್ಟರು ಎಂಬುದು ಎಷ್ಟು ಸರಿ ಎಂದು ಶಾಸಕ ಯತ್ನಾಳ್ ಪ್ರಶ್ನಿಸಿದರು.

ಧರ್ಮ ಒಡೆಯಲು ನಿಂತವರಿಗೆ ಜನರೇ ಪಾಠ ಕಲಿಸುತ್ತಾರೆ

ಧರ್ಮ ಒಡೆಯಲು ನಿಂತವರಿಗೆ ಕಳೆದ ಬಾರಿ ಜನರೇ ಪಾಠ ಕಲಿಸಿದ್ದಾರೆ. ಹೀಗಾಗಿಯೇ ಹೋದ ಚುನಾವಣೆಯಲ್ಲಿ ಲಿಂಗಾಯತರು ಶಕ್ತಿ ಪ್ರದರ್ಶನ ಮಾಡಿದ್ದಾರೆ. ಸಿದ್ದರಾಮಯ್ಯ ಅವರ ಹೇಳಿಕೆ ಮೂಲಕ ವೀರಶೈವ ಲಿಂಗಾಯತ ಸಮಾಜಕ್ಕೆ ಅಪಮಾನ ಮಾಡಿದ್ದಾರೆ. ಲಿಂಗಾಯತರನ್ನು ಒಡೆಯುವುದು, ಹಿಂದು ಧರ್ಮಕ್ಕೆ ಅಪಮಾನ ಮಾಡುವ ಕೆಲಸ ಆಗಬಾರದು. ಈ ಕೂಡಲೇ ಸಿದ್ದರಾಮಯ್ಯ ರಾಜ್ಯದ ಜನರ ಕ್ಷಮೆ ಕೇಳಬೇಕು ಎಂದು ಯತ್ನಾಳ್ ಒತ್ತಾಯಿಸಿದರು.

ರಾಹುಲ್ ನಮ್ಮ ಸ್ಟಾರ್​ ಕ್ಯಾಂಪೇನರ್

ರಾಹುಲ್ ವಿಜಯಪುರಕ್ಕೆ ಆಗಮನ ವಿಚಾರವಾಗಿ ಮಾತನಾಡುತ್ತಾ, ಕಾಂಗ್ರೆಸ್ ನಾಯಕನನ್ನು ಜಿಲ್ಲೆಗೆ ಸ್ವಾಗತಿಸುತ್ತೇನೆ. ರಾಹುಲ್ ಗಾಂಧಿ ಹೋದಲ್ಲೆಲ್ಲಾ ಕಾಂಗ್ರೆಸ್ ಸೋಲುತ್ತದೆ. ಅವರು ಬಿಜೆಪಿ ಪಕ್ಷಕ್ಕೆ ಸ್ಟಾರ್ ಕ್ಯಾಂಪೇನರ್ ಇದ್ದಂತೆ. ಮೊದಲು 15 ಸಾವಿರ ಮತಗಳ ಅಂತರದಿಂದ ಗೆಲ್ಲುತ್ತೇನೆ ಎಂದು ನಿರ್ಧರಿಸಿದ್ದೆ. ಇದೀಗ ರಾಹುಲ್ ಬಂದ ಬಳಿಕ 50 ಸಾವಿರ ಮತಗಳ ಅಂತರ ಬರುತ್ತದೆ ಎಂದರು ಯತ್ನಾಳ್ ವ್ಯಂಗ್ಯವಾಡಿದರು.

ಚಿತ್ರ ನಟರಿಗಿಂತ ನಾನೇನು ಕಡಿಮೆ ಇಲ್ಲ!

ನನಗೆ ಪ್ರಧಾನಿ ಮೋದಿ, ಅಮಿತ್ ಷಾ ಮಾತ್ರ ಪ್ರಚಾರಕ್ಕೆ ಸಾಕು. ಯಾವುದೇ ಸಿನಿಮಾ ನಟರು ಬೇಡ ಎಂದು ನಮ್ಮ ನಾಯಕರಿಗೆ ಈಗಾಗಲೇ ಹೇಳಿದ್ದೇನೆ. ಚಿತ್ರ ನಟರಿಗಿಂತ ನಾನೇನು ಕಡಿಮೆ ಇಲ್ಲ. ನಿರ್ದೇಶನ, ನಟನೆ, ಕಥಾ ಸಂಕಲನ ನಾನೇ ಮಾಡುತ್ತೇನೆ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net