More

    ಬೃಹತ್​ ಹಾರ ತಯಾರಕರಿಗೆ ಡಿಮಾಂಡಪ್ಪೋ ಡಿಮಾಂಡ್​; 10 ಸಾವಿರದಿಂದ 1 ಲಕ್ಷ ರೂ. ಬೆಲೆ

    ಕೆ.ಎಸ್​.ಪ್ರಣವಕುಮಾರ್
    ​ಚಿತ್ರದುರ್ಗ: ರಾಜ್ಯದಲ್ಲಿ ಸೂರ್ಯನ ಪ್ರಖರತೆಯಷ್ಟೇ ವಿಧಾನಸಭಾ ಚುನಾವಣಾ ಕಾವು ನಿತ್ಯ ಏರಿಕೆಯಾಗುತ್ತಿದ್ದು, ಪಕ್ಷಗಳ ಪ್ರಮುಖ ನಾಯಕರು ಪ್ರಚಾರದಲ್ಲಿ ನಿರತರಾಗಿದ್ದಾರೆ. ಅವರನ್ನು ಸ್ವಾಗತಿಸಲು ನವನವೀನ ಮಾದರಿಯ ವೈವಿಧ್ಯಮಯ ಬೃಹದಾಕಾರದ ಮಾಲೆಗಳಿಗೆ ನಾಡಿನೆಲ್ಲೆಡೆ ಬೇಡಿಕೆ ಕಂಡು ಬರುತ್ತಿದೆ.

    ರಾಜ್ಯದ ಎಲ್ಲ ಜಿಲ್ಲೆಗಳಲ್ಲೂ ವಿವಿಧ ಫ್ಲವರ್​ ಸ್ಟಾಲ್​ಗಳಿಗೆ ಇಂತಹದ್ದೇ ಹಾರ ಬೇಕೆಂದು ಅಭಿಮಾನಿಗಳು ಬೇಡಿಕೆ ಮುಂದಿಡುತ್ತಿದ್ದಾರೆ. ಇದರಿಂದಾಗಿ ದಿನೇ ದಿನೆ ತಯಾರಕರಿಗೂ ಡಿಮಾಂಡ್​ ಸೃಷ್ಟಿಯಾಗಿದ್ದು, ಬಿಡುವಿಲ್ಲದೆ ಸಿದ್ಧತೆಯಲ್ಲಿ ತೊಡಗಿದ್ದಾರೆ. ಚುನಾವಣಾ ಪ್ರಚಾರ ಅಂತ್ಯದವರೆಗೂ ಇದು ಹೀಗೆ ಮುಂದುವರೆಯುವ ಸಾಧ್ಯತೆ ಇದೆ.

    ಇದನ್ನೂ ಓದಿ: ಆರ್​​ಎಸ್​​ಎಸ್​​ನವರು ನನ್ನ ಮೇಲೆ ನಿಗಾ ವಹಿಸಿ ಯಾವುದೇ ಪ್ರಯೋಜನವಿಲ್ಲ; ಜಗದೀಶ್ ಶೆಟ್ಟರ್

    50 ಸಾವಿರ ರೂ.ನಿಂದ 1 ಲಕ್ಷ ರೂ. ಮೌಲ್ಯದವರೆಗೂ ಖರ್ಚು

    ಇತ್ತೀಚಿನ ದಿನಗಳಲ್ಲಿ ಸೇಬಿನ ಹಾರದ ಟ್ರೆಂಡ್​ ಜೋರಾಗಿದೆ. ಒಣ ಕೊಬ್ಬರಿ, ಕಿತ್ತಳೆ, ಮೋಸುಂಬಿ, ಬೆಲ್ಲದ ಹಣ್ಣುಗಳ ಹಾರ ಕೂಡ ಇದಕ್ಕೆ ಹೊರತಾಗಿಲ್ಲ. ಸಾವಿರಾರು ಹಣ್ಣುಗಳಿಂದಲೇ ಒಂಬತ್ತರಿಂದ 15 ಎಳೆಯ ಬೃಹದಾಕಾರದ ಒಂದು ಮಾಲೆ ತಯಾರಿಸಲು 50 ಸಾವಿರ ರೂ.ನಿಂದ 1 ಲಕ್ಷ ರೂ. ಮೌಲ್ಯದವರೆಗೂ ಖರ್ಚಾಗುತ್ತಿದೆ.

    ಹಣಕ್ಕೆ ಲೆಕ್ಕ ಹಾಕದೆಯೆ ತಮಗಿಷ್ಟವಾದ ಹಾರಕ್ಕೆ ಬೇಡಿಕೆ

    ಅದೇ ರೀತಿ ಬೆಲ್ಲದ ಅಚ್ಚು, ಕ್ಯಾಪ್ಸಿಕಂ, ತಂಪು ಪಾನಿಯ ಪೊಟ್ಟಣ (ಜ್ಯೂಸ್​ ಪಾಕೆಟ್​), ಕೆಎಂಎಫ್​ ಗುಡ್​ಲೈಫ್​ ಹಾಲಿನ ಪೊಟ್ಟಣ, ಚಾಕೊಲೇಟ್​, ವಿವಿಧ ವರ್ಣದ ಪುಷ್ಪ ಹೀಗೆ ಅನೇಕ ಮಾದರಿಗಳಲ್ಲಿ ಅತ್ಯಾಕರ್ಷಕವಾಗಿ ಸಿದ್ಧಗೊಳ್ಳುತ್ತಿವೆ. ಗಾತ್ರ, ಎತ್ತರಕ್ಕೆ ಅನುಗುಣವಾಗಿ ಬೆಲೆ ನಿಗದಿಪಡಿಸುತ್ತಿದ್ದಾರೆ ತಯಾರಕರು. ಆದರೆ, ಅಭಿಮಾನಿಗಳು ಮಾತ್ರ ಹಣಕ್ಕೆ ಲೆಕ್ಕ ಹಾಕದೆಯೆ ತಮಗಿಷ್ಟವಾದ ಹಾರಕ್ಕೆ ಬೇಡಿಕೆ ಮಂಡಿಸುತ್ತಿದ್ದಾರೆ.

    ಬಿಜೆಪಿಯ ವಿಜಯ ಸಂಕಲ್ಪ ಯಾತ್ರೆ, ಕಾಂಗ್ರೆಸ್​ನ ಪ್ರಜಾಧ್ವನಿ, ಜೆಡಿಎಸ್​ನ ಪಂಚರತ್ನ ರಥಯಾತ್ರೆ, ಇತ್ತೀಚೆಗೆ ಅಭ್ಯರ್ಥಿಗಳ ನಾಮಪತ್ರ ಸಲ್ಲಿಕೆ ವೇಳೆ ಬೃಹತ್​ ರೋಡ್​ ಶೋ, ಅದ್ದೂರಿ ಸಮಾವೇಶಗಳು ಒಳಗೊಂಡು ರಾಜ್ಯದೆಲ್ಲೆಡೆ ಎರಡು ತಿಂಗಳಿನಿಂದಲೂ ತಯಾರಾದ ಹಾರಗಳ ಸಂಖ್ಯೆ ಎಂದಿಗಿಂತಲೂ ಅಧಿಕವಾಗಿದೆ.

    ಇದನ್ನೂ ಓದಿ: ಪ್ರಧಾನಿ ಹುದ್ದೆ ಕೊಟ್ಟರೂ ಬೇಡ! ಚಿಕ್ಕಪೇಟೆ ಕ್ಷೇತ್ರ ಬಿಟ್ಟು ಎಲ್ಲೂ ಹೋಗಲ್ಲ; ಕೆಜಿಎಫ್ ಬಾಬು

    ಬೃಹತ್​ ಹಾರಗಳ ಮೊರೆ ಹೋದ ಕಾರ್ಯಕರ್ತರು

    ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಸಚಿವ ಅಮಿತ್​ ಶಾ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಕಾಂಗ್ರೆಸ್​ ನಾಯಕರಾದ ರಾಹುಲ್​ ಗಾಂಧಿ, ಪ್ರಿಯಾಂಕಾ ಗಾಂಧಿ, ಮಲ್ಲಿಕಾರ್ಜುನ ರ್ಖಗೆ, ಡಿ.ಕೆ.ಶಿವಕುಮಾರ್​, ಜೆಡಿಎಸ್​ ವರಿಷ್ಠ ಎಚ್​.ಡಿ.ದೇವೇಗೌಡ, ಮಾಜಿ ಮುಖ್ಯಮಂತ್ರಿಗಳಾದ ಬಿ.ಎಸ್.ಯಡಿಯೂರಪ್ಪ, ಸಿದ್ದರಾಮಯ್ಯ, ಎಚ್​.ಡಿ.ಕುಮಾರಸ್ವಾಮಿ, ಆಮ್​ ಆದ್ಮಿ ಪಕ್ಷದ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್​, ಎಸ್​ಪಿ ಮತ್ತು ಬಿಎಸ್​ಪಿ ಒಳಗೊಂಡು ಸದ್ಯ ಪ್ರಚಾರದ ಭರಾಟೆಯಲ್ಲಿರುವ ನೆಚ್ಚಿನ ನಾಯಕರ ಮನಗೆಲ್ಲಲು ಅಭಿಮಾನಿಗಳು, ಕಾರ್ಯಕರ್ತರು ಬೃಹತ್​ ಹಾರಗಳ ಮೊರೆ ಹೋಗಿದ್ದಾರೆ.

    ಮಂಡ್ಯ, ಬೆಂಗಳೂರು, ಮೈಸೂರಿನಲ್ಲೂ ವಿಶೇಷ

    ಮಂಡ್ಯ, ಹಾಸನ, ರಾಮನಗರ, ಬೆಂಗಳೂರು, ಮೈಸೂರು, ಚಿತ್ರದುರ್ಗ, ಉತ್ತರ ಕರ್ನಾಟಕ ಭಾಗ ಸೇರಿ ಹಲವೆಡೆ ವಿಶೇಷ ಹಾರಗಳು ತಯಾರಾಗುತ್ತಿವೆ. ಜ್ಯೂಸ್​ ಪಾಕೆಟ್​, ಹಾಲಿನ ಪೊಟ್ಟಣ, ಕ್ಯಾಪ್ಸಿಕಂ, ತೆನೆ ಹಾರ ಗಮನಸೆಳೆದಿದೆ. ಸ್ವತ@ ಎಚ್​.ಡಿ.ಕುಮಾರಸ್ವಾಮಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಇದೇ ರೀತಿ ಯಡಿಯೂರಪ್ಪ, ಸಿದ್ದರಾಮಯ್ಯ ಕೂಡ ಅಭಿಮಾನಿಗಳ ಅಭಿಮಾನಕ್ಕೆ ಮನಸೋತಿದ್ದಾರೆ.

    ಇದನ್ನೂ ಓದಿ: ಕಾಂಗ್ರೆಸ್ ಪಕ್ಷವನ್ನು ಈ ಬಾರಿ ಮನೆಗೆ ಕಳಿಸುವುದು ಗ್ಯಾರಂಟಿ: ಸಿಎಂ ಬೊಮ್ಮಾಯಿ ವಾಗ್ದಾಳಿ

    ಹೂ ಬೆಳೆಗಾರರಿಗೂ ಅನುಕೂಲ

    ರಾಜ್ಯದಲ್ಲಿ 5 ಸಾವಿರ ರೂ.ನಿಂದ 30 ಸಾವಿರ ರೂ.ವರೆಗಿನ ಹೂವಿನ ಹಾರಗಳನ್ನು ಬೇಡಿಕೆ ಅನುಸಾರ ತಯಾರಿಸಲಾಗುತ್ತಿದ್ದು, ಇದರಿಂದಾಗಿ ನೂರಾರು ಹೂ ಬೆಳೆಗಾರರ ಮೊಗದಲ್ಲಿಯೂ ಒಂದಷ್ಟು ಮಂದಹಾಸ ಚುನಾವಣೆ ಕಾರಣಕ್ಕೆ ಬೀರಿದೆ. ಬಿಸಿಲು ಹೆಚ್ಚಳದಿಂದಾಗಿ ಈ ಬಾರಿ ಇಳುವರಿ ಕುಂಠಿತವಾಗಿದ್ದು, ಇದು ಪುಷ್ಪದರ ಹೆಚ್ಚಳಕ್ಕೂ ಕಾರಣವಾಗಿದೆ ಎನ್ನುತ್ತಾರೆ ಹೂ ಬೆಳೆಗಾರರಾದ ಬೆಂಗಳೂರಿನ ಮಂಜಪ್ಪ, ಚಿತ್ರದುರ್ಗದ ಶ್ರೀನಿವಾಸ್​.

    ಬೇಡಿಕೆಯಂತೆ 10 ಸಾವಿರ ರೂ.ನಿಂದ 30 ಸಾವಿರ ರೂ.ವರೆಗೂ ತಯಾರಿಸಿ ಬಳ್ಳಾರಿ, ದಾವಣಗೆರೆ, ವಿಜಯನಗರ ಜಿಲ್ಲೆಗೂ ಕಳುಹಿಸಿದ್ದೇವೆ. ಹಾರದ ಚಿತ್ರ ತೋರಿಸಿದರೆ ಅದರಂತೆ ಸಿದ್ಧಪಡಿಸಿ ಕೊಡುತ್ತೇವೆ.
    > ಕುಮಾರಣ್ಣ, ಶ್ರುತಿ ಫ್ಲವರ್​ ಸ್ಟಾಲ್​, ಚಿತ್ರದುರ್ಗ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts