'ಲಿಂಗಾಯತ ವೀರಶೈವ ಸಮಾಜದ ಮರ್ಯಾದೆ ತೆಗೆದ ಯಡಿಯೂರಪ್ಪ ಸಿಎಂ ಖುರ್ಚಿಯಿಂದ ಕೆಳಗಿಳಿಯುವುದು ಖಚಿತ' ಶಾಸಕ ಯತ್ನಾಳ್​ ಅಸಮಾಧಾನ

yatnal
Published on

ವಿಜಯಪುರ: ರಾಜ್ಯ ಸಂಪುಟಕ್ಕೆ ಏಳು ಹೊಸ ಸಚಿವರ ಪಟ್ಟಿಯನ್ನು ಮುಖ್ಯಮಂತ್ರಿ ಯಡಿಯೂರಪ್ಪನವರು ಬಿಡುಗಡೆ ಮಾಡಿದ್ದಾರೆ. ಅದೇ ಬೆನ್ನಲ್ಲಿ ಪಕ್ಷದಲ್ಲಿ ಅಸಮಾಧಾನಗಳ ಬುಗ್ಗೆ ಎದ್ದಿದೆ. ಮುಖ್ಯಮಂತ್ರಿಗಳನ್ನು ಖುರ್ಚಿಯಿಂದ ಇಳಿಸುವ ಬ್ಲಾಕ್​ಮೇಲ್​ ಮಾಡಿದವರಿಗೆ ಸಚಿವ ಸ್ಥಾನ ನೀಡಲಾಗಿದೆ ಎಂದು ವಿಜಯಪುರ ನಗರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಬ್ಲಾಕ್ ಮೇಲ್ ಮಾಡುವವರಿಗೆ, ಹಣ ನೀಡಿದವರಿಗೆ ಸಚಿವ ಸ್ಥಾನ ಕೊಡಲಾಗಿದೆ. ಬ್ಲಾಕ್​ಮೇಲ್​ ಮಾಡಿ ಮೂವರು ಸ್ಥಾನ‌ ಪಡೆದಿದ್ದಾರೆ. ಆ ಮೂವರು ಈ ಹಿಂದೆ ನನ್ನ ಭೇಟಿಯಾಗಿದ್ದರು. ನಾವೆಲ್ಲರೂ ಕೂಡಿ ಸಿಎಂ ಯಡಿಯೂರಪ್ಪರನ್ನ ಕೆಳಗಿಳಿಸೋಣವೆಂದು ಬೆಂಬಲ ಕೋರಿದ್ದರು. ಅವರ ಮಾತು ಕೇಳಿ ನನಗೆ ಆಶ್ಚರ್ಯವಾಗಿತ್ತು. ಕೆಲವರು ಸಿಡಿ ತೋರಿಸಿ ಯಡಿಯೂರಪ್ಪರನ್ನ ಹೆದರಿಸಿ ಸಚಿವರಾಗಿದ್ದಾರೆ. ಇನ್ನು ಕೆಲವರು ಅಪಾರ ಪ್ರಮಾಣದ ಹಣ ನೀಡಿ ಸಚಿವರಾಗಿದ್ದಾರೆ ಎಂದು ಅವರು ದೂರಿದ್ದಾರೆ.

ಸಮಸ್ತ ಲಿಂಗಾಯತ ವೀರಶೈವ ಸಮಾಜದ ಮರ್ಯಾದೆಯನ್ನ ಸಿಎಂ ಯಡಿಯೂರಪ್ಪ ತೆಗೆದಿದ್ದಾರೆ. ಸಿಎಂ ಅವರಿಗೆ ನೈತಿಕತೆ ಇದ್ದರೆ ರಾಜೀನಾಮೆ ನೀಡಿ ಹೊರಬರಲಿ ಎಂದು ಸವಾಲು. ವೀರಶೈವ ಲಿಂಗಾಯತ ಮಠಗಳಿಗೆ ಹಣ ನೀಡಿ ನನ್ನ ಕೆಳಗಿಳಿಸಿದರೆ ಕೇಂದ್ರದ ವಿರುದ್ಧ ಬಂಡೇಳುವಂತೆ ಯಡಿಯೂರಪ್ಪ ಯೋಜನೆ ಮಾಡಿದ್ದಾರೆ. ಸಂಕ್ರಮಣದ ಉತ್ತರಾಯಣದ ಮೂಲಕ ಸಿಎಂ ಯಡಿಯೂರಪ್ಪ ಅದಃ ಪತನ ಆರಂಭವಾಗಲಿದೆ ಎಂದು ಅವರು ಎಚ್ಚರಿಕೆ ನೀಡಿದ್ದಾರೆ. (ದಿಗ್ವಿಜಯ ನ್ಯೂಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net