ಈ ಬ್ಯಾಂಕ್ ಉದ್ಯೋಗಿಗಳು ಇನ್ನು ಪರ್ಮನೆಂಟ್​ ಮನೆಯಲ್ಲೇ..?!; ಬ್ಯಾಂಕ್​ ಆಫ್​ ಬರೋಡದಿಂದ ಹೊಸ ಪ್ಲ್ಯಾನ್​...

Untitled-1
Published on

ಬೆಂಗಳೂರು: ಕರೊನಾ ಹಾವಳಿ ಆರಂಭಗೊಂಡ ಮೇಲೆ ಜನರ ಜೀವನಶೈಲಿಯಲ್ಲಿ ಮಾತ್ರವಲ್ಲ, ವಿವಿಧ ಸಂಸ್ಥೆಗಳ ಕಾರ್ಯವೈಖರಿಯಲ್ಲೂ ಭಾರಿ ಬದಲಾವಣೆಗಳು ಆಗಿವೆ. ಅಂಥ ಒಂದು ಬದಲಾವಣೆ ಬ್ಯಾಂಕಿಂಗ್ ಕ್ಷೇತ್ರದಲ್ಲೂ ಆಗುತ್ತಿದ್ದು, ಎಲ್ಲವೂ ಅಂದುಕೊಂಡಂತೆಯೇ ನಡೆದರೆ ದೇಶದ ಪ್ರಮುಖ ಬ್ಯಾಂಕ್​ವೊಂದರ ಉದ್ಯೋಗಿಗಳು ಪರ್ಮನೆಂಟ್ ಆಗಿ ಮನೆಯಲ್ಲೇ ಉಳಿಯಲಿದ್ದಾರೆ.

ಹೌದು.. ಬ್ಯಾಂಕ್​ ಆಫ್​ ಬರೋಡ ಇಂಥದ್ದೊಂದು ಕ್ರಮಕ್ಕೆ ಮುಂದಾಗಿದ್ದು, ಆ ಕುರಿತ ಸಾಧಕ-ಬಾಧಕಗಳನ್ನು ಚರ್ಚೆ ಮಾಡಲಾರಂಭಿಸಿದೆ. ಸಾಧಕಗಳೇ ಹೆಚ್ಚು ಹಾಗೂ ಸೂಕ್ತ ಎಂಬುದು ಖಚಿತವಾದಲ್ಲಿ ಬ್ಯಾಂಕ್ ಆಫ್ ಬರೋಡ ತಾನಂದುಕೊಂಡಂಥ ಯೋಜನೆಯನ್ನು ಕಾರ್ಯರೂಪಕ್ಕೆ ತರಲಿದೆ. ಅರ್ಥಾತ್, ತನ್ನ ಉದ್ಯೋಗಿಗಳಲ್ಲಿ ಒಂದು ವಿಭಾಗದವರನ್ನು ಶಾಶ್ವತವಾಗಿ ವರ್ಕ್​ ಫ್ರಮ್​ ಹೋಮ್​ಗೆ ಸೀಮಿತಗೊಳಿಸಲಿದೆ.

ಬ್ಯಾಂಕ್​ ಆಫ್ ಬರೋಡ ಮ್ಯಾನೇಜ್​ಮೆಂಟ್​ ಕನ್ಸಲ್ಟೆನ್ಸಿವೊಂದನ್ನು ನೇಮಿಸಿಕೊಂಡಿದೆ. ಮೆಕ್​ಕಿನ್ಸೆ ಆ್ಯಂಡ್ ಕೊ. ಹೆಸರಿನ ಮ್ಯಾನೇಜ್​ಮೆಂಟ್ ಕನ್ಸಲ್ಟೆನ್ಸಿ ಜತೆ ಒಪ್ಪಂದ ಮಾಡಿಕೊಂಡಿರುವ ಬ್ಯಾಂಕ್​ ಆಫ್ ಬರೋಡ ಕರೊನೋತ್ತರವಾಗಿ ಬ್ಯಾಂಕ್ ನಿರ್ವಹಣೆ ಕುರಿತು ಯೋಜನೆಗಳನ್ನು ರೂಪಿಸುತ್ತಿದೆ. ಅದರಲ್ಲಿ ವರ್ಕ್​ ಫ್ರಂ ಹೋಮ್​ ಕೂಡ ಒಂದು.

ನಮ್ಮ ಉದ್ಯೋಗಿಗಳನ್ನು ಮನೆಯಿಂದಲೇ ಕೆಲಸ ಮಾಡಿಸಿದರೆ ಹೇಗೆ? ಅಥವಾ ಅವರನ್ನು ವಾರದಲ್ಲಿ ಒಂದೆರಡು ದಿನಗಳಲ್ಲಿ ಮಾತ್ರ ಕಚೇರಿಗೆ ಬರುವಂತೆ ಮಾಡಿದರೆ ಅದನ್ನು ಹೇಗೆ ಅನುಷ್ಠಾನಗೊಳಿಸುವುದು? ಉದ್ಯೋಗಿಗಳಿಂದ ಸುಲಭವಾಗಿ ಹೆಚ್ಚಿನ ಕೆಲಸ ಪಡೆಯುವುದು ಹೇಗೆ ಮತ್ತು ಪೂರ್ಣಾವಧಿಯ ಉದ್ಯೋಗಿಗಳಲ್ಲದೆ ಕೆಲವರನ್ನು ನೇಮಿಸಿಕೊಂಡು ಅವರಿಂದ ತಮಗೆ ಬೇಕಾದ ಕೌಶಲಗಳನ್ನು ಪಡೆಯುವುದು ಹೇಗೆ ಎಂಬೆಲ್ಲದರ ಕುರಿತು ಚಿಂತನೆಗಳು ನಡೆಯುತ್ತಿವೆ ಎಂದು ಬ್ಯಾಂಕ್​ ಸಿಇಒ ಮತ್ತು ವ್ಯವಸ್ಥಾಪಕ ನಿರ್ದೇಶಕ ಸಂಜೀವ್ ಛಡ್ಡ ಹೇಳಿಕೊಂಡಿದ್ದಾರೆ. ಒಂದು ವೇಳೆ ಬ್ಯಾಂಕ್​ ವರ್ಕ್​ ಫ್ರಂ ಹೋಮ್​ಗೆ ಮುಂದಾದರೆ ಕಾಯಂ ಆಗಿ ಮನೆಯಿಂದಲೇ ಕೆಲಸ ತೆಗೆದುಕೊಳ್ಳುವ ಪ್ರಥಮ ಬ್ಯಾಂಕ್​ ಆಗಿ ಬ್ಯಾಂಕ್​ ಆಫ್ ಬರೋಡ ಹೊರಹೊಮ್ಮಲಿದೆ ಎನ್ನಲಾಗಿದೆ. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net