'ಮನ್​​ ಕಿ ಬಾತ್'​​ನಲ್ಲಿ ಬೆಂಗಳೂರಿನ ರೈಲ್ವೆ ಪೈಲೆಟ್​ಗೆ ಮೆಚ್ಚುಗೆ

shir
Published on

ಬೆಂಗಳೂರು/ನವದೆಹಲಿ : ಪ್ರಧಾನಿ ಮೋದಿ ಆಕಾಶವಾಣಿಯಲ್ಲಿ ನಡೆಸುವ 'ಮನ್​ ಕಿ ಬಾತ್​' ಕಾರ್ಯಕ್ರಮದಲ್ಲಿ ಇಂದು ಬೆಂಗಳೂರು ರೈಲ್ವೆ ವಿಭಾಗದಲ್ಲಿ ಕಾರ್ಯನಿರ್ವಹಿಸುತ್ತಿರುವ ಶಿರೀಶಾ ಗಜನಿ ಅವರೊಂದಿಗೆ ಸಂಭಾಷಣೆ ನಡೆಸಿದರು. ಆಕ್ಸಿಜನ್ ಎಕ್ಸ್​ಪ್ರೆಸ್​ನ ಲೋಕೋ ಪೈಲೆಟ್​ ಆಗಿ ಕರೊನಾ ರೋಗಿಗಳ ಚಿಕಿತ್ಸೆಗೆ ಅತ್ಯವಶ್ಯಕವಾದ ಮೆಡಿಕಲ್ ಆಕ್ಸಿಜನ್​ಅನ್ನು ವಿವಿಧ ಪ್ರದೇಶಗಳಿಗೆ ತ್ವರಿತವಾಗಿ ಪೂರೈಸುವ ಕೆಲಸದಲ್ಲಿ ತೊಡಗಿರುವ ಶಿರೀಶಾ ಅವರ ಕಾರ್ಯದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.

ಇಂದಿನ ಮನ್​ ಕಿ ಬಾತ್​ನ 77ನೇ ಸಂಚಿಕೆಯಲ್ಲಿ ಕರೊನಾ ವಿರುದ್ಧದ ಹೋರಾಟದಲ್ಲಿ ವಿವಿಧ ಜವಾಬ್ದಾರಿಗಳನ್ನು ನಿರ್ವಹಿಸುತ್ತಿರುವ ಹಲವು ಮುಂಚೂಣಿ ಕಾರ್ಯಕರ್ತರೊಂದಿಗೆ ಮೋದಿ ವಾರ್ತಾಲಾಪ ನಡೆಸಿದರು. ದೇಶದ ಸಂಕಷ್ಟ ಪರಿಸ್ಥಿತಿಯಲ್ಲಿ ಕರೊನಾ ವಾರಿಯರ್​ಗಳ ಮಹತ್ವಪೂರ್ಣ ಸೇವೆ ಎಲ್ಲರೂ ಹೆಮ್ಮೆ ಪಡುವಂಥದ್ದು ಎಂದರು.

"ಮಹಿಳಾ ಸಿಬ್ಬಂದಿಗಳನ್ನೇ ಹೊಂದಿರುವ ಆಕ್ಸಿಜನ್ ಎಕ್ಸ್​ಪ್ರೆಸ್​ಗೆ ನೀವು ಪೈಲೆಟ್​ ಆಗಿದ್ದೀರಿ. ನಾರಿಶಕ್ತಿಯ ಪ್ರತೀಕವಾಗಿ ಇಡೀ ದೇಶಕ್ಕೆ ನೀವು ಮಾದರಿಯಾಗಿದ್ದೀರಿ" ಎಂದು ಶಿರೀಷಾ ಅವರನ್ನು ಪ್ರಶಂಸಿಸಿದ ಪ್ರಧಾನಿ ಮೋದಿ, "ನಿಮ್ಮ ಸೇವೆಗೆ ಸ್ಫೂರ್ತಿ ಏನು?" ಎಂದು ಕೇಳಿದರು. ಆಕೆ ತಮ್ಮ ತಂದೆತಾಯಿಗಳೇ ತಮಗೆ ಸ್ಫೂರ್ತಿ. ತಮ್ಮ ಅಪ್ಪ, ಅಕ್ಕ ಕೂಡ ಸರ್ಕಾರಿ ನೌಕರರಾಗಿರುವುದು, ತಮಗೆ ಈ ಕ್ಷೇತ್ರ ಪ್ರವೇಶಿಸುವಂತೆ ಪ್ರೇರಣೆ ನೀಡಿತು ಎಂದರು.

"ಆಕ್ಸಿಜನ್ ಟ್ಯಾಂಕರ್​ಗಳನ್ನು ಸುರಕ್ಷಿತವಾಗಿ ಸಾಗಿಸುವ ಗುರುತರ ಜವಾಬ್ದಾರಿಯನ್ನು ನಿರ್ವಹಿಸುತ್ತಿರುವುದು ನನಗೆ ಸಂತೋಷ ನೀಡಿದೆ. ರೈಲ್ವೆ ಇಲಾಖೆಯು ಆಕ್ಸಿಜನ್ ಎಕ್ಸ್​ಪ್ರೆಸ್​ಗೆ ಗ್ರೀನ್ ಪಾಥ್​ ಒದಗಿಸಿದ್ದು, ಒಂದೂವರೆ ಗಂಟೆಯಲ್ಲಿ 125 ಕಿಲೋಮೀಟರ್​ಗಳಷ್ಟು ದೂರ ಕ್ರಮಿಸಲು ಸಾಧ್ಯವಾಗುತ್ತಿದೆ" ಎಂದು ಶಿರೀಶಾ ಹೇಳಿದರು.

"ನಮ್ಮ ಬೆಂಗಳೂರು ವಿಭಾಗದಲ್ಲಿ ಆಕ್ಸಿಜನ್ ಎಕ್ಸ್​ಪ್ರೆಸ್​ ರೈಲನ್ನು ಆರಂಭದಿಂದ ನಡೆಸುತ್ತಿರುವ ಶಿರೀಷಾ ಗಜನಿ ಅವರ ಕೊಡುಗೆಯನ್ನು ಪ್ರಧಾನಿಗಳು ಶ್ಲಾಘಿಸಿದ್ದಾರೆ. ಇದು ನಮ್ಮ ತಂಡಕ್ಕೆ ಹೆಮ್ಮೆಯ ಕ್ಷಣ" ಎಂದು ಬೆಂಗಳೂರು ವಿಭಾಗ ರೈಲ್ವೆ ಮ್ಯಾನೇಜರ್​ ಟ್ವೀಟ್ ಮಾಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net