Bamboo Salt : ಆರು ಮಸಾಲೆಗಳಲ್ಲಿ ಉಪ್ಪು ಕೂಡ ಒಂದು. ಭಾರತೀಯ ಪಾಕಪದ್ಧತಿಯಲ್ಲಿ ಉಪ್ಪು ಬಹಳ ಮುಖ್ಯವಾದ ಪದಾರ್ಥವಾಗಿದೆ. ಇದು ಆಹಾರಕ್ಕೆ ರುಚಿಯನ್ನು ನೀಡುತ್ತದೆ. ಉಪ್ಪು ಇಲ್ಲ ಅಂದ್ರೆ ಯಾವ ಆಹಾರವೂ ಕೂಡ ರುಚಿಸುವುದಿಲ್ಲ. ಭೂಮಿಯ ಮೇಲಿನ ಎಲ್ಲ ಪ್ರಾಣಿಗಳ ಉಳಿವಿಗೆ ಉಪ್ಪು ಅತ್ಯಗತ್ಯ.
ಅಂದಹಾಗೆ ಉಪ್ಪನ್ನು ಸೇವನೆ ಮಾತ್ರವಲ್ಲದೆ, ಆಹಾರವನ್ನು ಸಂರಕ್ಷಿಸಲು ಸಹ ಬಳಸಲಾಗುತ್ತದೆ. ಉದಾಹರಣೆಗೆ, ತರಕಾರಿ, ಮೀನು (ಉಪ್ಪು ಹಾಕಿದ ಮೀನು) ಹಾಗೂ ಮಾಂಸವನ್ನು ದೀರ್ಘಕಾಲದವರೆಗೆ ಸಂರಕ್ಷಿಸಲು ಉಪ್ಪನ್ನು ಬಳಸಲಾಗುತ್ತದೆ. ಉಪ್ಪಿನ ಬೆಲೆಯ ವಿಚಾರಕ್ಕೆ ಬರುವುದಾದರೆ, ಒಂದು ಕೆಜಿ ಉಪ್ಪಿನ ಬೆಲೆ 30 ರಿಂದ 40 ರೂಪಾಯಿ ಇದೆ. ಆದರೆ, ಈ ಒಂದು ಉಪ್ಪಿನ ಬೆಲೆ ಮಾತ್ರ 20 ರಿಂದ 30 ಸಾವಿರ ರೂಪಾಯಿ. ಹಾಗಾದರೆ ಆ ಉಪ್ಪಿನ ಹೆಸರೇನು? ಅದರ ವಿಶೇಷತೆ ಏನು ಎಂದು ನೀವು ಆಶ್ಚರ್ಯ ಪಡುತ್ತಿದ್ದೀರಾ? ಆ ಉಪ್ಪಿನ ಬಗ್ಗೆ ನಾವೀಗ ವಿವರವಾಗಿ ತಿಳಿದುಕೊಳ್ಳೋಣ.
ಬಿದಿರಿನ ಉಪ್ಪು ಬಹಳ ವಿಶೇಷವಾದದ್ದು. ಇದನ್ನು ನೇರಳೆ ಉಪ್ಪು ಎಂದೂ ಕರೆಯುತ್ತಾರೆ. ಕೊರಿಯನ್ ಪಾಕಪದ್ಧತಿಯಲ್ಲಿ ಇದಕ್ಕೆ ವಿಶೇಷ ಸ್ಥಾನವಿದೆ. ಇದನ್ನು ಕೊರಿಯನ್ನರು ವ್ಯಾಪಕವಾಗಿ ಬಳಸುತ್ತಾರೆ. ಬಿದಿರಿನ ಉಪ್ಪು ನೂರಾರು ವರ್ಷಗಳಿಂದ ಅವರ ಸಾಂಪ್ರದಾಯಿಕ ಆಹಾರದ ಭಾಗವಾಗಿದೆ ಮತ್ತು ಔಷಧಿಗಳ ತಯಾರಿಕೆಯಲ್ಲಿ ಬಳಸಲಾಗುತ್ತದೆ. ಇದನ್ನು ತಯಾರಿಸುವ ವಿಧಾನವು ತುಂಬಾ ವಿಭಿನ್ನವಾಗಿದೆ. ಅದಕ್ಕಾಗಿಯೇ ಇದು ಇತರ ಲವಣಗಳಿಗೆ ಹೋಲಿಸಿದರೆ ಹೆಚ್ಚು ಔಷಧೀಯ ಗುಣಗಳನ್ನು ಹೊಂದಿದೆ.
ಇದೇ ಸಂದರ್ಭದಲ್ಲಿ ಉತ್ತರಾಖಂಡ ಸರ್ಕಾರ ಈ ಉಪ್ಪನ್ನು ಮಾರುಕಟ್ಟೆಗೆ ತರಲು ಪ್ರಯತ್ನಿಸುತ್ತಿದೆ. ಪ್ರಸ್ತುತ, ಈ ಉಪ್ಪನ್ನು ತಯಾರಿಸುವ ಬಗ್ಗೆ ಪ್ರಯೋಗಗಳು ನಡೆಯುತ್ತಿವೆ. ಇದನ್ನು ಬಿದಿರಿನ ಬಟ್ಟಲಿನಲ್ಲಿ ತಯಾರಿಸುವುದರಿಂದ ಇದನ್ನು ಬಿದಿರಿನ ಉಪ್ಪು ಎಂದು ಕರೆಯಲಾಗುತ್ತದೆ.
ಹೇಗೆ ತಯಾರಿಸಲಾಗುತ್ತದೆ?
ಸಮುದ್ರದ ನೀರಿನಿಂದ ತಯಾರಿಸಿದ ಉಪ್ಪನ್ನು ಬಿದಿರಿನ ಕೊಳವೆಗಳಲ್ಲಿ ತುಂಬಿಸಲಾಗುತ್ತದೆ. ಕೊಳವೆಯ ಎರಡೂ ಬದಿಗಳನ್ನು ಜೇಡಿಮಣ್ಣಿನಿಂದ ಮುಚ್ಚಲಾಗುತ್ತದೆ. ಕೊಳವೆಗಳನ್ನು ಬೆಂಕಿಯಲ್ಲಿ ಹಾಕಲಾಗುತ್ತದೆ. ಅವುಗಳನ್ನು ಗರಿಷ್ಠ 800 ಡಿಗ್ರಿ ತಾಪಮಾನದಲ್ಲಿ ಸುಡಲಾಗುತ್ತದೆ. ಈ ವೇಳೆ ಉಪ್ಪು ಬಿದಿರಿನ ಎಣ್ಣೆ ಮತ್ತು ರಸದೊಂದಿಗೆ ಬೆರೆಯುತ್ತದೆ. ಅವುಗಳಲ್ಲಿರುವ ಪೋಷಕಾಂಶಗಳು ಉಪ್ಪಿನಲ್ಲಿ ಹೀರಲ್ಪಡುತ್ತವೆ. ಇದು ಉಪ್ಪನ್ನು ಹೆಚ್ಚು ಪೋಷಕಾಂಶಗಳಿಂದ ತುಂಬಿಸುತ್ತದೆ. ಹೆಚ್ಚಿನ ತಾಪಮಾನದಿಂದಾಗಿ ಸುಮಾರು 14 ಗಂಟೆಗಳ ಕಾಲ ಸುಡಲಾಗುತ್ತದೆ. ಪರಿಣಾಮವಾಗಿ, ಬಿದಿರಿನ ಕೊಳವೆಗಳು ಇದ್ದಿಲಿನಂತೆ ಉರಿಯುತ್ತವೆ. ಒಳಗಿನ ಉಪ್ಪು ಉಂಡೆಯಾಗುತ್ತದೆ. ಅದನ್ನು ಹೊರತೆಗೆದು, ಶುದ್ಧೀಕರಿಸಿ ಮತ್ತೆ ಪುಡಿ ಮಾಡಲಾಗುತ್ತದೆ. ನಂತರ ಅದನ್ನು ಮತ್ತೊಂದು ಬಿದಿರಿನ ಕೊಳವೆಯಲ್ಲಿ ತುಂಬಿಸಿ ಮತ್ತೆ ಸುಡಲಾಗುತ್ತದೆ. ಹೀಗೆ ಹಲವು ಬಾರಿ ಮಾಡುವುದರಿಂದ, ಉಪ್ಪಿನ ಬಣ್ಣವೂ ಬದಲಾಗುತ್ತದೆ ಮತ್ತು ಕಂದು ಬಣ್ಣಕ್ಕೆ ತಿರುಗುತ್ತದೆ. ಅಂತಿಮವಾಗಿ, ಉಪ್ಪು ಕಲ್ಲಿನಂತೆ ಗಟ್ಟಿಯಾಗುತ್ತದೆ. ಇದನ್ನು ಪುಡಿ ಮಾಡಿ ‘ಬಿದಿರಿನ ಉಪ್ಪು’ ಎಂಬ ಹೆಸರಿನಲ್ಲಿ ಮಾರಾಟ ಮಾಡಲಾಗುತ್ತದೆ. ಇದನ್ನು ತಯಾರಿಸಲು ಸುಮಾರು 40 ರಿಂದ 45 ದಿನಗಳು ಬೇಕಾಗುತ್ತದೆ. ಎಲ್ಲವನ್ನೂ ಜನರೇ ಮಾಡುತ್ತಾರೆ. ಈ ಉಪ್ಪಿನ ತಯಾರಿಕೆಯಲ್ಲಿ ಯಾವುದೇ ಯಂತ್ರಗಳನ್ನು ಬಳಸುವುದಿಲ್ಲ. ಹೀಗಾಗಿ ಈ ಉಪ್ಪಿಗೆ ಹೆಚ್ಚಿನ ಬೇಡಿಕೆಯಿದೆ.
ಪ್ರಯೋಜನಗಳೇನು?
ಕೊರಿಯನ್ನರು ಪ್ರಾಚೀನ ಕಾಲದಿಂದಲೂ ಅಡುಗೆಯಲ್ಲಿ ಮತ್ತು ಸಾಂಪ್ರದಾಯಿಕ ಔಷಧವಾಗಿ ಬಿದಿರಿನ ಉಪ್ಪನ್ನು ಬಳಸುತ್ತಿದ್ದಾರೆ. ಬಿದಿರಿನ ಉಪ್ಪು ಉರಿಯೂತವನ್ನು ಕಡಿಮೆ ಮಾಡುವ ಸಾಮರ್ಥ್ಯಕ್ಕೆ ಹೆಸರುವಾಸಿಯಾಗಿದೆ. ಇದು ಸಂಧಿವಾತ ಮತ್ತು ಗಂಟಲು ನೋವಿನಂತಹ ಪರಿಸ್ಥಿತಿಗಳಿಗೆ ಪ್ರಯೋಜನಕಾರಿಯಾಗಿದೆ. ಬಿದಿರಿನ ಉಪ್ಪಿನಲ್ಲಿ ಪೊಟ್ಯಾಸಿಯಮ್, ಕ್ಯಾಲ್ಸಿಯಂ ಮತ್ತು ಮೆಗ್ನೀಸಿಯಮ್ ಸೇರಿದಂತೆ 70ಕ್ಕೂ ಹೆಚ್ಚು ಅಗತ್ಯ ಖನಿಜಗಳಿವೆ. ಈ ಉಪ್ಪು ಬಾಯಿ ಹುಣ್ಣು ಮತ್ತು ಊದಿಕೊಂಡ ಒಸಡುಗಳು ಸೇರಿದಂತೆ ಬಾಯಿಯ ಸಮಸ್ಯೆಗಳಿಗೆ ಚಿಕಿತ್ಸೆ ನೀಡುವಲ್ಲಿ ಪರಿಣಾಮಕಾರಿಯಾಗಿದೆ.
ಈ ಉಪ್ಪು ಬ್ಯಾಕ್ಟೀರಿಯಾಗಳ ವಿರುದ್ಧ ಹೋರಾಡಲು ಸಹಾಯ ಮಾಡುತ್ತದೆ. ಇದು ಬಾಯಿಯ ನೈರ್ಮಲ್ಯವನ್ನು ಸುಧಾರಿಸುತ್ತದೆ. ಇದು ದೇಹದಲ್ಲಿ ಉತ್ಕರ್ಷಣ ನಿರೋಧಕ ಚಟುವಟಿಕೆಯನ್ನು ಉತ್ತೇಜಿಸುತ್ತದೆ. ಇದು ಮಧುಮೇಹ ಮತ್ತು ಅಧಿಕ ರಕ್ತದೊತ್ತಡದಂತಹ ದೀರ್ಘಕಾಲದ ಕಾಯಿಲೆಗಳಿಗೆ ಕಾರಣವಾಗುವ ಸ್ವತಂತ್ರ ರಾಡಿಕಲ್‌ಗಳನ್ನು ತೊಡೆದುಹಾಕುತ್ತದೆ. ಬಿದಿರಿನ ಉಪ್ಪು ಹಾನಿಕಾರಕ ರೋಗಕಾರಕಗಳ ವಿರುದ್ಧ ಹೋರಾಡುತ್ತದೆ. ಇದು ರೋಗನಿರೋಧಕ ಕಾರ್ಯವನ್ನು ಸುಧಾರಿಸುತ್ತದೆ. ಇಷ್ಟೇ ಅಲ್ಲ ಇನ್ನೂ ಅನೇಕ ಪ್ರಯೋಜನಗಳಿವೆ. (ಏಜೆನ್ಸೀಸ್)
1 ತಿಂಗಳಲ್ಲಿ 1000 ಮೊಟ್ಟೆ ತಿಂದ ಯುವಕ! ದೇಹದಲ್ಲಿ ಏನೆಲ್ಲ ಬದಲಾವಣೆ ಆಯ್ತು ಗೊತ್ತಾ? ಇಲ್ಲಿದೆ ಅಚ್ಚರಿ ಸಂಗತಿ… Eggs
ಈ ಉದ್ಯೋಗದಲ್ಲಿರುವ ಗಂಡಸರು ತಮ್ಮ ಪತ್ನಿಯರಿಗೆ ಹೆಚ್ಚು ಮೋಸ ಮಾಡ್ತಾರಂತೆ! ಪರೀಕ್ಷೆಯಲ್ಲಿ ಸಾಬೀತು | Unfaithful Men