Bahraich Violence| ಹಿಂಸಾತ್ಮಕ ರೂಪ ಪಡೆದ ಪ್ರತಿಭಟನೆ; ಪರಿಸ್ಥಿತಿ ನಿಯಂತ್ರಿಸಲು ಪೊಲೀಸರ ಹರಸಾಹಸ

Untitled-design-19
Published on

ಲಖನೌ: ಉತ್ತರ ಪ್ರದೇಶದ ಬಹ್ರೈಚ್‌(Bahraich)ನಲ್ಲಿ ದುರ್ಗಾ ವಿಗ್ರಹ ವಿಸರ್ಜನೆ ವೇಳೆ ನಡೆದ ಹಿಂಸಾಚಾರ(Violence)ವು ದೊಡ್ಡ ಸ್ವರೂಪ ಪಡೆದುಕೊಂಡಿದೆ. ಸೋಮವಾರ (ಅಕ್ಟೋಬರ್​​ನ 14) ಬೆಳಗ್ಗೆ ಜನರ ಗುಂಪು ಬಹ್ರೈಚ್ ಜಿಲ್ಲೆಯ ಆಸ್ಪತ್ರೆ ಮತ್ತು ಕೆಲವು ಅಂಗಡಿಗಳಿಗೆ ಬೆಂಕಿ ಹಚ್ಚಿದೆ. ಸ್ಥಳೀಯ ಆಡಳಿತವು ಇಂಟರ್ನೆಟ್ ಅನ್ನು ಸ್ಥಗಿತಗೊಳಿಸಿದೆ.

ಭಾನುವಾರ(ಅಕ್ಟೋಬರ್​​ 13) ದುರ್ಗಾ ಮೂರ್ತಿಯ ಮೆರವಣಿಗೆಯು ಬಹ್ರೈಚ್‌ ಮೂಲಕ ಹಾದು ಹೋಗುತ್ತಿದ್ದಾಗ ಈ ಘಟನೆ ನಡೆದಿದೆ. ಎರಡು ಗುಂಪುಗಳ ನಡುವೆ ಆರಂಭವಾದ ವಾಗ್ವಾದ ಕೈ-ಕೈ ಮೀಲಾಯಿಸುವ ಹಂತ ತಲುಪಿದೆ. ಆ ಸಮಯದಲ್ಲಿ ವ್ಯಕ್ತಿಯೊಬ್ಬ ಮೃತಪಟ್ಟಿದ್ದಾನೆ. ನಂತರ ಉದ್ವಿಗ್ನ ಪರಿಸ್ಥಿತಿ ಉಂಟಾಗಿದೆ ಎಂದು ಬಹ್ರೈಚ್ ಪೊಲೀಸ್ ವರಿಷ್ಠಾಧಿಕಾರಿ (ಎಸ್‌ಪಿ) ವೃಂದಾ ಶುಕ್ಲಾ ಹೇಳಿದರು.

ಮೃತ ವ್ಯಕ್ತಿಯನ್ನು ರಾಮ್​ಗೋಪಾಲ್​ ಮಿಶ್ರಾ ಎಂದು ಗುರುತಿಸಲಾಗಿದೆ. ಮರಣೋತ್ತರ ಪರೀಕ್ಷೆಯ ನಂತರ, ಪೊಲೀಸ್ ಆಡಳಿತವು ಗುಂಡಿಗೆ ಬಲಿಯಾದ ರಾಮ್ ಗೋಪಾಲ್ ಮಿಶ್ರಾ ಅವರ ಶವದೊಂದಿಗೆ ಗ್ರಾಮವನ್ನು ತಲುಪಿದಾಗ, ಗ್ರಾಮಸ್ಥರು ಕೋಪಗೊಂಡು ಪ್ರತಿಭಟನೆ ನಡೆಸಿದರು. ಪೊಲೀಸರ ನಿರ್ಲಕ್ಷ್ಯದಿಂದ ರಾಮ್ ಗೋಪಾಲ್ ಮಿಶ್ರಾ ಹತ್ಯೆಯಾಗಿದೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ. ಕೋಪಗೊಂಡ ಜನಸಮೂಹವು ಹಲವೆಡೆ ವಿಧ್ವಂಸಕ ಕೃತ್ಯವನ್ನು ಎಸಗಿದೆ. ಆಸ್ಪತ್ರೆ ಹಾಗೂ ಖಾಸಗಿ ಕಂಪನಿಯ ಶೋರೂಮ್​ಗೆ ಬೆಂಕಿ ಹಚ್ಚಿದ್ದಾರೆ ಎಂದು ವರದಿಯಾಗಿದೆ.

ಕೊಲೆಯ ವಿರುದ್ಧ ನಡೆದ ಪ್ರತಿಭಟನೆ ಹಿಂಸಾಚಾರಕ್ಕೆ ತಿರುಗಿದ್ದರಿಂದ ಪರಿಸ್ಥಿತಿ ನಿಯಂತ್ರಿಸಲು ಪೊಲೀಸರು ಹರಸಾಹಸ ಪಡುತ್ತಿದ್ದಾರೆ. ಜನಸಂದಣಿಯನ್ನು ನಿಯಂತ್ರಿಸಲು ಲಘು ಪೊಲೀಸ್ ಪಡೆಯನ್ನೂ ಬಳಸಲಾಗಿದೆ. ನಂತರ ಹೆಚ್ಚುವರಿ ಭದ್ರತಾ ಪಡೆಗಳನ್ನು ಸಹ ಕರೆಸಲಾಗಿದೆ. ಲಾಠಿ ಚಾರ್ಜ್ ಮಾಡಲಾಗಿದೆ, ಅಶ್ರುವಾಯು ಶೆಲ್​ಗಳನ್ನು ಬಳಸಲಾಗಿದೆ. ಪರಿಸ್ಥಿತಿಯನ್ನು ನಿಯಂತ್ರಿಸಲು ಪ್ರಯತ್ನಿಸುತ್ತಿದ್ದೇವೆ ಎಂದು ಬಹ್ರೈಚ್ ಡಿಎಂ ಮೋನಿಕಾ ರಾಣಿ ಹೇಳಿದ್ದಾರೆ.

ಪೊಲೀಸರು ಬಹ್ರೈಚ್ ಹಿಂಸಾಚಾರ ಪ್ರಕರಣದಲ್ಲಿ ಆರೋಪಿಗಳಾದ ಅಬ್ದುಲ್ ಹಮೀದ್, ಸರ್ಫರಾಜ್, ಫಹೀಂ, ಶೇರ್ ಖಾನ್, ನಂಕೌ ಮತ್ತು ಮರಾಫ್ ಅಲಿ ಸೇರಿದಂತೆ 10 ಜನರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ಇದುವರೆಗೆ 30ಕ್ಕೂ ಹೆಚ್ಚು ಜನರನ್ನು ಬಂಧಿಸಲಾಗಿದೆ. ಪ್ರಮುಖ ಆರೋಪಿಗಾಗಿ ಶೋಧ ನಡೆಸುತ್ತಿದ್ದಾರೆ ಎಂದು ಪೊಲೀಸ್​ ಮೂಲಗಳು ತಿಳಿಸಿವೆ. (ಏಜೆನ್ಸೀಸ್​​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net