

ಮಂಗಳೂರು: ಅಯೋಧ್ಯೆಯಲ್ಲಿ ನಿರ್ಮಾಣವಾಗುತ್ತಿರುವ ಭವ್ಯ ಶ್ರೀರಾಮಮಂದಿರ ಮಕರ ಸಂಕ್ರಾಂತಿ ಬಳಿಕ ಲೋಕಾರ್ಪಣೆ ಆಗಲಿದ್ದು, ಆ ಮಂದಿರದಲ್ಲಿ ಯಾವುದೇ ಸೇವೆಗಳು ಇರುವುದಿಲ್ಲ ಎಂದು ಪೇಜಾವರ ಮಠದ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ತಿಳಿಸಿದ್ದಾರೆ.
ಇಂದು ಮಂಗಳೂರಿನಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಸ್ವಾಮೀಜಿ, ಪ್ರಥಮ ಹಂತದ ಕಾಮಗಾರಿ ಈಗಾಗಲೇ ಮುಕ್ತಾಯದ ಹಂತದಲ್ಲಿದೆ. ರಾಮ ಪ್ರತಿಮೆ ನಿರ್ಮಾಣ ಕಾರ್ಯ ಕೂಡ ಭರದಿಂದ ಸಾಗುತ್ತಿದೆ. ಮುಂದಿನ ಮಕರ ಸಕ್ರಾಂತಿ ಕಳೆದ ಬಳಿಕ ಮಂದಿರ ಲೋಕಾರ್ಪಣೆ ಆಗಲಿದೆ ಎಂದು ತಿಳಿಸಿದರು.
ಆಯೋಧ್ಯಾ ರಾಮಮಂದಿರದಲ್ಲಿ ಯಾವುದೇ ಸೇವೆಗಳು ಇರುವುದಿಲ್ಲ. ರಾಮನ ಹೆಸರಿನಲ್ಲಿ ಭಕ್ತರು ಮಾಡುವ ದಾನಗಳೇ ರಾಮನ ಸೇವೆ ಎಂದ ಸ್ವಾಮೀಜಿ, ನಮ್ಮ ಕನಸು ರಾಮಮಂದಿರ ಅಲ್ಲ, ರಾಮ ರಾಜ್ಯದ ಕನಸು. ಆ ಕನಸನ್ನು ಸಾಕಾರ ಮಾಡುವುದು ರಾಮ ದೇವರಿಗೆ ಕೊಡುವ ಕಾಣಿಕೆ ಎಂದರು.
ಬದುಕಿನಲ್ಲಿ ಒಂದು ಬಾರಿ ಅಶಕ್ತರಿಗೆ ದಾನ ಮಾಡೋಣ. ಅಯೋಧ್ಯೆಯಲ್ಲಿ ರಾಮನ ಮುಂದೆ ದಾನವನ್ನು ಅರ್ಪಿಸೋಣ. ಬಡವರಿಗೆ ಉಚಿತ ಚಿಕಿತ್ಸೆ, ಅರ್ಹ ವಿದ್ಯಾರ್ಥಿಗೆ ಚಿಕಿತ್ಸೆ, ಗೋ ದತ್ತು ಪಡೆಯುವ ಮೂಲಕ ರಾಮಸೇವೆ ಮಾಡೋಣ. ಈ ಮೂಲಕ ರಾಮ ರಾಜ್ಯದ ಕನಸನ್ನು ನನಸು ಮಾಡೋಣ ಎಂದೂ ಅವರು ಹೇಳಿದರು.
ಸರ್ಕಾರ ಗೋಹತ್ಯೆ ನಿಷೇಧ ಹಿಂಪಡೆಯುವ ದುಸ್ಸಾಹಸಕ್ಕೆ ಕೈ ಹಾಕಬಾರದು. ಹಿಂದೂ ಸಂಘಟನೆಗಳು ಗೋಹತ್ಯೆಯನ್ನು ತಡೆಯಬೇಕು. ಆದರೆ ಪೊಲೀಸರ ಮೂಲಕ ಈ ಹತ್ಯೆಯನ್ನು ತಡೆಯಬೇಕು. ಭಾರತದಂತಹ ನೆಲದಲ್ಲಿ ಗೋಹತ್ಯೆ ಆಗಬಾರದು ಎಂದು ಸ್ವಾಮೀಜಿ ಅಭಿಪ್ರಾಯಪಟ್ಟರು.