

Axar Patel: ನಿನ್ನೆ (ಏ.16) ದೆಹಲಿಯ ಆರುಣ್ ಜೆಟ್ಲಿ ಕ್ರೀಡಾಂಗಣದಲ್ಲಿ ನಡೆದ ಐಪಿಎಲ್ನ 36ನೇ ಪಂದ್ಯದಲ್ಲಿ ರಾಜಸ್ಥಾನ ರಾಯಲ್ಸ್ ಮತ್ತು ಡೆಲ್ಲಿ ಕ್ಯಾಪಿಟಲ್ಸ್ ತಂಡಗಳು ಭರ್ಜರಿ ಪೈಪೋಟಿ ನೀಡಿ, ಐಪಿಎಲ್ 18ನೇ ಆವೃತ್ತಿಯ ಚೊಚ್ಚಲ ಸೂಪರ್ ಓವರ್ಗೆ ಸಾಕ್ಷಿಯಾಯಿತು. ಈ ಪಂದ್ಯದ ಕೊನೆಯ ಹಂತದಲ್ಲಿ ಆರ್ಆರ್ ಪಡೆ ಹೀನಾಯ ಸೋಲು ಅನುಭವಿಸಿತು.
ರೋಚಕ ಸೂಪರ್ ಓವರ್ನಲ್ಲಿ ರೋಮಾಂಚನ ಮೂಡಿಸುವಂತ ಗೆಲುವು ದಾಖಲಿಸಿದ ಅಕ್ಸರ್ ಪಟೇಲ್ ಪಡೆ, ಅರುಣ್ ಜೇಟ್ಲಿ ಸ್ಟೇಡಿಯಂನಲ್ಲಿದ್ದ ಅಭಿಮಾನಿಗಳ ಸಂತಸದ ಚೀರಾಟಕ್ಕೆ ಕಾರಣರಾದರು. ಈ ಪಂದ್ಯದಲ್ಲಿ ರಾಜಸ್ಥಾನ ರಾಯಲ್ಸ್ ಬ್ಯಾಟರ್ಗಳಿಗೆ ದುಃಸ್ವಪ್ನವಾಗಿ ಕಾಡಿದ ಮಿಚೆಲ್ ಸ್ಟಾರ್ಕ್, ತಮ್ಮ ಅದ್ಭುತ ಬೌಲಿಂಗ್ನಿಂದ ಡೆಲ್ಲಿಗೆ ಭರ್ಜರಿ ಗೆಲುವು ತಂದುಕೊಟ್ಟರು. ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಡೆಲ್ಲಿ ಕ್ಯಾಪಿಟಲ್ಸ್ ನಿಗದಿತ 20 ಓವರ್ಗಳಲ್ಲಿ 5 ವಿಕೆಟ್ಗಳ ನಷ್ಟಕ್ಕೆ 188 ರನ್ ಗಳಿಸಿತು. ಈ ಗುರಿಯನ್ನು ಬೆನ್ನಟ್ಟಿದ ರಾಜಸ್ಥಾನ ರಾಯಲ್ಸ್ ಕೂಡ ನಿಗದಿತ 20 ಓವರ್ಗಳಲ್ಲಿ 4 ವಿಕೆಟ್ಗಳ ನಷ್ಟಕ್ಕೆ 188 ರನ್ ಗಳಿಸಿತು. ಇದು ಸೂಪರ್ ಓವರ್ಗೆ ಅವಕಾಶ ಮಾಡಿಕೊಟ್ಟಿತು. ಸೂಪರ್ ಓವರ್ನಲ್ಲಿ ಸೂಪರ್ ಬೌಲಿಂಗ್ ಮಾಡಿ ತಂಡದ ಗೆಲುವಿನ ಪತಾಕೆಯನ್ನು ಎತ್ತಿಹಿಡಿದ ಸ್ಟಾರ್ಕ್ಗೆ ಮ್ಯಾನೇಜ್ಮೆಂಟ್ನಿಂದ ಮೆಚ್ಚುಗೆಯ ನುಡಿಗಳು ಹರಿದುಬಂದಿತು.
ಪಂದ್ಯ ಮುಗಿದ ಬಳಿಕ ಗೆಲುವಿನ ಕುರಿತಾಗಿ ಮಾತನಾಡಿದ ಅಕ್ಸರ್ ಪಟೇಲ್, "ಆರಂಭದಿಂದ ಎಲ್ಲವೂ ಚೆನ್ನಾಗಿಯೇ ಸಾಗಿತು. ಅಂತ್ಯ ಮಾತ್ರ ಆಶ್ಚರ್ಯಕರವಾಗಿತ್ತು. ನಾವು ಮೊದಲು ಬ್ಯಾಟಿಂಗ್ ಮಾಡುವಾಗ ಪವರ್ ಪ್ಲೇನಲ್ಲಿ ಹೆಚ್ಚಿನ ರನ್ ಗಳಿಸಬೇಕಿತ್ತು ಎಂದು ನಮಗೆ ಅನಿಸಿತು. ಆದರೆ, ಕೆ.ಎಲ್. ರಾಹುಲ್ ಮತ್ತು ಪೊರೆಲ್ ನಮಗೆ ಹೇಳಿದಂತೆ ಪಿಚ್ ಬ್ಯಾಟಿಂಗ್ಗೆ ಕಠಿಣವಾಗಿತ್ತು. 12 ಮತ್ತು 13ನೇ ಓವರ್ನಲ್ಲಿ ನಮಗೆ ಒಂದು ವೇಗ ಸಿಕ್ಕಿತು. ಅಂತಿಮವಾಗಿ, ನಾವು ಉತ್ತಮ ಗುರಿಯನ್ನು ನೀಡಿದೆವು. ಹೊಸ ಬ್ಯಾಟರ್ಗಳು ಕೊಂಚ ಪರದಾಡಿದರು ಅಷ್ಟೇ" ಎಂದರು.
"ನಾನು ನನ್ನ ಆಟಗಾರರಿಗೆ ಒಂದೇ ಒಂದು ವಿಷಯ ಹೇಳಿದ್ದೆ. ಈ ಪಿಚ್ನಲ್ಲಿ ಈ ಗುರಿಯನ್ನು ಬೆನ್ನಟ್ಟುವುದು ಸುಲಭವಲ್ಲ. ಹಾಗಾಗಿ ನಾನು ಅವರಿಗೆ ಸ್ವಲ್ಪ ಆತ್ಮವಿಶ್ವಾಸದಿಂದಿರಿ ಮತ್ತು ವಿಕೆಟ್ ತೆಗೆದುಕೊಳ್ಳಲು ಪ್ರಯತ್ನಿಸಲು ತಿಳಿಸಿದೆ. ಅವರಲ್ಲಿನ ಟಾಪ್ ಬ್ಯಾಟರ್ಗಳು ಔಟಾದ ನಂತರ ನಮ್ಮ ತೆಕ್ಕೆಗೆ ಒಂದಷ್ಟು ವಿಕೆಟ್ಗಳು ಸಿಕ್ಕಿತು. ಆರ್ಆರ್ ಬ್ಯಾಟ್ಸ್ಮನ್ಗಳು ಹೆಚ್ಚು ಚಿಂತಿತರಾದರು. ವೇಗವಾಗಿ ರನ್ ಗಳಿಸುವ ಆತುರದಲ್ಲಿ ಅವರು ಭಾರೀ ಬೆಲೆ ತೆತ್ತರು" ಎಂದು ಅಕ್ಷರ್ ಹೇಳಿದರು.
"ನಾಯಕನಾಗಿ, ನಾನು ತಂಡದ ಯಶಸ್ಸಿನ ಭಾಗವಾಗಬೇಕೆಂದು ಬಯಸಿದ್ದೆ. ನನ್ನ ಆತ್ಮವಿಶ್ವಾಸ ಎಲ್ಲಿಯೂ ಕುಗ್ಗಲಿಲ್ಲ. ನಾನು ಏನು ಮಾಡಬಹುದು ಎಂದು ಯೋಚಿಸಿದೆ. ಕೊನೆಯ ಓವರ್ಗಳಲ್ಲಿ ಸ್ಟಾರ್ಕ್ ಮಾತ್ರ ಅದ್ಭುತ ಬಾಲ್ಗಳನ್ನು ಎಸೆದಿದ್ದಾರೆ. ನನಗೆ ಅವರ ಮೇಲೆ ಸಂಪೂರ್ಣ ನಂಬಿಕೆ ಇದೆ. ಹಾಕಿದ 12 ಎಸೆತಗಳಲ್ಲಿ 12 ಯಾರ್ಕರ್ಗಳನ್ನು ಅವರು ಬೌಲ್ ಮಾಡಿದ್ದಾರೆ. ಅದಕ್ಕೆ ಅವರನ್ನು ಒಬ್ಬ ಲೆಜೆಂಡ್ರಿ ಬೌಲರ್ ಎಂದು ಕರೆಯೋದು. ಈ ಪಂದ್ಯವನ್ನು ಸ್ಟಾರ್ಕ್ರ ಬೌಲಿಂಗ್ನಿಂದಲೇ ನಾವು ಗೆದ್ದಿದ್ದೇವೆ" ಎಂದು ಅಕ್ಷರ್ ಪಟೇಲ್ ಸಂತಸ ವ್ಯಕ್ತಪಡಿಸಿದರು,(ಏಜೆನ್ಸೀಸ್).