ಟ್ರಂಪ್​ಗೆ ಮಸ್ಕ್​ 'ಮಸ್ತ್'​ ಸಾಥ್​​! ಇನ್ನೊಂದು ವಾರದಲ್ಲಿ ಹೊರಬರಲಿದೆ 'ಗೋಲ್ಡ್​ ಕಾರ್ಡ್​' | Trump Gold Card

ವಿಜಯವಾಣಿ (28)
Published on

Trump Gold Card: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಘೋಷಿಸಿರುವ 90 ದಿನಗಳ ಸುಂಕ ವಿರಾಮ ಇದೀಗ ಜಾಗತಿಕ ಸೇರಿದಂತೆ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ದೊಡ್ಡ ಮಟ್ಟದ ಚೇತರಿಕೆಗೆ ಕಾರಣವಾಗಿದೆ. ನುಡಿದಂತೆ ನಡೆದ ಟ್ರಂಪ್​, ಇತರೆ ದೇಶಗಳಿಂದ ಅಮೆರಿಕಕ್ಕೆ ಆಮದು ಮಾಡಿಕೊಳ್ಳುವ ಉತ್ಪನ್ನಗಳ ಮೇಲೆ ಭಾರೀ ಸುಂಕಗಳನ್ನು ವಿಧಿಸಿದ್ದರು. ಪ್ರತೀಕಾರದ ತೆರಿಗೆ ವಿಧಿಸಿದ ಬೆನ್ನಲ್ಲೇ ತಮ್ಮ ಮುಖವಾಣಿ ಇರುವ ಹೊಸ ಗೋಲ್ಡ್ ಕಾರ್ಡ್ ವೀಸಾವನ್ನು ಟ್ರಂಪ್ ಬಿಡುಗಡೆಗೊಳಿಸಿದ್ದರು. ಸದ್ಯ ಇದು ಕೂಡ ಸಂಚಲನಕ್ಕೆ ಕಾರಣವಾಗಿದೆ.

ಮಸ್ಕ್​ ಸಾಥ್​

ಪ್ರತೀಕಾರದ ಸುಂಕ ಘೋಷಿಸಿದ ಬೆನ್ನಲ್ಲೇ ತನ್ನ ಮುಖ ಹೊಂದಿರುವ ಗೋಲ್ಡ್​ ಕಾರ್ಡ್​ ಪರಿಚಯಿಸಿದ ಟ್ರಂಪ್​, ಟೆಸ್ಲಾ ಮಾಲೀಕರಾದ ಎಲೋನ್​ ಮಸ್ಕ್​ ಜತೆಗೆ ಕೈಜೋಡಿಸಿರುವುದು ಗಮನಾರ್ಹ.​ ಮಸ್ಕ್​ನೊಂದಿಗೆ ಉತ್ತಮ ಬಾಂಧವ್ಯ ಹೊಂದಿರುವ ಟ್ರಂಪ್​, ತಮ್ಮ ಬಿಲಿಯನೇರ್ ಸ್ನೇಹಿತನ ನೇತೃತ್ವದಲ್ಲಿ ಸರ್ಕಾರಿ ದಕ್ಷತೆ ಇಲಾಖೆಗೆ (ಡಾಗ್) ಹೊಸ ಕಾರ್ಯವನ್ನು ವಹಿಸಿದ್ದಾರೆ.

ಪಾರಸ್ಪರಿಕ ತೆರಿಗೆ ವಿಧಿಸಿದ್ದೇ ತಡ ಜಾಗತಿಕ ಸೇರಿದಂತೆ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ದೊಡ್ಡ ಸಂಚಲನ ಹುಟ್ಟುಹಾಕಿದೆ. ತನ್ನ ಹೇಳಿಕೆಗೆ ಬದ್ಧವಾದ ಟ್ರಂಪ್​, ಪ್ರತೀಕಾರದ ತೆರಿಗೆ ವಿಧಿಸಿದ ಬೆನ್ನಲ್ಲೇ ತಮ್ಮ ಮುಖವಾಣಿ ಇರುವ ಹೊಸ ಗೋಲ್ಡ್ ಕಾರ್ಡ್ ವೀಸಾವನ್ನು ಟ್ರಂಪ್ ಬಿಡುಗೆಡೆಗೊಳಿಸಿದ್ದಾರೆ. ಸದ್ಯ ಇದು ಮತ್ತೊಂದು ಸಂಚಲನಕ್ಕೆ ಕಾರಣವಾಗಿದೆ. ಅಮೆರಿಕದ ನಾಗರಿಕರಾಗಲು ಇಚ್ಛಿಸುವ ಶ್ರೀಮಂತರಿಗೆ ಈ ಗೋಲ್ಡ್ ಕಾರ್ಡ್ ಲಭ್ಯವಾಗುವಂತೆ ಮಾಡಲು ಇದೀಗ ಎಲೋನ್​ ಮಸ್ಕ್ ತಂಡ​ ಮತ್ತು ಟ್ರಂಪ್​ ಸರ್ಕಾರ ಜತೆ ಜತೆಗೆ ಕೆಲಸ ಮಾಡುತ್ತಿದೆ.

ದುಬಾರಿ ಬೆಲೆಯ ಗೋಲ್ಡ್​ ಕಾರ್ಡ್​

ಶ್ರೀಮಂತ ವಲಸಿಗರಿಗೆ ಗೋಲ್ಡ್ ಕಾರ್ಡ್​ಗಳನ್ನು ಮಾರಾಟ ಮಾಡಲು ಅಧಿಕೃತ ವೆಬ್​ಸೈಟ್​, ತಮ್ಮ ನುರಿತ ಹಾಗೂ ಉತ್ತಮ ಎಂಜಿನಿಯರ್‌ಗಳ ತಂಡವನ್ನು ಎಲೋನ್​ ಕಟ್ಟಿದ್ದಾರೆ. ತಲಾ 5 ಮಿಲಿಯನ್ ಬೆಲೆಯ ಈ ವಿಶೇಷ ಗೋಲ್ಡ್​ ವೀಸಾ ಪಡೆಯಲು ವೆಬ್‌ಸೈಟ್ ಮತ್ತು ಅರ್ಜಿ ಪ್ರಕ್ರಿಯೆಯನ್ನು ರಚಿಸಲು ಮಸ್ಕ್​ ಈಗಾಗಲೇ ತೆರೆ ಹಿಂದೆ ಕಾರ್ಯನಿರ್ವಹಿಸುತ್ತಿದ್ದಾರೆ ಎಂದು ನ್ಯೂಯಾರ್ಕ್ ಟೈಮ್ಸ್ ವರದಿ ತಿಳಿಸಿದೆ. ಗೋಲ್ಡ್ ಕಾರ್ಡ್​ ವೀಸಾ ಪೋರ್ಟಲ್ ರಚಿಸಲು ಡಾಗ್ (DOGE) ತಂಡವು ಸ್ಟೇಟ್ ಡಿಪಾರ್ಟ್ಮೆಂಟ್, ಡಿಪಾರ್ಟ್ಮೆಂಟ್ ಆಫ್ ಹೋಮ್ಲ್ಯಾಂಡ್ ಸೆಕ್ಯುರಿಟಿ ಮತ್ತು ಯುನೈಟೆಡ್ ಸ್ಟೇಟ್ಸ್ ಪೌರತ್ವ ಹಾಗೂ ವಲಸೆ ಸೇವೆಗಳ ಉದ್ಯೋಗಿಗಳೊಂದಿಗೆ ಸಹಕರಿಸುತ್ತಿದೆ ಎಂದು ವರದಿ ಉಲ್ಲೇಖಿಸಿದೆ. ಇದು ಮತ್ತೊಂದು ದೊಡ್ಡ ಬೆಳವಣಿಗೆಗೆ ಕಾರಣವಾಗಿದೆ.

ಎಷ್ಟು ದುಬಾರಿ ಈ ಗೋಲ್ಡ್ ಕಾರ್ಡ್​?

ಈ ಗೋಲ್ಡ್ ಕಾರ್ಡ್ ಎರಡು ವಾರಗಳಲ್ಲಿ ಲಭ್ಯವಾಗಲಿದೆ ಎಂದು ಟ್ರಂಪ್ ಸುಂಕ ವಿಧಿಸಿದ ಕೆಲವೇ ದಿನಗಳಲ್ಲಿ ಬಹಿರಂಗಪಡಿಸಿದರು. ಯಾರು ಐದು ಮಿಲಿಯನ್ ಡಾಲರ್‌ (ಸುಮಾರು 44 ಕೋಟಿ ರೂ.) ವ್ಯಯಿಸುತ್ತಾರೋ ಅವರಿಗೆ ಈ ಗೋಲ್ಡನ್ ಕಾರ್ಡ್ ಲಭ್ಯವಾಗುತ್ತದೆ. ಆದಾಗ್ಯೂ, ಚಿನ್ನದ ವೀಸಾ ಕಾರ್ಡ್ ಎರಡು ವಾರಗಳಲ್ಲಿ ಜನರ ಕೈಗೆ ಸೇರಲಿದೆ ಎಂದು ಟ್ರಂಪ್​ ಸ್ಪಷ್ಟಪಡಿಸಿದ್ದಾರೆ. ಇದರ ಮೊದಲ ಖರೀದಿದಾರರು ಯಾರು ಎಂಬ ಪ್ರಶ್ನೆಗೆ, ‘ನಾನೇ’ ಎಂದು ಉತ್ತರಿಸಿದ್ದ ಟ್ರಂಪ್​, “ಮೊದಲಿಗೆ ನಾನೇ. ಆದರೆ ಎರಡನೇ ಖರೀದಿದಾರರು ಯಾರಾಗುತ್ತಾರೆ ಎಂಬುದರ ಬಗ್ಗೆ ನನಗೆ ಮಾಹಿತಿಯಿಲ್ಲ. ಇನ್ನೆರೆಡು ವಾರಗಳಲ್ಲಿ ಗೋಲ್ಡ್ ಕಾರ್ಡ್​ ಖರೀದಿಗೆ ಲಭ್ಯವಿರಲಿದೆ” ಎಂದು ಹೇಳಿದ್ದರು.

EB-5 ವಲಸೆ ಹೂಡಿಕೆದಾರರ ವೀಸಾ

ಈ ಹೊಸ ಟ್ರಂಪ್​ ಗೋಲ್ಡ್ ಕಾರ್ಡ್ ಚಾಲ್ತಿಯಲ್ಲಿರುವ EB-5 ವಲಸೆ ಹೂಡಿಕೆದಾರರ ವೀಸಾ ಕಾರ್ಯಕ್ರಮವನ್ನು ಬದಲಾಯಿಸಲಿದೆ. ಇದು ಪ್ರಸ್ತುತ ವಿದೇಶಿ ಹೂಡಿಕೆದಾರರು ಉದ್ದೇಶಿತ ಉದ್ಯೋಗ ಪ್ರದೇಶಗಳಲ್ಲಿ (TEAs) ಇರುವ ಯೋಜನೆಗಳಲ್ಲಿ ಕನಿಷ್ಠ 8,00,000 ಡಾಲರ್​ ಅಥವಾ ಬೇರೆಡೆ 1.8 ಮಿಲಿಯನ್ ಡಾಲರ್​ ಹೂಡಿಕೆ ಮಾಡಿದರೆ ಗ್ರೀನ್ ಕಾರ್ಡ್‌ಗಳನ್ನು ಪಡೆಯಲು ಅನುಮತಿಸುತ್ತದೆ ಮತ್ತು ಕನಿಷ್ಠ ಹತ್ತು ಅಮೆರಿಕ ಉದ್ಯೋಗಗಳನ್ನು ಸೃಷ್ಟಿಸುತ್ತದೆ. EB-5 ವ್ಯವಸ್ಥೆಯನ್ನು ಟೀಕಿಸಿದ ಟ್ರಂಪ್, ಅದು ಅಸಮರ್ಥ ಮತ್ತು ಹಳೆಯದ್ದಾಗಿದೆ ಎಂದು ತಳ್ಳಿಹಾಕಿದ್ದಾರೆ,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net