ಭಕ್ತರ ಮೊರೆ ದೇವರಿಗೆ ಕೇಳಿಸಿತೆ? ಬಂದೇ ಬಿಟ್ಟಿತು ಗಂಟೆಗೆ ಸ್ವಯಂಚಾಲಿತ ಸಂವೇದಕ

Bell JPG
Published on

ಭೋಪಾಲ್: ಸೋಂಕು ಹರಡುವಿಕೆ ಭೀತಿಯಿಂದಾಗಿ ಭಕ್ತರು ದೇವಾಲಯದಲ್ಲಿ ಗಂಟೆ ಬಾರಿಸಲೂ ಭಯ ಪಡುತ್ತಿದ್ದರು. ಈಗ ಆ ಭೀತಿ ತಪ್ಪಿಸಲು ಗಂಟೆಗೆ ಸ್ವಯಂಚಾಲಿತ ಸಂವೇದಕ ಬಂದಿದೆ.

ಕರೊನಾವೈರಸ್ ಹರಡುವಿಕೆ ವಿರುದ್ಧ ಎಷ್ಟು ಮುಂಜಾಗೃತಾ ಕ್ರಮಗಳನ್ನು ಕೈಗೊಂಡರೂ ಕಡಿಮೆಯೇ. ಸ್ಪರ್ಶ ಸಂಪರ್ಕವಿಲ್ಲದೆ ಲಿಫ್ಟ್ ಬಳಕೆ, ಸ್ಯಾನಿಟೈಸರ್ ಸಿಂಪಡಿಸುವಿಕೆ ಎಲ್ಲವೂ ಬಂದದ್ದಾಯಿತು. ಇದೀಗ ದೇಗುಲಗಳಲ್ಲಿ ಗಂಟೆಯ ಸರದಿ.

ಮಧ್ಯಪ್ರದೇಶದಲ್ಲಿರುವ ಮಾಂಡ್​​ಸೌರ್ ಪಶುಪತಿನಾಥ ದೇವಾಲಯದಲ್ಲಿ ಸ್ಪರ್ಶ ಸಂಪರ್ಕವನ್ನು ತಪ್ಪಿಸುವ ಸಲುವಾಗಿ ಗಂಟೆಯನ್ನು ಮುಟ್ಟದೆ ಬಾರಿಸಲು ಸಾಧ್ಯವಾಗುವಂತೆ ದೇವಾಲಯದ ಘಂಟೆಯೊಂದಿಗೆ ಸ್ವಯಂಚಾಲಿತ ಸಂವೇದಕವನ್ನು ಅಳವಡಿಸಲಾಗಿದೆ.

"ಸಾಂಕ್ರಾಮಿಕ ರೋಗದ ಭೀತಿಯಿರುವ ಈ ದಿನಗಳಲ್ಲಿ ಭಕ್ತರು ಗಂಟೆಯನ್ನು ಮುಟ್ಟದೆ ಅದನ್ನು ಬಾರಿಸಲು ಒಂದು ಮಾರ್ಗ ಇರಬೇಕು ಎಂದು ನಾನು ಭಾವಿಸಿದ್ದೆ, ಆದ್ದರಿಂದ ನಾನು ಈ ಸಂವೇದಕವನ್ನು ಸ್ಥಾಪಿಸಿದೆ" ಎಂದು ಸಂವೇದಕವನ್ನು ಅಳವಡಿಸಿದ ನೆಹರು ಖಾನ್ ಹೇಳಿದ್ದಾರೆ.

“ಸಾಂಕ್ರಾಮಿಕ ರೋಗ ಹರಡುವ ಭೀತಿ ಇರುವ ಈ ಸಮಯದಲ್ಲಿ ಇದು ತುಂಬಾ ಸಹಾಯಕವಾಗಿದೆ. ನಾವು ದೇವರನ್ನು ಪ್ರಾರ್ಥಿಸುವಾಗ ಗಂಟೆ ಬಾರಿಸಿದರೆ ಮಾತ್ರ ನಮ್ಮ ಪ್ರಾರ್ಥನೆ ದೇವರಿಗೆ ಮುಟ್ಟುತ್ತದೆ ಎಂಬ ನಂಬಿಕೆ ಭಕ್ತರಲ್ಲಿದೆ. ಈ ರೀತಿಯ ಸಂವೇದಕವು ಗಂಟೆಯನ್ನು ಮುಟ್ಟದೆ ಬಾರಿಸಲು ನಮಗೆ ಸುಲಭಗೊಳಿಸಿದೆ. ರೋಗ ಹರಡುವಿಕೆ ವಿರುದ್ಧ ಜಾಗರೂಕರಾಗಿ ಇರಲೂ ಇದು ತುಂಬಾ ಉಪಯುಕ್ತವಾಗಿದೆ ಎಂದು ಭಕ್ತರು ಅಭಿಪ್ರಾಯಪಟ್ಟಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಈ ಮಾರ್ಗೋಪಾಯಕ್ಕೆ ಅಪಾರ ಮೆಚ್ಚುಗೆಯೂ ವ್ಯಕ್ತವಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net